ಹುಬ್ಬಳ್ಳಿ: ವಕ್ಫ್ ಭೂ ಕಬಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಜಿಪಂ ಸಿಇಓ ಎರಡು ದೇವಸ್ಥಾನಗಳ ಸ್ವಾಧೀನಕ್ಕೆ ವಕ್ಫ್ ಸಮಿತಿಗೆ ಆದೇಶ ನೀಡಿರುವ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಜಮೀನು, ದೇವಸ್ಥಾನಗಳ ಆಸ್ತಿ ಕಬಳಿಸಲು ವಕ್ಫ್ ಬೋರ್ಡ್ ಅಧಿಕಾರಿಗಳ ನೆರಳಿನಲ್ಲಿ ಸಂಚು ರೂಪಿಸಿರುವುದು ಇದರಿಂದ ಮತ್ತೆ ಸಾಬೀತಾಗಿದೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | Basavaraja Bommai: ರಾಜ್ಯದಲ್ಲಿ ವಕ್ಪ್ ಕಾನೂನು ದುರುಪಯೋಗ: ಬಸವರಾಜ ಬೊಮ್ಮಾಯಿ
ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ನೋಟಿಸ್ ಹಿಂಪಡೆಯುತ್ತೇವೆ ಎಂದಿದ್ದಾರೆ. ಇತ್ತ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತೂ ವಕ್ಫ್ ಬೋರ್ಡ್‌ಗೆ ಅನುಕೂಲಕರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಸರ್ಕಾರದ ಕಣ್ಣಾ ಮುಚ್ಚಾಲೆ ಆಟವಲ್ಲವೇ? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.
ಏನಿದು ಹಾವೇರಿ ಪ್ರಕರಣ
ಹಾವೇರಿ ಜಿಪಂ ಸಿಇಓ, ಹನುಮನ ದೇವಸ್ಥಾನ ಮತ್ತು ದುರ್ಗವ್ವ ದೇವಸ್ಥಾನವನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್ ಸಮಿತಿಗೆ ಆದೇಶ ಹೊರಡಿಸಿದ್ದಾರೆ. ವಕ್ಫ್ ಬೋರ್ಡ್ ಸದಸ್ಯರು ನಿನ್ನೆ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ಹೋಗಿದ್ದು, ಸ್ಥಳೀಯರು ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ಹಿಂದೂಗಳ ಮೇಲೆಯೇ ಎಫ್‌ಐಆರ್
ಜನರು ವಿರೋಧ ತೋರುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರೂ ಸಹ ಸ್ಥಳೀಯ ಹಿಂದೂಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ನೆರಳಿನಲ್ಲಿ 60-70 ವರ್ಷಗಳಿಂದ ಅಲ್ಲಿಯೇ ನೆಲೆಸಿರುವ ಇಲ್ಲಿನ ಹಿಂದೂಗಳನ್ನು ವಕ್ಫ್ ಸಮಿತಿಯವರು ನಿರಾಶ್ರಿತರನ್ನಾಗಿ ಮಾಡಲು ಹೊರಟಿದ್ದಾರೆ. ಜಿಪಂ ಸಿಇಓ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿರುವುದು ದುರ್ದೈವ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ರೈತರೇ, ಹಿಂದೂಗಳೇ ಮೊದಲು ಪಹಣಿ, ದಾಖಲೆ ಪರಿಶೀಲಿಸಿಕೊಳ್ಳಿ; ಪ್ರಲ್ಹಾದ್ ಜೋಶಿ ಕರೆ
ಹಾವೇರಿ ಜಿಪಂ ಸಿಇಒ ಕೈಗೊಂಡ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ ಜೋಶಿ, ಅಮಾಯಕ ಹಿಂದೂಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಮೀರ್ ಅಹಮದ್ ಅಧಿಕಾರಿಗಳಿಗೆ ಈ ರೀತಿ ಒತ್ತಡ ಹೇರುತ್ತಿದ್ದು, ಇದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.