Sunday, 24th November 2024

HD Kumaraswamy : ನನ್ನವಿರುದ್ಧ ಟೂಲ್ ಕಿಟ್ ಷಡ್ಯಂತ್ರ ನಡೆಸುತ್ತಿದೆ ಕಾಂಗ್ರೆಸ್ ಸರ್ಕಾರ; ಎಚ್.ಡಿ. ಕುಮಾರಸ್ವಾಮಿ

HD Kumaraswamy

ಮೈಸೂರು: ನಾನು ಕೇಂದ್ರ ಸಚಿವನಾಗಿದ್ದು ಇವರಿಗೆ ತಡೆಯಲು ಆಗುತ್ತಿಲ್ಲ. ಹೇಗಾದರೂ ನನ್ನನ್ನು ಕಟ್ಟಿ ಹಾಕಲು ಇವರು ಹಣಿಸುತ್ತಲೇ ಇದ್ದಾರೆ. ನನ್ನ ವಿರುದ್ಧ ಒಂದು ವ್ಯವಸ್ಥಿತ ಟೂಲ್ ಕಿಟ್ (Tool Kit) ರೆಡಿ ಮಾಡಿದ್ದಾರೆ. ಅದನ್ನೇ ಸಚಿವರುಗಳು ಬಾಯಿಪಾಠ ಮಾಡಿದ್ದಾರೆ. ಅದೊಂದು ಸ್ಕ್ರಿಪ್ಟೆಡ್ಡ್ ಮಾಧ್ಯಮಗೋಷ್ಠಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆರೋಪಿಸಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಚಿವರು, ತಮ್ಮ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮಾಡಲು ಸಚಿವರಿಗೆ ಬರೆದುಕೊಡಲಾಗಿದ್ದ ಟೂಲ್ ಕಿಟ್ ಪ್ರತಿಯನ್ನು ಮಾಧ್ಯಮಗಳ ಮುಂದೆ ಅವರು ಪ್ರದರ್ಶಿಸಿದರು.

ಸರಿಯಾಗಿ ಸ್ಕ್ರಿಪ್ಟ್ ಬರೆದು ಕೊಟ್ಟಿಲ್ಲ

ಮಾಧ್ಯಮಗೋಷ್ಠಿ ನಡೆಸಿದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರಿಗೆ ಯಾರೋ ಸರಿಯಾಗಿ ಸ್ಕ್ರಿಪ್ಟ್ ಬರೆದು ಕೊಟ್ಟಿಲ್ಲ. ಅವರು ನನ್ನ ವಿರುದ್ಧ ಸುಳ್ಳಿನ ಕಥೆಯನ್ನೇ ಕಟ್ಟಿದ್ದಾರೆ. ನಾನು ಎಲ್ಲೂ ಕದ್ದು ಹೋಗುವ ಪ್ರಶ್ನೆಯೇ ಇಲ್ಲ. ಸುಳ್ಳು ಹೇಳಿಕೊಂಡು ಬೇರೆಯವರ ನೆರಳನ್ನು ತೆಗೆದುಕೊಳ್ಳುವ ಇವರಂತೆ ನಾನಲ್ಲ ಎಂದು ಗುಡುಗಿದರು.

ಈ ಸುದ್ದಿಯನ್ನೂ ಓದಿ | Nipah Virus: ನಿಫಾ ಸೋಂಕು ಆತಂಕ, ಬೆಂಗಳೂರಿನಲ್ಲಿ 41 ಜನರಿಗೆ ಹೋಮ್‌ ಕ್ವಾರಂಟೈನ್

ಇಡೀ ಸರ್ಕಾರದ ಟಾರ್ಗೆಟ್ ನಾನೇ ಆಗಿದ್ದೇನೆ

ನಾನು ಕೇಂದ್ರ ಮಾತ್ರಿಯಾಗಿದ್ದೇ ಇವರಿಗೆ ಸಂಕಟ ಶುರುವಾಗಿದೆ. ನನ್ನ ವಿರುದ್ಧ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಸಾಲು ಸಾಲಾಗಿ ಟೀಕೆ ಮಾಡುತ್ತಿದ್ದಾರೆ. ಇಡೀ ಸರ್ಕಾರದ ಟಾರ್ಗೆಟ್ ನಾನೇ ಆಗಿದ್ದೇನೆ ಎಂದು ಅವರು ಕಿಡಿಕಾರಿದರು.

ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಪ್ರಹಾರ ನಡೆಸಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಮಿಸ್ಟರ್ ಕೃಷ್ಣ ಭೈರೇಗೌಡ.. ನನ್ನನ್ನು ಅಲುಗಾಡಿಸಲು ನಿಮ್ಮಿಂದ ಸಾಧ್ಯವಿಲ್ಲ. ನೀವು ಏನೆಲ್ಲ ಷಡ್ಯಂತ್ರ ಮಾಡಿದರೂ ನನ್ನ ಬಗ್ಗೆ ಏನೂ ಸಿಗುವುದಿಲ್ಲ. ಕಂದಾಯ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ, ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮದೆಲ್ಲಾ ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೃಷ್ಣ ಭೈರೇಗೌಡರೇ, ಮಾಧ್ಯಮಗೋಷ್ಠಿಗೂ ಮೊದಲು ಈ ಪ್ರಕರಣದ ಬಗ್ಗೆ, ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕಿತ್ತು ಅಲ್ಲವೇ? ಎಂದು ಅವರಿಗೆ ಟಾಂಗ್ ಕೊಟ್ಟರು.

ಅನೇಕ ಅಕ್ರಮಗಳಲ್ಲಿ ಸರ್ಕಾರ ತೊಡಗಿದೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ವರ್ಗಾವಣೆ ದಂಧೆ ಸೇರಿ ಅನೇಕ ಅಕ್ರಮಗಳಲ್ಲಿ ಸರ್ಕಾರ ತೊಡಗಿದೆ. ಪ್ರತಿಪಕ್ಷದಲ್ಲಿ ಇರುವ ನಾನು ಸಹಜವಾಗಿಯೇ ಪ್ರಶ್ನೆ ಮಾಡಿದ್ದೇನೆ. ಅದೇ ಅಪರಾಧ ಆಗಿದೆ ಇವರಿಗೆ. ನಾನು ಸಿದ್ದರಾಮಯ್ಯ ಅವರಂತೆ ಹಲ್ಕಾ ಕೆಲಸ ಮಾಡಿಲ್ಲ ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.

ಆರೋಪ ಮಾಡಿದವರ ವಿರುದ್ಧವೇ ಪ್ರತ್ಯಾರೋಪ

ಮುಡಾ ಹಗರಣದಲ್ಲಿ ಸರ್ಕಾರಿ ಜಮೀನನ್ನು ಹೇಗೆ ಕಬಳಿಸಿದ್ದಾರೆ ಎಂಬುದನ್ನು ದಾಖಲೆಗಳೇ ಜಗಜ್ಜಾಹೀರು ಮಾಡಿವೆ. ಆದರೆ, ಅದನ್ನು ಮುಚ್ಚಿಹಾಕಿಕೊಳ್ಳಲು ಆರೋಪ ಮಾಡಿದವರ ವಿರುದ್ಧವೇ ಪ್ರತ್ಯಾರೋಪ ಮಾಡಲಾಗುತ್ತಿದೆ. ಇದು ಇವರ ಮನಸ್ಥಿತಿ ಎಂದು ಅವರು ಟೀಕಿಸಿದರು.

ನನ್ನ ವಿರುದ್ಧದ ಪ್ರಕರಣಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೂ ವ್ಯತ್ಯಾಸವಿದೆ. ಅವರಂತೆ ನಾನು ಹಲ್ಕಾ ಕೆಲಸ ಮಾಡಿಲ್ಲ. ನನ್ನ ಪ್ರಕರಣದ ಬಗ್ಗೆ ತನಿಖೆ ಆಗಿದೆ. 2015ರಲ್ಲಿಯೇ ಇದರ ಬಗ್ಗೆ ವಿಸ್ತೃತ ತನಿಖೆ ನಡೆದು ಬಿ ರಿಪೋರ್ಟ್ ಅನ್ನು ಕೂಡ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಈ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಈಗ ರಾಜಕೀಯ ಸೇಡಿಗಾಗಿ ತೆಗೆದಿದ್ದಾರೆ. ಆಗ ತನಿಖೆ ಮಾಡದೆ ಸುಮ್ಮನೆ ಇದ್ದಿದ್ದು ಯಾಕೆ? ಈಗ ನನ್ನನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಕುತಂತ್ರ ಫಲಿಸದು ಎಂದು ಕುಮಾರಸ್ವಾಮಿ ತಿಳಿಸಿದರು.

ನಾನು ತಪ್ಪು ಕೆಲಸ ಮಾಡಿಲ್ಲ

ಇವರ ಹಾಗೆಯೇ ನಾನು ಯಾರಿಗೂ ಮೋಸ ಮಾಡಿಲ್ಲ. ಕಂಡವರ ಜಾಮೀನು ಹೊಡೆದುಕೊಂಡಿಲ್ಲ. ಇವರಂತೆ ಯಾರಿಗೂ ಟೋಪಿ ಹಾಕಿ ಜಮೀನು ಮಾಡಿಕೊಂಡಿಲ್ಲ. ನನ್ನ ಪತ್ನಿಯ ಸಂಬಂಧಿಕರು ಆ ಜಮೀನು ತೆಗೆದುಕೊಂಡಿದ್ದಾರೆ. ಆ ಜಮೀನು ಡಿನೋಟಿಫಿಕೇಶನ್ ಆಗಿರುವುದು ನಿಜ. ಎಲ್ಲವೂ ಕಾನೂನಾತ್ಮಕವಾಗಿ ಇದೆ. ತಪ್ಪು ಕೆಲಸ ಮಾಡಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿ ಕೈಕಟ್ಟಿ ನಿಲ್ಲುವ ಸಮಯ ಬಂದರೆ ರಾಜಕಾರಣದಲ್ಲಿ ಐದು ಸೆಕೆಂಡ್ ಕೂಡ ಇರುವುದಿಲ್ಲ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | PM Vishwakarma Scheme: ಪಿಎಂ ವಿಶ್ವಕರ್ಮ ಯೋಜನೆಗೆ ಯಾರು ಅರ್ಹರು, ಇದರಿಂದೇನು ಪ್ರಯೋಜನ? ಅರ್ಜಿ ಸಲ್ಲಿಕೆ ಹೇಗೆ?

ಈ ವೇಳೆ ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಮೇಯರ್ ರವಿ ಕುಮಾರ್, ಇತರರು ಇದ್ದರು.