Friday, 22nd November 2024

ಯು ಟರ್ನ್‌ ಹೊಡೆದ ನಾಗರಾ‌ಜ್

ಕಸಾಪ ಚುನಾವಣೆ ಗೋಪಾಲಗೌಡರಿಗೆ ಜೈ, ಸ್ಪರ್ಧೆಯಿಲ್ಲ

ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್

ಕೋಲಾರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆಗೆ ನಾಮಪತ್ರ ಹಾಕುವ ಮೂಲಕ ಅಬ್ಬರ ನಡೆಸಿದ್ದ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಅವರು ಹಠಾತ್ ಬೆಳವಣಿಗೆಯಲ್ಲಿ ನಾಮಪತ್ರ ವಾಪಸ್ ಪಡೆಯುವುದರೊಂದಿಗೆ ಯೂ ಟರ್ನ್ ಹೊಡೆ ದಿದ್ದಾರೆ.

ಕಸಾಪ ಹಾಲಿ ಅಧ್ಯಕ್ಷ ನಾಗಾನಂದ್ ಅವರು ಲೆಕ್ಕಪತ್ರ ಮಂಡಿಸಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಆಡಳಿತ ನಡೆಸಿದ ಕಾರಣ ಪಾರದರ್ಶಕತೆಗೆ ಭಂಗ ಬಂದಿದೆ, ಕನಿಷ್ಟ ಸಾರ್ವಜನಿಕರಿಗಾದರೂ ಲೆಕ್ಕ ಕೊಡುವ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಕಸಾಪದಿಂದ ಹೊರಗೆಳೆದು ಕಾಲೇಜ್‌ಗೆ ಪಾಠ ಮಾಡಲು ಕಳಿಸುತ್ತೇನೆ ಎಂದು ತೊಡೆ ತಟ್ಟಿದ್ದ ನಾಗರಾಜ್ ಆಶ್ಚರ್ಯಕರ ಬೆಳವಣಿಗೆಯಲ್ಲಿ ಪ್ರತಿಸ್ಪರ್ಧಿ ಗೋಪಾಲಗೌಡರ ಜತೆಗೂಡಿ ಸುದ್ದಿಗೋಷ್ಠಿ ನಡೆಸಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಹಿಂದೆಗೆದುಕೊಳ್ಳುವ ಮೂಲಕ ಚುನಾವಣೆಗೂ ಮೊದಲೇ ಶಸ್ತ್ರತ್ಯಾಗ ಮಾಡಿದ್ದಾರೆ.

ಜೆಜಿಎನ್‌ಗೆ ಕೈ: ನಾಗರಾಜ್ ಜತೆಯಲ್ಲಿದ್ದು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಜಾಕ್ ಹಾಕಿದ್ದ ಬಹುತೇಕರು ಹಣದ ಕುಳ ಗೋಪಾಲಗೌಡ ಕ್ಯಾಂಪ್‌ನತ್ತ ವಾಲಿದ್ದು ಜೆಜಿಎನ್‌ಗೆ ಸುಸ್ತು ಹೊಡೆಸಿತ್ತು. ಅಷ್ಟೇನೂ ಹಣಬಲವಿಲ್ಲದ ನಾಗರಾಜ್‌ಗೆ ಇದ್ದ
ಅಲ್ಪಸ್ವಲ್ಪ ಜನಬಲವೂ ಕೈಕೊಟ್ಟಿದ್ದರಿಂದಾಗಿ ಚುನಾವಣಾ ತಂತ್ರಗಾರಿಕೆ ಅರ್ಥ ಆಗಿತ್ತು. ಹೀಗಾಗಿ ಭಾನುವಾರ ರಾತ್ರಿ ಬಂದ ಸಂಧಾನದ ಕರೆಗೆ ತಲೆ ಬಾಗಿದ್ದಾರೆ ಎಂಬುದು ವಿರೋಧಿ ಬಣದ ವರ್ತಮಾನ.

ಆದ್ದರಿಂದಲೇ ತಾರಾತೂರಿಯಲ್ಲಿ ಪ್ರತಿಸ್ಪರ್ಧಿ ಗೋಪಾಲಗೌಡರೊಂದಿಗೆ ಜಂಟಿ ಪ್ರೆಸ್‌ಮಿಟ್ ಮಾಡಿದ ನಾಗರಾಜ್ ನನ್ನೆಲ್ಲಾ ಆಶಯಗಳನ್ನು ನೆರವೇರಿಸುವುದಾಗಿ ಮುಂದೆ ಬಂದಿರುವ ಅಭ್ಯರ್ಥಿ ಗೋಪಾಲಗೌಡರ ಪರವಾಗಿ ನಿಲ್ಲುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ರಾಜಕೀಯ ಎಂಟ್ರಿ: ಸಾರ್ವಜನಿಕರಿಗೆ ತಿಳಿಯದೆಯೇ ಕಸಾಪ ಚುನಾವಣೆ ನಡೆದುಹೋಗುತ್ತಿದ್ದ ಕಾಲವೊಂದಿತ್ತು. ಕಳೆದ ಒಂದು ದಶಕದಿಂದ ರಾಜಕೀಯ ಪ್ರವೇಶ ಮಾಡಿದ್ದರಿಂದಾಗಿ ಜಿದ್ದಾಜಿದ್ದಿ ಏರ್ಪಡುತ್ತಿದ್ದು ಈಗಂತೂ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬ್ಯಾಟಪ್ಪ ಅವರ ಪುತ್ರ ಗೋಪಾಲಗೌಡರು ಸ್ಪರ್ಧೆ ಮಾಡಿರುವುದರಿಂದಾಗಿ ರಣಕಣ ನಿರ್ಮಾಣ ಆಗಿದೆ. ರಾಜಕಾರಣದ ಜತೆಗೆ ಜಾತಿ ಬಲಾಬಲದ ಪ್ರದರ್ಶನವೂ ನಡೆಯುತ್ತಿರುವುದು ಸಾಹಿತ್ಯ ಲೋಕದ ಜಂಗಾಬಲವನ್ನೇ ಅಲುಗಾಡಿಸುವಂತೆ ಮಾಡಿದೆ. ಇಷ್ಟು ದಿನ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಜಾತಿ ಮತ್ತು ರಾಜಕೀಯ ಪ್ರಭಾವ ಇದೀಗ ಬೀದಿಗೆ ಬಂದಿದ್ದು ಜಿಲ್ಲೆಯ ಕೆಲ ರಾಜಕಾರಣಿಗಳು ಈಗಾಗಲೇ ಗೋಪಾಲಗೌಡರ ಪರವಾಗಿ ಪ್ರಚಾರ ಆರಂಭಿಸಿರುವುದು ವಿರೋಧಿ ಪಾಳೆಯದಲ್ಲಿ ತಲ್ಲಣ ಎಬ್ಬಿಸಿರುವುದಂತೂ ಸತ್ಯ.

***

ನನ್ನ ಸಾಧನೆ ಮತ್ತು ಮತದಾರರ ಬೆಂಬಲ ಕಂಡು ಕಂಗೆಟ್ಟು ನನ್ನನ್ನು ಮಣಿಸಲು ಸಾಧ್ಯವಿಲ್ಲ ಎಂದು ಮನದಟ್ಟಾಗಿ ನಾಗರಾಜ್ ಮತ್ತು ಗೋಪಾಲಗೌಡ ಒಂದಾಗಿದ್ದಾರೆ. ಮತದಾರರು ಇವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು ಘಟ ಬಂಧನದಿಂದ ಪ್ರಯೋಜನವಿಲ್ಲ ಎಂಬುದು ಅಂತಿಮವಾಗಿ ಅರ್ಥ ಆಗುತ್ತದೆ.

– ನಾಗಾನಂದ ಕೆಂಪರಾಜ್ ಕಸಾಪ ಕೋಲಾರ
ಜಿಲ್ಲಾಧ್ಯಕ್ಷರ ಸ್ಥಾನದ ಅಭ್ಯರ್ಥಿ