Friday, 20th September 2024

New Highway: ರಾಜ್ಯದಲ್ಲಿ ಮತ್ತೆರಡು ಹೆದ್ದಾರಿ ಯೋಜನೆ ಆರಂಭಿಸಲು ಮುಂದಾದ ಕೇಂದ್ರ

new highway

ನವದೆಹಲಿ: ಕರ್ನಾಟಕದಲ್ಲಿ (Karnataka) ಎರಡು ನೂತನ ಹೆದ್ದಾರಿ (New Highway) ಯೋಜನೆಗಳನ್ನು ಆರಂಭಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (Ministry of Road Transport & Highways) ಮುಂದಾಗಿದೆ. ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್‌ಪಿಜಿ) ಶುಕ್ರವಾರ ಪ್ರಮುಖ ಸಭೆ ನಡೆಸಿದ್ದು, ಇದರಲ್ಲಿ 18 ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಮೌಲ್ಯಮಾಪನ ಮಾಡಿದೆ. ಹಲವು ಹೊಸ ಹೆದ್ದಾರಿ ಯೋಜನೆಗಳನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಎರಡು ಹೈವೇ ಯೋಜನೆಗಳು ಕರ್ನಾಟಕಕ್ಕೆ ಬರಲಿವೆ.

ಸಾರಿಗೆ ಸಚಿವಾಲಯದ ಪ್ರಕಾರ ಕರ್ನಾಟಕದ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹತ್ತಾರು ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಬರಲಿವೆ. ಬೆಳಗಾವಿ ವ್ಯಾಪ್ತಿಯಲ್ಲಿ 4 ಪಥದ ರಿಂಗ್ ರೋಡ್ (NH848R) ನಿರ್ಮಾಣವಾಗಲಿದೆ. ಇದು 75.39 ಕಿಮೀ ವ್ಯಾಪಿಸಲಿದೆ. ಬೆಳಗಾವಿ ನಗರದ ದಟ್ಟಣೆಗೆ ಕಡಿವಾಣ ಹಾಕಲು ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ಈ ಮೂಲಕ ಜನದಟ್ಟಣೆ ಕಡಿಮೆ ಮಾಡಿ, ಪ್ರಯಾಣದ ಸಮಯವನ್ನು ಉಳಿಸುವುದು ಹಾಗೂ ಕರ್ನಾಟಕದ ಕೈಗಾರಿಕಾ ಕೇಂದ್ರಗಳ ಸಂಪರ್ಕವನ್ನು ಹೆಚ್ಚಿಸಲು ಗುರಿ ಹೊಂದಿರುವುದಾಗಿ ಸಚಿವಾಲಯ ತಿಳಿಸಿದೆ.

ತುಮಕೂರು ಜಿಲ್ಲೆಯಲ್ಲಿ 4 ಪಥದ ಹೆದ್ದಾರಿ (ಬೈಪಾಸ್) ಬರಲಿದೆ. ಪ್ರಮುಖ ಜಾಗದಲ್ಲಿ ಬೈಪಾಸ್ ನಿರ್ಮಾಣವಾಗಲಿದ್ದು, ಇಲ್ಲಿನ ಹೆದ್ದಾರಿ ಒಟ್ಟು 44.10 ಕಿಲೋಮೀಟರ್ ತುಮಕೂರು ಇರಲಿದೆ. ಇದರಿಂದ ಜಿಲ್ಲೆ ವ್ಯಾಪ್ತಿಯಲ್ಲಿ ದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಳಾಗುತ್ತದೆ.

ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸಲು, ಕೈಗಾರಿಕೆಗಳಿಗೆ ಸುಲಭ ಸಾರಿಗೆಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿರುವುದಾಗಿ ಸಚಿವಾಲಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಸದ್ಯ ಈ ಯೋಜನೆಗಳು ಆರಂಭಿಕ ಹಂತದಲ್ಲಿವೆ. ಇವುಗಳ ಅನುಷ್ಠಾನಕ್ಕೆ ಎಷ್ಟು ಅನುದಾನ ಸಿಗಲಿದೆ. ಯಾವಾಗಿನಿಂದ ಆರಂಭವಾಗಲಿದೆ. ಟೆಂಟರ್, ಯೋಜನೆ ಪೂರ್ಣ ಗಡುವು ಇನ್ನಿತರ ಅಧಿಕೃತ ಮಾಹಿತಿ ಶೀಘ್ರವೇ ಬಹಿರಂಗಗೊಳ್ಳಲಿದೆ.

ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಪ್ರಸಕ್ತ 2024 ಮತ್ತು 2025 ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 470 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗಾಗಿ 8000 ಕೋಟಿ ರೂ.ಗೂ ಹೆಚ್ಚು ಹಣ ಮಂಜೂರು ಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ತಿಳಿಸಿದ್ದರು.

ಅಲ್ಲದೇ 459 ಕಿಲೋಮೀಟರ್ ಹೊಸ ರಸ್ತೆ ನಿರ್ಮಾಣ ಮಾಡಲು ತಿರ್ಮಾನಿಸಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಸುಮಾರು 15ಕೋಟಿ ರೂಪಾಯಿ ನೀಡಿದೆ ಎಂದು ಮಾಹಿತಿ ನೀಡಿದ್ದರು.

ಇದೆಲ್ಲ ನೋಡಿದರೆ ಮುಂದಿನ ದಿನಗಳಲ್ಲಿ ರಾಜ್ಯಗಳಲ್ಲಿ ಹಾಲಿ ರಸ್ತೆಗಳು, ಹಾಳಾದ ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ. ಹೊಸ ರಸ್ತೆಗಳ ಜೊತೆಗೆ ನೂತನ ಹೆದ್ದಾರಿ ಯೋಜನೆಗಳ ಕಾಮಗಾರಿಗಳು ಆರಂಭಗೊಳ್ಳುವುದು ಅಧಿಕೃತಗೊಂಡಿದೆ.

ಈ ಸುದ್ದಿ ಓದಿ: ಹೆದ್ದಾರಿ ದುರಂತಕ್ಕೆ ಅಧಿಕಾರಿಗಳು ಹೊಣೆ