Sunday, 24th November 2024

Tribanadhari Barbarik Movie: ವಸಿಷ್ಠ ಸಿಂಹ ಅಭಿನಯದ ‘ತ್ರಿಬಾಣಧಾರಿ ಬಾರ್ಬರಿಕ್‌ʼ ಚಿತ್ರದ ಮೋಷನ್‍ ಪೋಸ್ಟರ್ ನೋಡಿ!

Tribanadhari Barbarik Movie

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊಸ ಆಲೋಚನೆಯ ನಿರ್ದೇಶಕರು ತಮ್ಮ ವಿಭಿನ್ನ ಮತ್ತು ವೈವಿಧ್ಯಮಯ ಕಥೆಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಕಂಟೆಂಟ್‍ ಆಧಾರಿತ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ವಾನರ ಸೆಲ್ಯುಲಾಯ್ಡ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹೆಜ್ಜೆ ಇಟ್ಟಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶದಿಂದ ಈ ಸಂಸ್ಥೆ ಹುಟ್ಟಿಕೊಂಡಿದ್ದು, ಒಂದಿಷ್ಟು ವೈವಿಧ್ಯಮಯ ಚಿತ್ರಗಳನ್ನು ನಿರ್ಮಿಸುತ್ತಿದೆ. ಅದರ ಮೊದಲ ಹಂತವಾಗಿ, ‘ತ್ರಿಬಾಣಧಾರಿ ಬಾರ್ಬರಿಕ್‌ʼ ಎಂಬ ಚಿತ್ರ (Tribanadhari Barbarik Movie) ತಯಾರಾಗುತ್ತಿದ್ದು, ಈ ಚಿತ್ರವನ್ನು ವಿಜಯಪಾಲ್‍ ರೆಡ್ಡಿ ಅಡಿಧಲ ನಿರ್ಮಿಸಿದರೆ, ಮೋಹನ್‍ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದಾರೆ. ಜನಪ್ರಿಯ ನಿರ್ದೇಶಕ ಮಾರುತಿ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಪ್ರತಿಭಾವಂತ ಕಲಾವಿದರ ಮತ್ತು ತಂತ್ರಜ್ಞರ ದಂಡೇ ಈ ಚಿತ್ರದಲ್ಲಿದೆ. ಕನ್ನಡಿಗ ವಸಿಷ್ಠ ಸಿಂಹ ಸಹ ಈ ಪ್ಯಾನ್ ಇಂಡಿಯಾ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ‘ತ್ರಿಬಾಣಧಾರಿ ಬಾರ್ಬರಿಕ್‌’ ಚಿತ್ರದ ಮೋಷನ್‍ ಪೋಸ್ಟರ್ ಬಿಡುಗಡೆಯಾಗಿದ್ದು, ಇದರ ಮೂಲಕ ಚಿತ್ರದ ಕಥಾವಸ್ತುವನ್ನು ಪರಿಚಯಿಸಲಾಗಿದೆ. ಪೌರಾಣಿಕ ಮತ್ತು ಸಾಮಾಜಿಕ ಅಂಶಗಳು ಬೆರೆತಿರುವ ಕಥೆ ಇದಾಗಿದೆ. ಭೀಮನ ಮೊಮ್ಮಗ ಮತ್ತು ಘಟೋತ್ಕಚನ ಮಗ ಬಾರ್ಬರಿಕನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಮೂರು ಬಾಣಗಳನ್ನು ಏಕಕಾಲಕ್ಕೆ ಹೂಡುವ ಬಾರ್ಬರಿಕನ ಅದ್ಭುತ ಪರಾಕ್ರಮವನ್ನು ಈ ಮೋಷನ್‍ ಪೋಸ್ಟರ್‌ನಲ್ಲಿ ವಿವರಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Winter Scarf Fashion Ideas: ಹೀಗಿರಲಿ ಚಳಿಗಾಲದ ನಿಮ್ಮ ಸ್ಕಾರ್ಫ್‌ ಸ್ಟೈಲಿಂಗ್‌!

ಈ ಜಗತ್ತು ಗಮನಿಸದ ಒಬ್ಬ ಮಹಾವೀರನ ಕಥೆ ಇದು ಎಂದು ಈ ಪೋಸ್ಟರ್‌ನಲ್ಲಿ ಬಣ್ಣಿಸಲಾಗಿದೆ. ಒಂದು ಕಡೆ ಪೌರಾಣಿಕ ಕಥೆ ಹೇಳುತ್ತಲೇ, ಇನ್ನೊಂದು ಕಡೆ ಆಧುನಿಕ ಸ್ಪರ್ಶ ಸಹ ನೀಡಲಾಗಿದೆ. ಗಾಂಢೀವಧಾರಿ ಅರ್ಜುನ, ಪಾಶುಪತಾಸ್ತ್ರಂ, ಬ್ರಹ್ಮಾಸ್ತ್ರಂ, ಗರುಡ ಪುರಾಣಂ ಮುಂತಾದ ಪುಸ್ತಕಗಳ ಜತೆಗೆ ಗನ್‍ ಸಹ ತೋರಿಸಲಾಗಿದೆ. ಈ ಮೂಲಕ ಪೌರಾಣಿಕ ಮತ್ತು ಸಮಕಾಲೀನ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಿರುವ ಸೂಚನೆ ನೀಡಲಾಗಿದೆ.

ಈ ಮೋಷನ್‍ ಪೋಸ್ಟರ್, ಚಿತ್ರದ ಬಗ್ಗೆ ನಿರ್ದೇಶಕರಿಗಿರುವ ಒಳನೋಟ ಮತ್ತು ಒಂದೊಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ನೀಡಬೇಕೆಂಬ ನಿರ್ಮಾಪಕರ ಬದ್ಧತೆಯನ್ನು ಎತ್ತಿಹಿಡಿಯುತ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇನ್ಫ್ಯೂಷನ್‍ ಬ್ಯಾಂಡ್‍ ಎಂಬ ಸಂಗೀತ ತಂಡವು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ವೀಡಿಯೋ ನೋಡುತ್ತಿದ್ದಂತೆಯೇ ಪ್ರೇಕ್ಷಕರಿಗೆ ರೋಮಾಂಚನ ಉಂಟಾಗುತ್ತದೆ. ಅವರ ಧ್ವನಿ, ಪ್ರೇಕ್ಷಕರ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡುತ್ತದೆ.

ʼತ್ರಿಬಾಣಧಾರಿ ಬಾರ್ಬರಿಕ್‌’ ಚಿತ್ರದಲ್ಲಿ ಸತ್ಯರಾಜ್‍, ವಸಿಷ್ಠ ಸಿಂಹ, ಸಂಚಿ ರೈ, ಸತ್ಯಂ ರಾಜೇಶ್‍, ಕ್ರಾಮತಿ ಕಿರಣ್‍, ಮೊಟ್ಟ ರಾಜೇಂದ್ರ, ವಿ.ಟಿ.ವಿ. ಗಣೇಶ್‍, ಉದಯಭಾನು ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಕುಶೇಂದರ್ ರಮೇಶ್‍ ರೆಡ್ಡಿ ಛಾಯಾಗ್ರಹಣ, ಮಾರ್ತಾಂಡ ವೆಂಕಟೇಶ್‍ ಸಂಕಲನ ಮತ್ತು ಶ್ರೀನಿವಾಸ್ ಪನ್ನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಮ್‍ ಸಂಕರ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rain: ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ ನಿರೀಕ್ಷೆ; ನ.14ರಂದು ಯೆಲ್ಲೋ ಅಲರ್ಟ್‌!

ಚಿತ್ರೀಕರಣ ಮುಗಿದು ಸದ್ಯ ಪೋಸ್ಟ್ ಪ್ರೊಡಕ್ಷನ್‍ ಹಂತದಲ್ಲಿರುವ ‘ತ್ರಿಬಾಣಧಾರಿ ಬಾರ್ಬರಿಕʼ ಚಿತ್ರವು ತನ್ನ ಪೋಸ್ಟರ್ ಮೂಲಕವೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಈ ಚಿತ್ರವು ಪ್ಯಾನ್‍ ಇಂಡಿಯಾ ಚಿತ್ರವಾಗಿ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.