Monday, 16th December 2024

Tumkur News: ತಿರುಪತಿ ವಿಐಪಿ ಪಾಸ್ ಪಡೆಯಲು ಗೃಹ ಸಚಿವರ ಸಹಿ ದುರ್ಬಳಕೆ ಮಾಡಿದ್ದ ಆರೋಪಿ ಅರೆಸ್ಟ್‌

Tumkur News

ತುಮಕೂರು: ತಿರುಪತಿ ದೇವಸ್ಥಾನಕ್ಕೆ ತೆರಳಲು ವಿಐಪಿ ಪಾಸ್‌ ಪಡೆಯಲು ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌, ಸಹಿ ಸೃಷ್ಟಿಸಿ ವಂಚಿಸಿದ್ದ ಬೆಂಗಳೂರು ಮೂಲದ ಆರೋಪಿಯನ್ನು ನಗರ ಪೊಲೀಸರು (Tumkur News) ಬಂಧಿಸಿದ್ದಾರೆ. ಸಿವಿಲ್ ಕಂಟ್ರಾಕ್ಟರ್ ಮಾರುತಿ(30) ಬಂಧಿತ ಆರೋಪಿ.

ಏನಿದು ಪ್ರಕರಣ?
ಗೃಹ ಸಚಿವ ಪರಮೇಶ್ವರ್ ಚಿತ್ರವನ್ನು ವಾಟ್ಸ್‌ಆ್ಯಪ್‌ ಡಿ.ಪಿ ಹಾಕಿಕೊಂಡಿದ್ದ ಆರೋಪಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿ ಸಚಿವರಂತೆ ಮಾತನಾಡಿ, ದೇವಸ್ಥಾನಕ್ಕೆ ಹೋಗಲು ವಿಐಪಿ ಪಾಸ್‌ ಪಡೆದು ವಂಚಿಸುತ್ತಿದ್ದ. ಹೀಗಾಗಿ ಬೆಂಗಳೂರಿನ ಯಲಹಂಕದ ಮಾರುತಿ ಮತ್ತು ಇತರರ ವಿರುದ್ಧ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೆ.ನಾಗಣ್ಣ ಅವರು ತುಮಕೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಸಚಿವರ ನಕಲಿ ಲೆಟರ್‌ ಹೆಡ್‌, ಸಹಿ ಸೃಷ್ಟಿಸಿ ಅದನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿ, ತಿರುಪತಿ ದೇವಸ್ಥಾನಕ್ಕೆ ಹೋಗಲು ವಿಐಪಿ ಪಾಸ್‌ ಪಡೆದು, ಸಚಿವರ ಹೆಸರು ದುರುಪಯೋಗ ಪಡಿಸಿಕೊಂಡಿದ್ದಾರೆ ಹಾಗೂ ಸಚಿವರ ಹೆಸರಿನಲ್ಲಿ ದೇವರ ದರ್ಶನಕ್ಕೆ ಹೋಗುವ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪ ಕೇಳಿಬಂದಿತ್ತು.

ಕೊಲೆ ಬೆದರಿಕೆ
ಈ ವಿಷಯದ ಬಗ್ಗೆ ಆರೋಪಿ ಹತ್ತಿರ ವಿಚಾರಿಸಿದ್ದು, ಇದು ಬಹಿರಂಗವಾದರೆ ನಿಮ್ಮನ್ನು ಕೊಲೆ ಮಾಡಿಸುತ್ತೇನೆ. ಇದನ್ನು ಮುಚ್ಚಿಹಾಕಲು ಎರಡು ಲಕ್ಷ ನೀಡಬೇಕು. ಗೃಹ ಇಲಾಖೆ ಮುಖ್ಯಸ್ಥರೇ ಇಂತಹ ಕೆಲಸ ಮಾಡಿಸಿದ್ದಾರೆ ಎಂದು ದೂರು ನೀಡುತ್ತೇನೆ. ಇದರ ಬಗ್ಗೆ ದೂರು ನೀಡಿದರೆ ನಿಮ್ಮನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಆರೋಪಿ ಬೆದರಿಕೆ ಹಾಕಿದ್ದಾರೆ ಎಂದು ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ ದೂರಿನಲ್ಲಿ ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ | Viral News: ಪನೀರ್‌ ಡಿಶ್‌ಗೆ 3000 ರೂ.; ಭಾರೀ ಸದ್ದು ಮಾಡ್ತಿದೆ ಇಂಡಿಯನ್‌ ರೆಸ್ಟೋರೆಂಟ್‍ ಬಿಲ್‌ನ ಫೋಟೊ

ಡ್ರೋನ್ ಪ್ರತಾಪ್ ಸ್ಫೋಟ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡಲು ಸಿಎಂ ಕಚೇರಿ ಸೂಚನೆ

Drone Prathap blast

ತುಮಕೂರು : ಕೃಷಿಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟಿಸಿ (Sodium blast case) ಸದ್ಯ ಜೈಲು ಪಾಲಾಗಿರುವ ಡ್ರೋನ್ ಪ್ರತಾಪ್‌ಗೆ (Drone Pratap) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮುಖ್ಯಮಂತ್ರಿಗಳ (Chief minister) ಕಚೇರಿ ಸಂಪೂರ್ಣ ವರದಿ ನೀಡಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಸೋಡಿಯಂ ಮೆಟಲ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧುಗಿರಿ ಸಿಪಿಐ ಕಚೇರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಆಗಮಿಸಿದ್ದಾರೆ. ಸಂಪೂರ್ಣ ವರದಿಗೆ ಸಿಎಂ ಕಚೇರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪೊಲೀಸರನ್ನು ಭೇಟಿಯಾಗಿದ್ದಾರೆ. ಮಧುಗಿರಿ ಸಿಪಿಐಯನ್ನು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಭೇಟಿಯಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೃಷಿ ಹೊಂಡ ಒಂದರಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಪೋಟ ಪ್ರಯೋಗ ಮಾಡಿದ್ದರು. ಈ ಸಂಬಂಧ ಕೇಸ್ ದಾಖಲಾಗಿತ್ತು. ಆನಂತರ ಅವರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು. ಇಂದು ಕೋರ್ಟ್‌ಗೆ ಡ್ರೋನ್ ಪ್ರತಾಪ್‌ರನ್ನು ಹಾಜರುಪಡಿಸಲಾಗಿದ್ದು, ಇದೀಗ ಡಿಸೆಂಬರ್ 26ರವರೆಗೆ ಅಂದರೆ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಡ್ರೋನ್ ಪ್ರತಾಪ್ ಕಳೆದ ಕೆಲವು ದಿನಗಳ ಹಿಂದೆ ಅನುಮತಿ ಪಡೆಯದೆ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಿಸಿದ್ದರಲ್ಲದೆ, ಇದನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಚಾರವಾಗಿ ಮಧುಗಿರಿ ತಾಲೂಕು ಮಿಡಿಗೇಶಿ ಠಾಣೆ ಪೋಲಿಸರು ಪ್ರತಾಪ್‌ ಅವರನ್ನು ಆರೆಸ್ಟ್ ಮಾಡಿದ್ದರು. ಬಳಿಕ ಅವರ ಇಬ್ಬರು ಸ್ನೇಹಿತರನ್ನು ಕೂಡ ಆರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದರು.

ಡ್ರೋನ್ ಪ್ರತಾಪ್ ಅವರನ್ನು ಪೊಲೀಸರು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಅವೆನ್ಯೂ ರಸ್ತೆಯಲ್ಲಿ ಪ್ರತಾಪ್‌ ಸೋಡಿಯಂ ಖರೀದಿಸಿದ್ದು, ಈ ಅಂಗಡಿಗೂ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ. ಜೊತೆಗೆ ಡ್ರೋನ್ ಪ್ರತಾಪ್ ಮನೆ, ಕಚೇರಿಗೂ ಕರೆದೊಯ್ದು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: Drone Pratap: ಕೃಷಿ ಹೊಂಡದಲ್ಲಿ ಸ್ಪೋಟ ಕೇಸ್, ಡ್ರೋನ್ ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ