Friday, 13th December 2024

Pralhad Joshi: ಪಾಕಿಸ್ತಾನ ಮಾದರಿ ಆಡಳಿತ, ಈ ಸರ್ಕಾರ ಬಹಳ ದಿನ ಇರಲ್ಲ: ಪ್ರಲ್ಹಾದ್‌ ಜೋಶಿ ಕಿಡಿ

Pralhad Joshi

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ (Congress), ಪಾಕಿಸ್ತಾನದ (Pakistan) ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದು, ಬಹಳ ದಿನ ಉಳಿಯಲ್ಲ ಈ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಇನ್ನು ಮೂರು, ಮೂರೂವರೆ ವರ್ಷದಲ್ಲಿ ಈ ಸರ್ಕಾರ ಮನೆಗೆ ಹೋಗೋದೇ! ಎಂದು ಹೇಳಿದರು.

ಗಣಪತಿ ಮಂಡಳಿಯವರು A 1 ಆರೋಪಿಗಳೇ?

ನಾಗಮಂಗಲ ಗಲಭೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿದ ಮಂಡಳಿಯವರನ್ನೇ A 1 ಆರೋಪಿಯನ್ನಾಗಿ ಮಾಡಿದ್ದಾರೆ. ಗೃಹಮಂತ್ರಿ ಮತ್ತು ಎಸ್ಪಿಗೆ ಮಾನಾ- ಮರ್ಯಾದೆ ಇದೆಯೇ? ಎಂದು ಜೋಶಿ ತರಾಟೆಗೆ ತೆಗೆದುಕೊಂಡರು.

ಪೆಟ್ರೋಲ್ ಬಾಂಬ್, ಮಚ್ಚು, ಲಾಂಗ್ ತೂರಿದವರು A 1 ಆರೋಪಿಗಳಲ್ಲ!

ಗಣಪತಿ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್, ಕಲ್ಲು ತೂರಿದವರು, ಮಚ್ಚು, ಲಾಂಗ್ ಬೀಸಿದವರು A1 ಆರೋಪಿಗಳಾಗಿ ಕಾಣಲಿಲ್ಲ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜ ವಿದ್ರೋಹಿಗಳನ್ನು, ಮತಾಂಧ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದರ ಪರಿಣಾಮವೇ ಈಗ ನಾಗಮಂಗಲ ಗಲಭೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಬ್ರದರ್‌ಗಳ ಹಿನ್ನೆಲೆ ಜಗತ್ತಿಗೇ ಗೊತ್ತಿದೆ: ಡಿ.ಕೆ.ಸುರೇಶ್‌ಗೆ ತಿರುಗೇಟು ಕೊಟ್ಟ ಎಚ್.ಡಿ.ಕೆ

ಅಧಿಕಾರಿಗಳು ಎಚ್ಚರ ವಹಿಸಲಿ

ಅಧಿಕಾರಿಗಳು ಎಚ್ಚರ ವಹಿಸಿ ಕಾರ್ಯ ನಿರ್ವಹಿಸಲಿ. ಯಾರನ್ನೋ ಮೆಚ್ಚಿಸಲು, ಓಲೈಸಲು ಮತ್ತು ಯಾರ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದು ಪ್ರಲ್ಹಾದ್‌ ಜೋಶಿ ಎಚ್ಚರಿಸಿದರು.

ದೇವರನ್ನು ಬಂಧಿಸುವಷ್ಟು ಓಲೈಕೆ ರಾಜಕಾರಣವೇ?

ಕಾಂಗ್ರೆಸ್ ಸರ್ಕಾರದ್ದು ಇದೆಂಥ ಅತಿರೇಕ? ಹಿಂದೂ ದೇವರುಗಳನ್ನೂ ಬಂಧಿಸುವಷ್ಟು ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದರು.

ದೇಶಾದ್ಯಂತ ಸಂಚಲನ

ಕರ್ನಾಟಕ ಈಗ ದೇಶದಾದ್ಯಂತ ಸಂಚಲನ ಮೂಡಿಸಿದೆ. ನಾಗಮಂಗಲ ಗಲಭೆ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ ವೇಳೆ ಪ್ರತಿಭಟನಾಕರರ ಜತೆ ಗಣೇಶ ವಿಗ್ರಹಗಳನ್ನು ಬಂಧಿಸಿರುವುದು ವಿಪರ್ಯಾಸ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದ ಸಚಿವ ಜೋಶಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಮಾಡುತ್ತಿರುವ ರಾಜಕೀಯ ತುಷ್ಟೀಕರಣದ ಪರಮಾವಧಿ ಇನ್ನೂ ಎಲ್ಲಿಗೆ ತಲುಪುತ್ತದೋ? ಎಂದರು.

ಈ ಸುದ್ದಿಯನ್ನೂ ಓದಿ | Traffic Restrictions: ಗಣೇಶ ಮೆರವಣಿಗೆ; ಇಂದು, ನಾಳೆ ಬೆಂಗಳೂರಿನ ಹಲವೆಡೆ ಮಾರ್ಗ ಬದಲಾವಣೆ

ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸಿಎಂಗೆ ಆಗ್ರಹ

ನಾಗಮಂಗಲ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದರು.