Friday, 20th September 2024

Ultraviolette Scooter : ಅಲ್ಟ್ರಾವಯೊಲೆಟ್‌ ಇ.ವಿ. ಮೋಟಾರ್‌ ಸೈಕಲ್‌; ಸೆ.24ರಂದು ರಫ್ತಿಗೆ ಚಾಲನೆ

Ultraviolet E.V. motorcycle

ಬೆಂಗಳೂರು: ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್‌ ಕಂಪನಿಯು ತಯಾರಿಸುವ ವಿದ್ಯುತ್‌ ಚಾಲಿತ ಮೋಟಾರು ಸೈಕಲ್‌ಗಳನ್ನು (Ultraviolette Scooter) ಯೂರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಸೆ.24ರಂದು ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿರುವ ಅವರು, ʻನಮ್ಮವರ ಈ ಸಾಹಸವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದುವರಿದ ರಾಷ್ಟ್ರಗಳಿಗೆ ಎಫ್77-ಸ್ಪೋರ್ಟ್ಸ್‌ ಸ್ತರದ ಇ.ವಿ. ಮೋಟಾರ್‌ ಸೈಕಲ್ಲುಗಳ ರಫ್ತು ಭಾರತದಿಂದ ಇದೇ ಮೊಟ್ಟಮೊದಲ ವಿಕ್ರಮವಾಗಿದೆ. ಅಲ್ಟ್ರಾವಯೊಲೆಟ್‌ ತಯಾರಿತ ಮೋಟಾರ್‌ ಸೈಕಲ್ಲುಗಳನ್ನು ಯೂರೋಪ್‌ ಖಂಡದ ಜರ್ಮನಿ, ಇಟಲಿ, ಟರ್ಕಿ ಮತ್ತು ಸ್ಪೇನ್‌ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು. ಈ ವಾಹನಗಳನ್ನು ಜಿಗಣಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆʼ ಎಂದಿದ್ದಾರೆ.

ಈ ಮೋಟಾರ್‌ ಸೈಕಲ್ಲುಗಳ ಬೆಲೆ 2.99 ಲಕ್ಷ ರೂ.ಗಳಾಗಿದ್ದು ಈಗಾಗಲೇ ಸ್ಥಳೀಯವಾಗಿಯೂ ಲಭ್ಯವಿದೆ. ಒಂದು ಸಲ ಚಾರ್ಜ್‌ ಮಾಡಿದರೆ 323 ಕಿ.ಮೀ. ಚಲಾಯಿಸಬಹುದು. ಜತೆಗೆ ಯುಎನ್38.3 ದರ್ಜೆಯ ಉತ್ಕೃಷ್ಟ ಬ್ಯಾಟರಿ ಇದರಲ್ಲಿ ಇರಲಿದ್ದು, ಇದು ಎ1 ಕ್ಯಾಟಗರಿಗೆ ಸೇರಿದೆ. ಈ ಮೋಟಾರ್‌ ಸೈಕಲ್ಲುಗಳ ರಫ್ತು ವಹಿವಾಟಿನಿಂದ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಬಲ ಬರಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: Honda Activa : ದಕ್ಷಿಣ ಭಾರತದಲ್ಲಿ 1 ಕೋಟಿ ಹೋಂಡಾ ಆಕ್ಟಿವಾ ಸ್ಕೂಟರ್‌ ಮಾರಾಟ, ಇದು ವಿಶೇಷ ದಾಖಲೆ

ದೊಡ್ಡ ಪ್ರಮಾಣದ ಉತ್ಪಾದನಾ ಘಟಕ ಸ್ಥಾಪಿಸಲು ಕೈಗಾರಿಕಾ ನಿವೇಶನ ಕೊಡಲಾಗುವುದು. ಯಾವ ಜಿಲ್ಲೆಯಾದರೂ ಪರವಾಗಿಲ್ಲ. ವಿಜಯಪುರದಲ್ಲಿ ಉದ್ಯಮ ಸ್ಥಾಪಿಸಿದರೂ ಬೆಂಬಲ ನೀಡಲಾಗುವುದು ಎಂದು ಸಚಿವರು ಹೇಳಿದರು.

ಅಲ್ಟ್ರಾವಯೊಲೆಟ್‌ ಕಂಪನಿಯ ಪರವಾಗಿ ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀರಜ್‌ ರಾಜಮೋಹನ್‌, ಸಹಾಯಕ ಉಪಾಧ್ಯಕ್ಷ ಧೀರಜ್ ಶೆಟ್ಟಿ ಅವರು ಸಚಿವರಿಗೆ ಇ.ವಿ. ಮೋಟಾರ್‌ ಸೈಕಲ್ಲನ್ನು ತೋರಿಸಿ, ಅದರ ವೈಶಿಷ್ಟ್ಯಗಳನ್ನು ವಿವರಿಸಿದರು.