Wednesday, 13th November 2024

Traffic rule violations: ಸಂಚಾರ ನಿಯಮ ಉಲ್ಲಂಘನೆ; ಡೆಲಿವರಿ ಬಾಯ್‌ಗಳಿಂದ ಒಂದೇ ದಿನ 13 ಲಕ್ಷ ದಂಡ ವಸೂಲಿ!

Traffic rule violations

ವಿಶ್ವವಾಣಿ ವಿಶೇಷ, ಬೆಂಗಳೂರು
ಇತ್ತೀಚಿನ ದಿನದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ದಿನ ಬೆಳಗಾಗುವುದು ಡೆಲಿವರಿ ಬಾಯ್‌ಗಳಿಂದ ಹಾಗೂ ಅಂತ್ಯವಾಗುವುದೂ ಡೆಲಿವರಿ ಬಾಯ್‌ಗಳಿಂದ. ಚಾಕಲೇಟ್‌ನಿಂದ ಹಿಡಿದು ಔಷಧಗಳ ತನಕ ಕ್ಷಣ ಮಾತ್ರದಲ್ಲಿ ಮನೆಬಾಗಿಲಿಗೆ ತಲುಪಿಸುವ ಅದೆಷ್ಟೋ ಇ-ಕಾಮರ್ಸ್ ಸಂಸ್ಥೆಗಳು ಬೆಂಗಳೂರಿನಲ್ಲಿ ತಲೆ ಎತ್ತಿವೆ. ಆದರೆ, ಈ ‘ಧಾವಂತ’ದ ಕಾರಣಕ್ಕೆೆ ಬಡಪಾಯಿ ಡೆಲಿವರಿ ಬಾಯ್‌ಗಳಿಗೆ ಭಾರಿ ಪ್ರಮಾಣದ ದಂಡ (Traffic rule violations) ಬೀಳುವಂತಾಗಿದೆ.

ಹೌದು, ಐದತ್ತು ನಿಮಿಷದಲ್ಲಿ ಮನೆ ಬಾಗಿಲಿಗೆ ಗೃಹೋಪಯೋಗಿ ಸಾಮಗ್ರಿ, 15 ರಿಂದ 30 ನಿಮಿಷದೊಳಗೆ ನಾವು ಬಯಸಿದ ಹೋಟೆಲ್‌ನಿಂದ ಬರುವ ಆಹಾರವನ್ನು ತಗೆದುಕೊಂಡು ಬರುವ ಡೆಲಿವರಿ ಬಾಯ್‌ಗಳಿಗೆ ಶನಿವಾರ ಭಾರಿ ಪ್ರಮಾಣದ ದಂಡ ಬಿದ್ದಿರುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಆ್ಯಪ್ ಆಧಾರಿತ ಇ-ಟ್ಯಾಕ್ಸಿ, ಫುಡ್ ಡೆಲಿವರಿ ಮತ್ತಿತರ ಕಂಪನಿಗಳ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದರ ಕುರಿತು ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು, 2,670 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ನಗರದಾದ್ಯಂತ ಸಂಚಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸಂಚಾರ ಉಲ್ಲಂಘನೆಗಳಿಗೆ ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಈ ಪೈಕಿ ಡೆಲಿವರಿ ಬಾಯ್‌ಗಳಿಂದಲೇ 13 ಲಕ್ಷ ದಂಡ ವಸೂಲಿಯಾಗಿದೆ ಎಂದು ತಿಳಿದುಬಂದಿದೆ.

ಕಂಪನಿಗಳಿಂದ ಒತ್ತಡ:
ಇ-ಕಾಮರ್ಸ್ ಕಂಪನಿಗಳು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಳ್ಳದೇ ಇಂತಿಷ್ಟೇ ಸಮಯದಲ್ಲಿ ವಸ್ತುಗಳು ತಲುಪಲಿವೆ ಎನ್ನುವ ಭರವಸೆಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಅದರಲ್ಲಿಯೂ ಸ್ವಿಗ್ಗಿ ಹಾಗೂ ಜೊಮೊಟೋದಂತಹ ಆಹಾರ ಡೆಲಿವರಿ ಆ್ಯಪ್‌ಗಳು ಆಹಾರ ತಣ್ಣಗಾಗುವ ಮೊದಲೇ ನೀಡಬೇಕೆಂಬ ಧಾವಂತವನ್ನು ಡೆಲಿವರಿ ಬಾಯ್‌ಗಳ ಮೇಲೆ ಹೇರುತ್ತಾರೆ. ಒಂದು ವೇಳೆ ನಿಗದಿತ ಸಮಯಕ್ಕೆೆ ಆಹಾರ ಅಥವಾ ವಸ್ತುಗಳನ್ನು ತಲುಪಿಸದಿದ್ದರೆ ಡೆಲಿವರಿ ಬಾಯ್‌ಗಳಿಗೆ ಕಮಿಷನ್ ಕಟ್ ಮಾಡುತ್ತಾರೆ. ಇದರಿಂದ ಡೆಲಿವರಿ ಬಾಯ್‌ಗಳು ಜೀವದ ಹಂಗನ್ನು ತೊರೆದು, ಶೀಘ್ರ ಡೆಲಿವರಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.

ಈ ಪ್ರಮಾಣದಲ್ಲಿ ದಂಡ ವಿಧಿಸಲು ಕಾರಣವೇನು?

  • ಶೀಘ್ರ ಡೆಲಿವರಿ ಮಾಡಬೇಕೆಂಬ ಆತುರಕ್ಕೆೆ ಬಿದ್ದು ನಿಯಮ ಉಲ್ಲಂಘನೆ
  • ಹಲವು ಡೆಲಿವರಿ ಬಾಯ್ಸ್‌ ಬಾಡಿಗೆಗೆ ಗಾಡಿಗಳನ್ನು ಪಡೆದಿರುತ್ತಾರೆ; ಆದ್ದರಿಂದ ಕೆಲವೊಮ್ಮೆ ದಾಖಲೆಗಳಿರುವುದಿಲ್ಲ.
  • ಫುಡ್ ಅಥವಾ ಇನ್ನಾವುದೇ ವಸ್ತುಗಳನ್ನು ಅಂಗಡಿಯಿಂದ ಪಡೆದುಕೊಳ್ಳಲು ಫುಟ್‌ಪಾತ್‌ನಲ್ಲಿಯೇ ವಾಹನಗಳ ಪಾರ್ಕಿಂಗ್
  • ಇಡೀ ದಿನ ಹೆಲ್ಮೆಟ್ ಹಾಕುವುದರಿಂದ ಉಂಟಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ಹೆಲ್ಮೆೆಟ್ ರಹಿತ ಪ್ರಯಾಣ
  • ಸರಿಯಾದ ಸಮಯಕ್ಕೆೆ ಡೆಲಿವರಿ ಮಾಡಬೇಕೆಂಬ ಉದ್ದೇಶದಿಂದ ಸಿಗ್ನಲ್ ಜಂಪ್

ಯಾವೆಲ್ಲ ಪ್ರಕರಣದಲ್ಲಿ ದಂಡ ವಸೂಲಿ?

ಪ್ರಕರಣಗಳ ಸಂಖ್ಯೆೆ ದಂಡ
ಹೆಲ್ಮೆೆಟ್ ರಹಿತ ಚಾಲನೆ781 3,90,000 ರು.
ಹೆಲ್ಮೆೆಟ್ ರಹಿತ ಹಿಂಬದಿ ಸವಾರ 643 3,21,000 ರು.
ನೋ ಎಂಟ್ರಿ 404 2,03,000 ರು.
ಒನ್ ವೇ ರೈಡಿಂಗ್ 319 1,60,000 ರು.
ದೋಷಪೂರಿತ ನಂಬರ್ ಫಲಕ 119 60,500 ರು.
ನೋ ಪಾರ್ಕಿಂಗ್ 105 52,500 ರು.
ಚಾಲನೆ ಸಮಯದಲ್ಲಿ ಮೊಬೈಲ್‌ ಬಳಕೆ 26 39,000 ರು.
ತ್ರಿಪಲ್ ರೈಡಿಂಗ್ 52 26,000 ರು.
ಸಿಗ್ನಲ್ ಜಂಪ್ 45 22,500 ರು.
ಫುಟ್‌ಪಾತ್ ರೈಡಿಂಗ್ 44 22,000 ರು.
ಫುಟ್‌ಪಾತ್ ಪಾರ್ಕಿಂಗ್ 34 17,000 ರು.
ನಂಬರ್ ಪ್ಲೇಟ್ ರಹಿತ ವಾಹನ ಚಾಲನೆ 25 12,500 ರು.
ಇತರೆ ಉಲ್ಲಂಘನೆ 73 51,500 ರು.

ಈ ಸುದ್ದಿಯನ್ನೂ ಓದಿ | Karnataka Rain: ರಾಜ್ಯಾದ್ಯಂತ ಮುಂದಿನ 5 ದಿನ ಒಣ ಹವೆ, ಅಲ್ಲಲ್ಲಿ ಸಾಧಾರಣ ಮಳೆ ನಿರೀಕ್ಷೆ