ತುಮಕೂರು: ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ವಾಹನ ಚಾಲಕನ ಪತ್ನಿಗೆ ಸರ್ಕಾರದಿಂದ ಆದೇಶ ಬಂದ ಕ್ಷಣದಲ್ಲೇ ಅನುಕಂಪದ ಉದ್ಯೋಗ ನೀಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾನವೀಯತೆ ಮೆರೆದ ಘಟನೆ (Tumkur News) ಮಂಗಳವಾರ ನಡೆದಿದೆ.
ತುರುವೇಕೆರೆ ತಾಲೂಕು ಡಿ ಕಲ್ಕೆರೆಯ ಪರಮೇಶ್ವರ್ ಅವರು ಅಗ್ನಿಶಾಮಕ ವಾಹನದ ಚಾಲಕರಾಗಿ ಉದ್ಯೋಗದಲ್ಲಿದ್ದರು. ಕರ್ತವ್ಯ ಮುಗಿಸಿ ಮನೆಗೆ ಬರುವಾಗ 2023ರಲ್ಲಿ ಅಪಘಾತದಲ್ಲಿ ಮೃತರಾಗಿದ್ದರು. ಈ ಪ್ರಕರಣ ಇಲಾಖೆ ಹಂತದಲ್ಲಿ ಇತ್ಯರ್ಥವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಇಂದು ಆದೇಶವಾಗಿತ್ತು. ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಮೃತ ಪರಮೇಶ್ವರ್ ಅವರ ಪತ್ನಿ ರೋಹಿಣಿ ಅವರನ್ನು ಕಚೇರಿಗೆ ಕರೆದು ಮಾತನಾಡಿಸಿದರು.
ಮೂರು ವರ್ಷದ ತಮ್ಮ ಮಗು ಹಾಗೂ ಅತ್ತೆಯೊಂದಿಗೆ ಬಂದಿದ್ದ ರೋಹಿಣಿಯವರನ್ನು ತಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ಕೇವಲ ಅರ್ಧ ತಾಸಿನಲ್ಲಿ ಅನುಕಂಪದ ಉದ್ಯೋಗದ ನೇಮಕಾತಿ ಆದೇವನ್ನು ಸಂತ್ರಸ್ಥ ಮಹಿಳೆಗೆ ನೀಡಿದರು.
ಕುಣಿಗಲ್ ತಾಲೂಕಿನಲ್ಲಿ ಡಿ ವರ್ಗದ ನೌಕರರಾಗಿ ನೇಮಕಾತಿಗೆ ಆದೇಶಿಸಿ ರೋಹಿಣಿಯವರಿಗೆ ಆದೇಶ ಪತ್ರ ನೀಡಿದರು. ನೇಮಕಾತಿ ಆದೇ ಸಿದ್ಧವಾಗುವವರೆಗೆ ಅರ್ಧ ತಾಸು ತಮ್ಮಕಚೇರಿಯಲ್ಲಿ ಪಕ್ಕದಲ್ಲೇ ಕುರ್ಚಿಯಲ್ಲಿ ಕೂರಿಸಿಕೊಂಡ ಜಿಲ್ಲಾಧಿಕಾರಿಗಳು ಮಗುವಿಗೆ ಬಿಸ್ಕತ್ತು, ಚಾಕ್ಲೆಟ್ ನೀರು ತರಿಸಿ ಕೊಟ್ಟಿದ್ದು ಅವರ ಅಂತಃಕರಣದ ಭಾವವನ್ನು ತೋರಿತು.
ಈ ಸುದ್ದಿಯನ್ನೂ ಓದಿ | Mysuru News: ಮೈಸೂರಿನಲ್ಲಿ ನ.21ರಿಂದ ಡಿ.7ರವರೆಗೆ ಉಚಿತ ಮೊಣಕಾಲು ಮರುಜೋಡಣೆ ಶಸ್ತ್ರಚಿಕಿತ್ಸೆ ಪರೀಕ್ಷೆ
1 ಕೆಜಿ ತೂಕದ ಎರಡು ನವಜಾತ ಶಿಶುಗಳ ಸಮಗ್ರ ಆರೈಕೆ ಚಿಕಿತ್ಸೆ ಯಶಸ್ವಿ
ತುಮಕೂರು: ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದಲ್ಲಿ ಎರಡು ನವಜಾತ ಶಿಶುಗಳಿಗೆ ಸಮಗ್ರ ಆರೈಕೆ ಚಿಕಿತ್ಸೆ ನೀಡುವ ಮೂಲಕ, ಆ ಎರಡು ಮಕ್ಕಳಿಗೆ ಭವಿಷ್ಯದ ಆರೋಗ್ಯ ಸುಧಾರಣೆಗೆ ಮತ್ತು ಬೆಳವಣಿಗೆ ನೆರವಾಗಿದೆ. ಈ ಮಹತ್ವದ ಸಾಧನೆಯಲ್ಲಿ ವೈದ್ಯರ ತಂಡ ಗಮನಾರ್ಹವಾಗಿದೆ.
ಈ ಇಬ್ಬರು ಬಾಣಂತಿಯರು ಜಿಲ್ಲೆಯ ಗುಬ್ಬಿ ತಾಲೂಕಿನವರಾಗಿದ್ದಾರೆ. 27 ವಾರಗಳ ಗರ್ಭಾವಧಿಯ (ಸುಮಾರು ಆರರಿಂದ ಏಳು ತಿಂಗಳು ನಡುವಿನ) 1 ಕೆ.ಜಿ ತೂಕದ ಅವಳಿ ಶಿಶುಗಳ ಆರೈಕೆಯ ಪ್ರಕರಣದಲ್ಲಿ ಜನಿಸಿದ ಮಗುವಿಗೆ ತಕ್ಷಣವೇ ವೆಂಟಿಲೇಟರ್ ಸಹಾಯದ ಮೂಲಕ ಚಿಕಿತ್ಸೆ ನೀಡಲಾಯಿತು. ವೈದ್ಯಕೀಯ ತಂಡದ ಸಹಾಯದ ಮೂಲಕ ಜನಿಸಿದ ಐದು ದಿನದೊಳಗೆ ಶಿಶುಗಳು ವೆಂಟಿಲೇಟರ್‌ನಿಂದ ಹೊರಬಂದವು ಮತ್ತು ಒಂದು ವಾರದೊಳಗೆ ಹಾಲು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಇದೀಗ ಆ ಎರಡೂ ಶಿಶುಗಳು ಉತ್ತಮವಾಗಿ ಬೆಳೆಯುತ್ತಿದ್ದು, 2 ಕೆ.ಜಿ ತೂಕ ಹೊಂದಿವೆ ಮತ್ತು ಸಂಪೂರ್ಣವಾಗಿ ತಾಯಿಯ ಹಾಲನ್ನು ಸೇವಿಸುತ್ತಿವೆ.
ಮತ್ತೊಂದು ಪ್ರಕರಣದಲ್ಲಿ, 34 ವಾರಗಳಲ್ಲಿ ಮಾಸುವಿನ ಕಳಚುವಿಕೆ (ಅಬ್ರಪ್ಟಿಯೊ ಪ್ಲೆಸೆಂಟಾ)ಯ ಕಾರಣದಿಂದ ಜನಿಸಿದ ಅವಳಿಗಳು ಉಸಿರಾಟದ ತೊಂದರೆ ಅನುಭವಿಸುತ್ತಿದ್ದವು. ನುರಿತ ತಜ್ಞರ ಚಿಕಿತ್ಸೆಯ ನಂತರ ಒಂದೇ ದಿನದಲ್ಲಿ ವೆಂಟಿಲೇಟರ್‌ನಿಂದ ಹೊರಬಂದಿದೆ. ಪ್ರಸ್ತುತ ಆ ಎರಡು ಶಿಶುಗಳ ತೂಕ 1.8 ಕೆ. ಜಿಯಷ್ಟಿದ್ದು, ನೇರವಾಗಿ ತಾಯಿಯ ಹಾಲನ್ನು ಸೇವಿಸುತ್ತಿದ್ದು, ಆರೋಗ್ಯವಾಗಿವೆ.
ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗವು (Pediatrics) ತಾಯಿ-ತಂದೆಯರ ನೇರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ, ಶಿಶುಗಳ ಸಮಗ್ರ ಆರೈಕೆಯಲ್ಲಿ ಉತ್ತಮ ದೃಷ್ಟಿಕೋನವನ್ನು ಹೊಂದಿದೆ. ತಾಯಿ ಮತ್ತು ತಂದೆಯ ಕಾಂಗರೂ ಆರೈಕೆಯನ್ನು (Kangaroo Mother care) ಪ್ರೋತ್ಸಾಹಿಸುತ್ತಾ, ತಾಯಿ-ಮಗುವಿನ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಮತ್ತು ಶಿಶುಗಳ ಆರೋಗ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎನ್ನುತ್ತಾರೆ ವಿಭಾಗದ ಮುಖ್ಯಸ್ಥರಾದ ಕುಮಾರ್ ಜಿ.ವಿ. ಅವರು.
ಸಮಗ್ರ ಆರೋಗ್ಯ ಕಾಳಜಿಯಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ವೈದ್ಯರಾದ ಡಾ.ಅರುಣ್ ಕುಮಾರ್, ಡಾ.ರಸಂತ್ ಸುರೇಶ್, ಡಾ.ಜಮುನಾಶ್ರೀ, ಡಾ.ತುಂಗಾ, ಡಾ.ಹಾರೀಕ್, ಡಾ.ಪ್ರತ್ಯುಶಾ, ಡಾ. ಕಮಲ್ ಮತ್ತು ತಾಂತ್ರಿಕ ಸಿಬ್ಬಂದಿ ಶಿಶುಗಳಿಗೆ ಆರೈಕೆ ನೀಡುವಲ್ಲಿ ಶ್ರಮವಹಿಸಿದೆ.