Friday, 22nd November 2024

Toxic Movie: ಯಶ್‌ ನಟನೆಯ ʼಟಾಕ್ಸಿಕ್ʼ ಶೂಟಿಂಗ್‌ಗಾಗಿ ನೂರಾರು ಮರಗಳಿಗೆ ಕೊಡಲಿ; ಕೇಸ್‌ ದಾಖಲಿಸಲು ಸಚಿವ ಸೂಚನೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ನಟನೆಯ ‘ಟಾಕ್ಸಿಕ್‌’ (Toxic Movie) ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ನಗರದ ಪೀಣ್ಯ ಬಳಿಯ ಎಚ್‌ಎಂಟಿಯ ಅರಣ್ಯ ಭೂಮಿಯಲ್ಲಿ ಟಾಕ್ಸಿಕ್‌ ಸಿನಿಮಾ ಚಿತ್ರೀಕರಣಕ್ಕಾಗಿ ನೂರಾರು ಮರಗಳ ಮಾರಣಹೋಮ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ತಪ್ಪಿತಸ್ಥರ ವಿರುದ್ಧ ಕೇಸ್‌ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಮರಗಳನ್ನು ಕಡಿದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ಸಚಿವ ಈಶ್ವರ್ ಖಂಡ್ರೆ, ಎಚ್‌ಎಂಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಅಪರಾಧ ಪ್ರಕರಣ ದಾಖಲಿಸಲು ಸೂಚನೆ

ಈ ಬಗ್ಗೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಅರಣ್ಯ ಸಚಿವರು ಪತ್ರ ಬರೆದಿದ್ದು,ಬೆಂಗಳೂರು ಪೀಣ್ಯ ಪ್ಲಾಂಟೇಷನ್ 1 ಮತ್ತು 2ರಲ್ಲಿ ಒಟ್ಟು 599 ಎಕರೆ ಮೀಸಲು ಅರಣ್ಯ ಎಂದು ಗೆಜೆಟ್ ಅಧಿಸೂಚನೆ ಆಗಿದ್ದು, ಇದನ್ನು 1960ರ ದಶಕದಲ್ಲಿ ಡಿನೋಟಿಫಿಕೇಷನ್ ಮಾಡದೆ ಕಾನೂನು ಬಾಹಿರವಾಗಿ ಎಚ್.ಎಂ.ಟಿ. ಸಂಸ್ಥೆಗೆ ದಾನ, ಮಂಜೂರು ಹೆಸರಲ್ಲಿ ಹಸ್ತಾಂತರಿಸಲಾಗಿದೆ. ಸುಪ್ರೀಂಕೋರ್ಟ್ ‘Once a forest is always a forest unless de-notified’ ಎಂದು ಹೇಳಿದ್ದು, ಡಿ ನೋಟಿಫಿಕೇಷನ್ ಆಗದ ಎಚ್‌ಎಂಟಿ ವಶದಲ್ಲಿರುವ ಭೂಮಿ ಅರಣ್ಯವೇ ಆಗಿದೆ. ಜತೆಗೆ ತನ್ನ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಎಚ್‌ಎಂಟಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದು, ಇಲ್ಲಿ ಅರಣ್ಯೇತರ ಚಟುವಟಿಕೆ ನಡೆಯುತ್ತಿರುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಮರ ಗಿಡಗಳನ್ನು ಕಡಿದಿರುವುದು ಉಪಗ್ರಹ ಚಿತ್ರದಿಂದ ಗೋಚರಿಸುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Digital Arrest : ಡಿಜಿಟಲ್‌ ಅರೆಸ್ಟ್‌ ಎಂದರೇನು? ಪ್ರಧಾನಿ ಮೋದಿಯೇ ಈ ಬಗ್ಗೆ ಎಚ್ಚರಿಸಿದ್ದೇಕೆ?

ಎಚ್‌ಎಂಟಿ ತನ್ನ ವಶದಲ್ಲಿರುವ ಅರಣ್ಯ ಭೂಮಿನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದನ್ನೂ ಗಮನಿಸಲಾಗಿದೆ. ಇನ್ನು ಕೆನರಾ ಬ್ಯಾಂಕ್‌ಗೆ ಎಚ್‌ಎಂಟಿ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್‌’ ಎಂಬ ಹೆಸರಿನ ಚಲನಚಿತ್ರಕ್ಕಾಗಿ ಹಲವು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಲಾಗಿದೆ. ಇದಕ್ಕಾಗಿ ಇಲ್ಲಿದ್ದ ನೂರಾರು ಮರ ಗಿಡ ಕಡಿಯಲಾಗಿದೆ.

ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ 2023ರ ಸೆ.1ರ ಉಪಗ್ರಹ ಚಿತ್ರ.

ನಿಯಮಾನುಸಾರ ಅನುಮತಿ ಇಲ್ಲದೆ ಇಲ್ಲದೆ ಮರ ಕಡಿಯುವುದು ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ ಗಿಡಗಳ ಅಕ್ರಮ ಕಡಿತಲೆ ದಂಡನೀಯ ಅಪರಾಧ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನು ಪಡೆದು, ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೇ. ಅನುಮತಿ ಕೊಟ್ಟಿದ್ದರೆ ಅರಣ್ಯ ಭೂಮಿಯಲ್ಲಿ ಮರ ಕಡಿತಲೆಗೆ ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಾಗೂ ಅನುಮತಿ ಇಲ್ಲದೆ ಮರ ಕಡಿತಲೆ ಮಾಡಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ 2024ರ ಫೆ.2ರ ಉಪಗ್ರಹ ಚಿತ್ರ