ಹುಬ್ಬಳ್ಳಿ: ಬೆಲೆ ಏರಿಕೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ಕೈಗೊಂಡ ʼಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆʼ ಗೆ ಕೇಂದ್ರ ಆಹಾರ ಸಚಿವರ ತವರು ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠದ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಆಹಾರ ಧಾನ್ಯ ದಾಸ್ತಾನು ಹೊತ್ತ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
ಇದೇ ವೇಳೆ ಜನ ಸಾಮಾನ್ಯರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಯಾವತ್ತೂ ರೈತರ ಮತ್ತು ಕಡು ಬಡವರ ಹಿತ ಕಾಯಲು ಬದ್ಧವಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಬೆಲೆ ಏರಿಕೆ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಇದೇ ಪ್ರಥಮ ಬಾರಿಗೆ ಇಂಥ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.
ಈ ಸುದ್ದಿಯನ್ನೂ ಓದಿ | Bengaluru International Airport: ಕೆಂಪೇಗೌಡ ಏರ್ಪೋರ್ಟ್ನಲ್ಲಿ ದಟ್ಟ ಮಂಜು, ಇಳಿಯಲಾಗದೆ ವಾಪಸ್ ಹೋದ ಹೈದರಾಬಾದ್ ವಿಮಾನ
ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣುಗುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ದೇಶಾದ್ಯಂತ ಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆಗೆ ಮುಂದಾಗಿದೆ. ಈಗಾಗಲೇ ದೆಹಲಿ, ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಭಾರತ್ ಬ್ರ್ಯಾಂಡ್ ಅಡಿ ಆಹಾರ ಧಾನ್ಯ ವಿತರಣೆ ಕೈಗೊಂಡಿದ್ದು, ಈಗ ವಾಣಿಜ್ಯ ನಗರಿ ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳಲ್ಲಿ ವಿತರಣೆ ನಡೆದಿದೆ ಎಂದು ತಿಳಿಸಿದರು.
50ಕ್ಕೂ ಹೆಚ್ಚು ಸಂಚಾರಿ ವಾಹನಗಳಲ್ಲಿ ಪೂರೈಕೆ
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ವಾಹನಗಳಲ್ಲಿ ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಯಾವುದಕ್ಕೆ ಎಷ್ಟು ಬೆಲೆ?
ಭಾರತ್ ಅಕ್ಕಿ 34 ರೂ., ಭಾರತ್ ಗೋಧಿ ಹಿಟ್ಟು 30 ರೂ, ಭಾರತ್ ಕಡಲೆ ಬೇಳೆ 70 ರೂ. ಮತ್ತು ಭಾರತ್ ಹೆಸರು ಬೇಳೆಯನ್ನು 107 ರೂ. ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಮೊಬೈಲ್ ವಾಹನಗಳ ಮೂಲಕ ನೇರವಾಗಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರೈತರ ಜತೆ ಸಾಮಾನ್ಯ ಜನರ ಹಿತ ರಕ್ಷಣೆ
ಪ್ರಧಾನಿ ಮೋದಿ ಅವರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ರಕ್ಷಣೆ ಜತೆಗೆ ದೇಶಾದ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯ ಪೂರೈಸಿ ಜನಸಾಮಾನ್ಯರ ಹಿತವನ್ನೂ ಕಾಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಈ ಸುದ್ದಿಯನ್ನೂ ಓದಿ | PAN Card Update: ಪಾನ್ ಕಾರ್ಡ್ ತಿದ್ದುಪಡಿಗೆ ಇಲ್ಲಿದೆ ಸುಲಭ ವಿಧಾನ
ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.