Sunday, 15th December 2024

Tumkur News: ಪ್ರಯೋಗಾತ್ಮಕ ನಾಟಕಗಳ ಪ್ರದರ್ಶನ ಅಗತ್ಯವಿದೆ: ಡಾ. ಚಂದ್ರಶೇಖರ್

Tumkur News

ತುಮಕೂರು: ವೈಚಾರಿಕ ನಾಟಕಗಳು ಹಾಗೂ ಪ್ರಯೋಗಾತ್ಮಕ ನಾಟಕಗಳ ಪ್ರದರ್ಶನದ ಅಗತ್ಯವಿದೆ ಎಂದು ಕೈಗಾರಿಕೋದ್ಯಮಿ ಡಾ. ಚಂದ್ರಶೇಖರ್ ತಿಳಿಸಿದರು. ತುಮಕೂರಿನ (Tumkur News) ಝೆನ್ ಟೀಮ್ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನೀನಾಸಂ ನಾಟಕಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚು ಹೆಚ್ಚು ವೈಚಾರಿಕ ಹಾಗೂ ಪ್ರಯೋಗಾತ್ಮಕ ನಾಟಕಗಳನ್ನು ಸಜ್ಜುಗೊಳಿಸಿದವರಲ್ಲಿ ಕೆವಿ. ಸುಬ್ಬಣ್ಣನವರು ಪ್ರಮುಖರು ಎಂದು ತಿಳಿಸಿದ ಅವರು, ಮಲೆನಾಡಿನ ಒಂದು ಪುಟ್ಟ ಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಯೋಗಾತ್ಮಕ ನಾಟಕಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಸುಬ್ಬಣ್ಣನವರದ್ದು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Shirt Fashion: ಟಾಮ್‌ ಬಾಯ್‌ ಇಮೇಜ್‌‌‌ನಿಂದ ಗ್ಲಾಮರಸ್‌ ಕೆಟಗರಿಗೆ ಸೇರಿದ ಶರ್ಟ್ ಫ್ಯಾಷನ್‌!

ನೀನಾಸಂ ತಿರುಗಾಟಕ್ಕೆ ಈಗ ಸಾರ್ಥಕ 75 ವರ್ಷ. ಪ್ರಸಿದ್ಧ ರಂಗನಿರ್ದೇಶಕ ಬಿ.ವಿ. ಕಾರಂತ್ ಸೇರಿದಂತೆ ಹಲವಾರು ಪ್ರಮುಖ ನಿರ್ದೇಶಕರನ್ನು ಕರೆಸಿ ಅವರ ಕೈಯಲ್ಲಿ ನಾಟಕವನ್ನು ಕಟ್ಟಿಸಿದ ಕೀರ್ತಿ ಸುಬ್ಬಣ್ಣನವರದ್ದು ಎಂದರು.

ಕೆ.ವಿ. ಸುಬ್ಬಣ್ಣನವರನ್ನು ನೆನಪಿಸಿಕೊಳ್ಳುವ ಹಾಗೆ ನಮ್ಮ ತುಮಕೂರು ಗುಬ್ಬಿ ವೀರಣ್ಣನವರನ್ನು ನೆನಪಿಸಿಕೊಳ್ಳಬೇಕು. ಇವರಿಬ್ಬರು ರಂಗ ದಿಗ್ಗಜರು ಎಂದು ತಿಳಿಸಿದ ಅವರು, ಗುಬ್ಬಿ ವೀರಣ್ಣ ಗರಡಿಯಲ್ಲಿ ಪಳಗಿದ ಬಹಳಷ್ಟು ನಟರು ಇಂದು ಚಿತ್ರರಂಗದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ ಎಂದರು.

ನಟ ಹನುಮಂತೇಗೌಡ ಮಾತನಾಡಿ, ರಂಗಭೂಮಿಗೆ ಜನರ ಆಲೋಚನಾ ಕ್ರಮವನ್ನು ಬದಲಾಯಿಸುವ ಶಕ್ತಿ ಇದೆ. ಎಲ್ಲಾ ಕಲೆಗಳನ್ನು ಒಳಗೊಂಡಿರುವ ರಂಗಭೂಮಿ ಮೂಲಕ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿ ಎಂದು ಆಶಿಸಿದರು.

ನಾಟಕ ಕಲೆ ಎಂಬುದು ಅತ್ಯುನ್ನತವಾದದ್ದು

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ್ ಮಾತನಾಡಿ‌, ಟಿವಿ ಸೀರಿಯಲ್‌, ಮೊಬೈಲ್‌ ಅಬ್ಬರಗಳ ನಡುವೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿರುವುದು ಖುಷಿಯ ಸಂಗತಿ ಎಂದರು.

ನಾಟಕ ಕಲೆ ಎಂಬುದು ಅತ್ಯುನ್ನತವಾದದ್ದು. ಅಭಿನಯದ ಮೂಲಕ ಸಮಸ್ತ ಲೋಕವನ್ನು ಕಾಣಿಸುವ ಶಕ್ತಿ ರಂಗಭೂಮಿಗೆ ಇದೆ ಎಂದು ತಿಳಿಸಿದ ಅವರು, ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳಲಿ ಆ ಮೂಲಕ ರಂಗಭೂಮಿಯಲ್ಲಿ ತುಮಕೂರಿಗೆ ವಿಶ್ವ ಮಾನ್ಯತೆ ಸಿಗುವಂತಾಗಲಿ ಎಂದರು.

ಈ ಸುದ್ದಿಯನ್ನೂ ಓದಿ | HD Kumaraswamy: ಶಿರೂರು ಗುಡ್ಡ ಕುಸಿತ ದುರಂತ; ಮೃತನ ಪುತ್ರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗ

ಝೆನ್ ಟೀಮ್ ಮುಖ್ಯಸ್ಥ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿದರು.