Thursday, 12th December 2024

Pralhad Joshi: ದೇಶ ವಿರೋಧಿಗಳ ಜತೆ ಕೈ ಜೋಡಿಸುವುದೇ ರಾಹುಲ್ ಗಾಂಧಿ ಕೆಲಸ; ಪ್ರಲ್ಹಾದ್‌ ಜೋಶಿ ಕಿಡಿ

Pralhad joshi

ಹುಬ್ಬಳ್ಳಿ: ಭಾರತದ ವಿರೋಧಿಗಳ ಜತೆ ಕೈ ಜೋಡಿಸುವುದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿ ಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಅವಹೇಳನ ಮಾಡುವುದು ದೇಶದ್ರೋಹದ ಕೆಲಸ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶದ್ರೋಹಿಗಳ ಜತೆ, ಭಾರತದ ವಿರೋಧಿಗಳ ಜತೆ ರಾಹುಲ್ ಗಾಂಧಿ ದೇಶದ ವಿರುದ್ಧವಾಗಿ, ಪ್ರಜಾಪ್ರಭುತ್ವವನ್ನು ವಿರೋಧಿಸುವ ರೀತಿ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಈ ಸುದ್ದಿಯನ್ನೂ ಓದಿ | Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಎಂಪಿ ಈ. ತುಕಾರಾಂ ರಾಜೀನಾಮೆಗೆ ಬಿಜೆಪಿ ಆಗ್ರಹ

ವಿದೇಶದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎನ್ನುವ ರಾಹುಲ್ ಗಾಂಧಿ, ತುರ್ತು ಪರಿಸ್ಥಿತಿ ಹೇರಿದವರು ಯಾರು? ಎಂಬುದನ್ನು ಅರಿತುಕೊಂಡು ಮಾತನಾಡಲಿ ಎಂದು ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.

ಕಾಂಗ್ರೆಸ್‌ನಲ್ಲಿ ಖರ್ಗೆ ಪ್ರಧಾನಿ ಅಭ್ಯರ್ಥಿ ಎನ್ನಲಿ ನೋಡೋಣ

ಪ್ರಜಾಪ್ರಭುತ್ವ, ಸಮಾನತೆ ಎಂದು ಭಾಷಣ ಬಿಗಿಯುವ ರಾಹುಲ್ ಗಾಂಧಿ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಿ ನೋಡೋಣ ಎಂದು ಜೋಶಿ ಸವಾಲು ಹಾಕಿದರು.

ಅನುಕೂಲ ಸಿಂಧು ವಾದ

ಇನ್ನು, ಚುನಾವಣಾ ಆಯೋಗದ ಬಗ್ಗೆ ಆರೋಪ ಮಾಡುತ್ತಾರೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಗೆದ್ದಿಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್‌ನವರಿಗೆ ಪ್ರಜಾಪ್ರಭುತ್ವ, ಚುನಾವಣಾ ಆಯೋಗ, ನ್ಯಾಯಾಂಗ ಹೀಗೆ ಸಾಂವಿಧಾನಿಕವಾಗಿ ಇರುವ ಯಾವುದರ ಮೇಲೂ ನಂಬಿಕೆಯೇ ಇಲ್ಲ. ಅನುಕೂಲ ಸಿಂಧುಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗಣಪತಿ ಪೂಜೆ ಮಾಡಿದ್ದಕ್ಕೆ ವಿರೋಧ

ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ. ಹಾಗಾಗಿ ಪ್ರಧಾನಿ ಮೋದಿ ಸಿಜೆ ಅವರ ಮನೆಯಲ್ಲಿ ಗಣಪತಿ ಪೂಜೆ ಮಾಡಿದ್ದಕ್ಕೆ ವಿರೋಧ ಮಾಡುತ್ತಿದೆ ಎಂದು ಜೋಶಿ ಟೀಕಿಸಿದರು.

ಈ ಸುದ್ದಿಯನ್ನೂ ಓದಿ | Mandya Violence: ರಾಜಕೀಯ ಒತ್ತಡಕ್ಕೆ ಒಳಗಾಗದಂತೆ ಮಂಡ್ಯ ಎಸ್ಪಿಗೆ ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಕೆ

ಹಿಂದೆ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು ಸಿಜೆಯವರ ಇಫ್ತೀಯಾರ್ ಕೂಟದಲ್ಲಿ ಭಾಗವಹಿಸಿದ್ದರಲ್ಲ. ಆಗೇಕೆ ಆಕ್ಷೇಪಿಸಲಿಲ್ಲ? ಎಂದು ಪ್ರಶ್ನಿಸಿದ ಅವರು, ಇಲ್ಲಿ ಪ್ರಧಾನಿ ಮೋದಿ ಅವರು ಸಿಜೆ ಮನೆಗೆ ಹೋಗಿದ್ದಕ್ಕಲ್ಲ ವಿರೋಧ. ಗಣಪತಿ ಪೂಜೆ ಮಾಡಿದ್ದಕ್ಕೆ ಅವರ ವಿರೋಧ. ಹೀಗೆ ಯಾವತ್ತೂ ಹಿಂದೂ ವಿರೋಧಿಯಾಗೆ ವರ್ತಿಸುತ್ತಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದರು.