Monday, 25th November 2024

Transport Strike: ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರ‌ ಮುಷ್ಕರಕ್ಕೆ ದಿನ ಫಿಕ್ಸ್

Transport Strike

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಕರ್ನಾಟಕ ರಾಜ್ಯ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸಲು ಸಾರಿಗೆ ನೌಕರರು (KSRTC, BMTC) ಮುಂದಾಗಿದ್ದಾರೆ. ಡಿಸೆಂಬರ್ 31ರಿಂದ ಸಾರಿಗೆ ಮುಷ್ಕರಕ್ಕೆ (Transport strike) ಈಗಾಗಲೇ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ.

ಡಿಸೆಂಬರ್-9 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಮಾಡಿ ಅಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ. ‘ಕೈಗಾರಿಕಾ ವಿವಾದ ಕಾಯಿದೆ’ ಸೆಕ್ಷನ್- 22 ರ ಪ್ರಕಾರ ಮುಷ್ಕರಕ್ಕೂ ಮುನ್ನ 21 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್- 9 ರಂದು ಸಿಎಂಗೆ ನೋಟಿಸ್ ಕೊಟ್ಟು ಡಿಸೆಂಬರ್- 31 ರಿಂದ ಸಾರಿಗೆ ಮುಷ್ಕರ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆರು ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ಸೇರಿ ಜಂಟಿ ಕ್ರಿಯಾ ಸಮಿತಿ ಮಾಡಿಕೊಂಡಿದ್ದು, ಆ‌ ಆರು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಸಿಎಂ ಉಡಾಫೆ ಮಾಡಿದರೆ ಬಸ್ ಸಂಚಾರ ಸ್ಥಗಿತಗೊಳ್ಳಲಿವೆ. ಈ ಹಿಂದೆಯೂ ಮೂರು ದಿನ ಮುಷ್ಕರ ಮಾಡಿದ ಮೇಲೆ ಸಿದ್ದರಾಮಯ್ಯ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದರು ಎಂದು ಸಾರಿಗೆ ನೌಕರರ ‌ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ.

ಕೆಎಸ್​ಆರ್​ಟಿಸಿ ಮುಷ್ಕರ ಹೇಗೆ ನಡೆಯುತ್ತದೆ ಎಂಬುದು ನಿಮಗೆ ಗೊತ್ತಿದೆ. ನಮ್ಮನ್ನು ಕರೆದು ಹವಾ ತೋರಿಸಿ ಮುಷ್ಕರ ವಾಪಸ್ಸು ಪಡೆಯಲು ಆಗದು. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಮುಷ್ಕರ ನಿರ್ಧಾರ ಹಿಂಪಡೆಯುತ್ತೇವೆ. ನಮ್ಮ ಜಂಟಿ ಕ್ರಿಯಾ ಸಮಿತಿಯ ಎಲ್ಲಾ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ. ನಮ್ಮ ಎಲ್ಲಾ ನೌಕರರು ಮುಷ್ಕರಕ್ಕೆ ಸಿದ್ಧರಾಗಲು ಸಮಾವೇಶ ಮಾಡುತ್ತೇವೆ. ಎಲ್ಲರಲ್ಲೂ ತಿಳಿವಳಿಕೆ ಮೂಡಿಸುತ್ತೇವೆ. ಬಹಳ ಯಶಸ್ವಿಯಾಗಿ ಮುಷ್ಕರ ಆಗಲಿದೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಸರ್ಕಾರಕ್ಕೆ ಸಾರಿಗೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

38 ತಿಂಗಳ ಅರಿಯರ್ಸ್ ಬಾಕಿ, ವೇತನ ಹೆಚ್ಚಳವೂ ಇಲ್ಲ

ರಾಜ್ಯ ಸರ್ಕಾರ ಕೆಎಸ್ಆರ್​ಟಿಸಿ, ಬಿಎಂಟಿಸಿ, ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣ ಬಿಡುಗಡೆ ಮಾಡಿಲ್ಲ. 2024 ಜನವರಿಯಿಂದ ನೌಕರರಿಗೆ ಸಂಬಳ ಹೆಚ್ಚಳ ಮಾಡಬೇಕಿತ್ತು. ಆದರೆ ನವೆಂಬರ್ ತಿಂಗಳು ಬಂದರೂ ಇನ್ನೂ ಈ ಬಗ್ಗೆ ‌ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ಅರಿಯರ್ಸ್ ಹಣವೇ 1750 ಕೋಟಿ ರುಪಾಯಿ ನೀಡಬೇಕಿದೆ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರುಪಾಯಿ ನೀಡಬೇಕಿದೆ. ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.