ಹಾನಗಲ್: ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) 1974 ರ ವಕ್ಫ್ ಗೆಜೆಟ್ ನೊಟಿಫಿಕೇಶನ್ ರದ್ದುಪಡಿಸಿದರೆ ಬಿಜೆಪಿ ಹೋರಾಟ ಹಿಂತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಹಾನಗಲ್ ತಾಲೂಕು ಅರುಣಗೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಸರ್ಕಾರಕ್ಕೆ ಈ ಸಂದೇಶ ರವಾನಿಸಿದರು.
ರಾಜ್ಯ ಸರ್ಕಾರ ಮೊದಲು 1974 ರ ವಕ್ಫ್ ಗೆಜೆಟ್ ನೋಟಿಫಿಕೇಷನ್ ಅನ್ನು ಹಿಂಪಡೆಯಬೇಕು ಮತ್ತು ವಕ್ಫ್ ನೋಟಿಸ್ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ, ಅಧಿಕೃತ ಆದೇಶ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ʼಟೋಕನ್ʼ ಮೊರೆ ಹೋಗಿದೆ; ಜೋಶಿ ಆರೋಪ
ಸುಪ್ರೀಂ ಕೋರ್ಟ್ ಆದೇಶದಂತೆ ಮಂಜೂರಾತಿ, ಖರೀದಿ ಮತ್ತು ದಾನದ ಅಧಿಕೃತ ದಾಖಲೆಗಳಿದ್ದರೆ ಮಾತ್ರ ಪರಿಶೀಲಿಸಿ ವಕ್ಫ್ ಆಸ್ತಿ ಎಂದು ನಮೂದಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಲಿ. ಬಿಜೆಪಿ ಅಂದೇ ಹೋರಾಟ ಹಿಂಪಡೆಯುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟಕ್ಕೆ ಪ್ರಿಯಾಂಕಾ ಗಾಂಧಿ ಬಾಯಿಗೆ ಬಂದಂತೆ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಹತ್ತಾರು ಎಕರೆ ಭೂಮಿ ಕಳೆದುಕೊಂಡ ರೈತರೇನು ಪ್ರಿಯಾಂಕಾ ಗಾಂಧಿ ಅವರ ಮನೆ ಮುಂದೆ ನಿಲ್ಲಬೇಕೇ? ಎಂದು ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ನಾಯಕಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕರು ಸ್ವಲ್ಪ ಸೂಕ್ಷ್ಮತೆ ಅರಿತು ಮಾತನಾಡಲಿ
ಇಂದು 9 ಲಕ್ಷ ಎಕರೆ ವಕ್ಫ್ ಆಸ್ತಿಯಾಗಿದೆ. ಕಾಂಗ್ರೆಸ್ ನಾಯಕರು ಸ್ವಲ್ಪ ಸೂಕ್ಷ್ಮತೆ ಅರಿತು ಮಾತನಾಡಲಿ. ದೂರ್ತ, ದುರುಳ ಕೆಲಸ ಮಾಡುತ್ತಿದ್ದೀರಿ. ಹಾಗಾಗಿ ಬಿಜೆಪಿ ವಕ್ಫ್ ವಿಷಯ ಕೈಗೆತ್ತಿಕೊಂಡಿದೆ. ವಕ್ಫ್ ಆಸ್ತಿ ಹೊಡೆಯುವುದನ್ನು ಬಂದ್ ಮಾಡಲಿ ಎಂದು ಅವರು ಹೇಳಿದರು.
ಹೋರಾಟ ಹತ್ತಿಕ್ಕಲು ಪೊಲೀಸ್ ಬಲ ಬಳಕೆ
ವಕ್ಫ್ ವಿರುದ್ಧದ ಹೋರಾಟದ ದನಿ ಅಡಗಿಸಲು ರಾಜ್ಯ ಸರ್ಕಾರ ಪೊಲೀಸ್ ಬಲ ಬಳಸಿಕೊಳ್ಳುತ್ತಿದೆ. ಈ ಮೂಲಕ ರೈತರು, ಜನಸಾಮಾನ್ಯರು ಮತ್ತು ಮಧ್ಯಮಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವ್ಯಾಹತವಾಗಿ ನಡೆದಿದೆ ನೋಟಿಸ್ ನೀಡಿಕೆ: ರಾಜ್ಯದಲ್ಲಿ ತಹಸೀಲ್ದಾರ್ ಮತ್ತು ಅಧಿಕಾರಿಗಳಿಂದ ವಕ್ಫ್ ನೋಟಿಸ್ ನೀಡಿಕೆ ಅವ್ಯಾಹತವಾಗಿ ನಡೆದಿದೆ. ಮೊದಲು ಇದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಸಿಎಂ ಸೂಚನೆಗೆ ಕಿಮ್ಮತ್ತಿಲ್ಲವೇ?
ಸಿಎಂ, ನೋಟಿಸ್ ನೀಡದಂತೆ ಸೂಚಿಸಿದ್ದೇನೆ ಎನ್ನುತ್ತಿದ್ದಾರೆ, ರಾಜ್ಯದ ಎಲ್ಲೆಡೆ ಮತ್ತೆ ನೋಟಿಸ್ ನೀಡುತ್ತಲೇ ಇದ್ದಾರೆ. ಹಾಗಾದರೆ ಸಿಎಂ ಆದೇಶಕ್ಕೆ ಕಿಮ್ಮತ್ತಿಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | SBI Q2 Results: ಎಸ್ಬಿಐ ಲಾಭ 18,331 ಕೋಟಿ ರೂ.; ಶೇ. 28ರಷ್ಟು ಏರಿಕೆ
ಆತ್ಮಹತ್ಯೆ ಮಾಡಿಕೊಂಡ ರೈತನ ತಂದೆ ಮತ್ತು ಕುಟುಂಬಕ್ಕೆ ಸ್ಥೈರ್ಯ ತುಂಬಿದರು. ಈ ವೇಳೆ ಮಾಜಿ ಡಿಸಿಎಂ ಗೋವಿಂದ್ ಕಾರಜೋಳ, ಮಾಜಿ ಸಂಸದ ಜಿಎಂ ಸಿದ್ದೇಶ್ವರ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಎಂಎಲ್ಸಿ ರವಿಕುಮಾರ್, ಸೀಮಾ ಮಸೂತಿ ಮತ್ತಿತರರು ಇದ್ದರು.