ರಾಯಚೂರು: ತಿರುಪತಿ ತಿರುಮಲ ದೇವಸ್ಥಾನದ ಲಡ್ಡು (Tirupati Laddu) ಪ್ರಕರಣದಂಥ ಪ್ರಕರಣಗಳು ಮರುಕಳಿಸದಿರಲು ದೇಗುಲ, ಮಠಗಳನ್ನು ಮುಜರಾಯಿ ಇಲಾಖೆಯಿಂದ (Muzrai Department) ಮುಕ್ತಗೊಳಿಸಬೇಕು. ಇವುಗಳನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡಲಿ. ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲಿ ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ (Mantralaya Sri Subudhendra Teertha Swamiji) ಶ್ರೀಪಾದರು ಆಗ್ರಹಿಸಿದ್ದಾರೆ.
ತಿರುಪತಿ ತಿಮ್ಮಪ್ಪನ (Tirupati Tirumala Temple) ಲಾಡು ಪ್ರಸಾದಕ್ಕೆ ದನದ ಕೊಬ್ಬು (beef fat), ಪ್ರಾಣಿಜನ್ಯ ಕೊಬ್ಬು ಬಳಸಿದ ವಿವಾದದ ಕುರಿತು ರಾಯಚೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಅವರು ಆಕ್ರೋಶ ಹೊರಹಾಕಿದರು. ದೇವಸ್ಥಾನ, ಮಠಮಾನ್ಯಗಳನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡಲಿ ಎಂದರು.
ಮಠಮಾನ್ಯ, ದೇವಸ್ಥಾನಗಳು ಆಯಾ ಪ್ರಾಂತ್ಯದ ಭಕ್ತರಿಗೆ, ಸಂಪ್ರದಾಯಗಳಿಗೆ ಸಂಬಂಧಿಸಿದ ಶ್ರದ್ಧಾಕೇಂದ್ರಗಳು. ಇವುಗಳನ್ನು ರಾಜ್ಯ ರಾಜಧಾನಿಯಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ. ದೇಗುಲದಲ್ಲಿ ಸಮಸ್ಯೆ, ದೋಷ ಆದಾಗ ಸರ್ಕಾರ ಪರಿಶೀಲಿಸಬೇಕು. ಸುಮೋಟೋ ಹಾಕಿ ಅದನ್ನು ಸರಿಪಡಿಸುವ ಕೆಲಸವಷ್ಟೇ ಮಾಡಬೇಕು. ದೇಗುಲದ ವಿಚಾರದಲ್ಲಿ ತಲೆಹಾಕುವುದು, ಅಲ್ಲಿನ ಸಂಪ್ರದಾಯಗಳನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅಂಬೇಡ್ಕರ್ ಅವರು ನಮಗೆ ನೀಡಿದ ಪವಿತ್ರ ಸಂವಿಧಾನದಲ್ಲಿ ಇಂಥದಕ್ಕೆ ಅವಕಾಶ ಇಲ್ಲ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.
ತಿರುಪತಿ ಶ್ರೀನಿವಾಸನ ಸನ್ನಿಧಾನ ಹಿಂದೂಗಳ ವಿಶಿಷ್ಟವಾದ ಶ್ರದ್ಧಾಕೇಂದ್ರ. ಪ್ರಸಾದದಲ್ಲಿ ಕಳಪೆ ತುಪ್ಪ ಬಳಸಿರುವ ಬಗ್ಗೆ ಸರ್ಕಾರ ಸಮಗ್ರ ತನಿಖೆ ಕೈಗೊಳ್ಳಬೇಕು. ಇದು ಯಾರ ಅಚಾತುರ್ಯದಿಂದ ನಡೆದಿದೆ, ಯಾವಾಗಿನಿಂದ ನಡೆದಿದೆ ಎಂಬುದನ್ನು ತನಿಖೆ ನಡೆಸಬೇಕು. ಪ್ರಧಾನ ಮಂತ್ರಿಗಳು ಈ ವಿಚಾರದಲ್ಲಿ ಪ್ರವೇಶ ಮಾಡಿದ್ದಾರೆ. ಪ್ರಸ್ತುತ ಆಂಧ್ರ ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರವಾಗಿದ್ದಾರೆ. ಯಾರೇ ಮಾಡಿದ್ದರೂ ಇದು ಖಂಡನೀಯ. ಭಕ್ತರ ಶ್ರದ್ಧಾಕೇಂದ್ರದಲ್ಲಿ ಆಗಿದ್ದು ಹೇಯಕೃತ್ಯ, ಅಪಚಾರ. ಪ್ರಸಾದದಲ್ಲಿ ಈ ರೀತಿ ನಡೆದಿದ್ದನ್ನು ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಕಾನೂನು ರೀತ್ಯಾ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ನಿಜವಾಗಿಯೂ ಪ್ರಸಾದದಲ್ಲಿ ಕಲಬೆರಕೆ ಆಗಿದ್ದರೆ, ಪಶು ಕೊಬ್ಬು ಬೆರಕೆ ಆಗಿದ್ದರೆ, ಆ ಬಗ್ಗೆ ಪರಿಮಾರ್ಜನೆ ಆಗಬೇಕು. ತಿರುಪತಿಯಲ್ಲಿ ಏನೇನು ಕ್ರಮಗಳಿದ್ದಾವೋ ಅವು ನಡೆಯಬೇಕು. ನಾವೂ ಕೂಡ ಈ ಬಗ್ಗೆ ಚರ್ಚೆಗಳಲ್ಲಿ, ಶುದ್ಧೀಕರಣದಲ್ಲಿ ಭಾಗಿಯಾಗುತ್ತೇವೆ ಎಂದು ಅವರು ತಿಳಿಸಿದರು.
ಆರಾಧನೆ ವೇಳೆ ಮಂತ್ರಾಲಯಕ್ಕೆ ತಿರುಪತಿ ಲಡ್ಡು ಆಗಮಿಸುತ್ತದೆ. ಶ್ರೀನಿವಾಸ ದೇವರ ಶೇಷ ವಸ್ತ್ರ ಬರುವಾಗ ಪ್ರಸಾದ, ಮಂತ್ರಾಕ್ಷತೆ, ಲಡ್ಡು ಎಲ್ಲವೂ ಬರುತ್ತದೆ. ಆದರೆ ಅದು ಸಾರ್ವಜನಿಕರ ವಿತರಣೆ ಆಗುವುದಿಲ್ಲ. ಬಂದ ಪ್ರಸಾದವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ಯಾವ ದೇವಸ್ಥಾನಗಳ ಪ್ರಸಾದ ಬರುತ್ತದೋ ಅದನ್ನು ಇಲ್ಲಿ ಪರೀಕ್ಷಿಸಲಾಗುವುದಿಲ್ಲ ಎಂದರು.
ಆಂಧ್ರದ ಕರ್ನೂಲ್ ಜಿಲ್ಲೆಯ ವಿಜಯಾ ಡೈರಿಯಿಂದ ಮಂತ್ರಾಲಯಕ್ಕೆ ತುಪ್ಪ ತರಿಸುತ್ತೇವೆ. ಕೊರೊನಾಗೆ ಮೊದಲು ನಂದಿನಿ ಡೈರಿಯಿಂದಲೇ ತುಪ್ಪ ತರಿಸುತ್ತಿದ್ದೆವು. ಆದರೆ ಅದು ಎರಡು ರಾಜ್ಯಗಳನ್ನು ದಾಟಿ ಬರಬೇಕು. ಹೀಗಾಗಿ ವಿಜಯಾ ಡೈರಿಯಿಂದ ತರಿಸುತ್ತಿದ್ದೇವೆ. ಅದರ ಪರಿಶುದ್ಧತೆಯ ಕುರಿತು ಎಫ್ಸಿಐ ಲ್ಯಾಬ್ ರಿಪೋರ್ಟ್ ಪಡೆಯುತ್ತೇವೆ ಎಂದರು.