Sunday, 15th December 2024

ಈ ಬಾರಿ ಎರಡೇ ದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ, ಜೂ.30 ರಂದು ಹಾಲ್ ಟಿಕೆಟ್ ಲಭ್ಯ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜುಲೈ 19 ಮತ್ತು  22ರಂದು ಎರಡು ದಿನಗಳು ಮಾತ್ರ ನಡೆಯಲಿದೆ. ರಾಜ್ಯದ ಸುಮಾರು 8,76,581 ವಿದ್ಯಾರ್ಥಿಗಳು 73,666 ಕೇಂದ್ರಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ.

ಜುಲೈ 19 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಮೊದಲ ಪತ್ರಿಕೆ (ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ) ಹಾಗೂ ಜುಲೈ 22 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ (ಭಾಷಾ ವಿಷಯಗಳು) ಪರೀಕ್ಷೆ ನಡೆಯಲಿದೆ.

ವಿಕಾಸಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹಾಗೂ ಅಧಿಕಾರಿ ಗಳು ಸೇರಿದಂತೆ ಮತ್ತಿತರರ ಜತೆ ವಿಡಿಯೋ ಕಾನರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ದಿನಾಂಕವನ್ನು ಅಕೃತವಾಗಿ ಘೋಷಣೆ ಮಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎರಡು ದಿನ ಮಾತ್ರ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಾಗುವುದು. ಪ್ರತಿಯೊಬ್ಬರೂ ಒಎಂಆರ್ ಶೀಟರ್‍ನಲ್ಲಿ ಉತ್ತರವನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.

ಕಳೆದ ಬಾರಿ ಆರು ದಿನಗಳ ಕಾಲ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಎರಡು ದಿನ ಮಾತ್ರ ನಡೆಸಲು ಇಲಾಖೆ ತೀರ್ಮಾನಿಸಿದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಹಾಗೂ ಪ್ರತಿ ಡೆಸ್ಕ್‍ಗೆ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನ ಸ್ಯಾನಿಟೈಜ್, ಮಾಸ್ಕ್ ಧರಿಸ ಬೇಕು, ಪರೀಕ್ಷೆ ಬರೆದು ಹೊರಹೋಗುವಾಗ ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿಗಳ ಪೋಷಕರು, ಸಂಬಂಕರು ಬಿಟ್ಟರೆ ಬೇರೆ ಯಾರೂ ಒಳ ಪ್ರವೇಶಿಸಲು ಅವಕಾಶವಿರುವುದಿಲ್ಲ. ಕೋವಿಡ್ ಸೋಂಕಿನ ಚಿಹ್ನೆಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೊಠಡಿಗೆ ಬರುವ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನಿಷ್ಠ ಪಕ್ಷ ಒಂದು ಡೋಸ್ ಲಸಿಕೆ ಪಡೆಯಲೇಬೇಕು. ಈವರೆಗೂ ಯಾರು ಪಡೆದಿಲ್ಲವೋ ಅವರು ಒಂದು ವಾರದೊಳಗೆ ಪಡೆಯಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಿರುವ ವಿದ್ಯಾರ್ಥಿಗಳು ಕೂಡ ತಾವು ಬಯಸಿದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಬಹುದು. ಈಗಾಗಲೇ ಈ ರೀತಿ 10 ಸಾವಿರ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಜೂನ್ ೩೦‌ ರಂದು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಶಾಲೆಗಳಿಗೆ ಕಳುಹಿಸ ಲಾಗುವುದು. ಆಯಾ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದರು.

ಈ ಬಾರಿ ಅನಗತ್ಯವಾಗಿ ಯಾರಾದರೂ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.