Thursday, 21st November 2024

Pralhad Joshi: ವಕ್ಫ್ ಮೂಲಕ ಆಸ್ತಿ ಕಬಳಿಸಲು ಜಮೀರ್ ಅಹ್ಮದ್, ಕಾಂಗ್ರೆಸ್ ಕುಮ್ಮಕ್ಕು: ಜೋಶಿ ಆರೋಪ

pralhad joshi

ಹುಬ್ಬಳ್ಳಿ: ಭಾರತದಲ್ಲಿ ವಕ್ಫ್ ಕಾನೂನು ಮಾಡಿದ್ದೇ ತಪ್ಪು. ಮೊದಲಿದನ್ನು ತೆಗೆದು ಹಾಕುವುದೇ ಸೂಕ್ತ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಧಾರವಾಡದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನೆಹರು ಕಾಲದಲ್ಲಿ ಕಾಂಗ್ರೆಸ್ (Congress) ಅದೇಕೆ ವಕ್ಫ್ ಕಾನೂನು ಮಾಡಿತೋ? ಗೊತ್ತಿಲ್ಲ. ಆದರೆ, 2013ರಲ್ಲಿ ವಕ್ಫ್‌ಗೆ (Waqf) ಮತ್ತೆ ಅಪರಿಮಿತ ಅಧಿಕಾರ ಕೊಟ್ಟಿದ್ದೇಕೆ ಎಂದು ಅವರು ಆಕ್ಷೇಪಿಸಿದರು.

ದೇಶದಲ್ಲಿ ವಕ್ಫ್ ಕಾನೂನು ಮಾಡಿದ್ದೇ ಮೊದಲ ತಪ್ಪು. ಅಂಥದ್ದರಲ್ಲಿ ಸುಪ್ರೀಂ ಕೋರ್ಟ್ ಸಹ ಪ್ರಶ್ನಿಸದಂತಹ ಪ್ರಶ್ನಾತೀತ ಅಧಿಕಾರವೇ? ಎಂದು ಪ್ರಶ್ನಿಸಿದ ಪ್ರಲ್ಹಾದ್‌ ಜೋಶಿ, ಮೊದಲು ಇದನ್ನು ತೆಗೆದು ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Pralhad Joshi: 10 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ: ಪ್ರಲ್ಹಾದ್‌ ಜೋಶಿ

ವಕ್ಫ್ ಕಾನೂನು ತಿದ್ದುಪಡಿ ಅಗತ್ಯ

ಪ್ರಸ್ತುತ ಬೆಳವಣಿಗೆ ನೋಡಿದರೆ ಕಡೇ ಪಕ್ಷ ವಕ್ಫ್ ಕಾನೂನು ತಿದ್ದುಪಡಿ ತರುವ ಅವಶ್ಯಕತೆಯಿದೆ ಎಂದು ತಿಳಿಸಿದ ಜೋಶಿ ಅವರು, ದೇಶದಲ್ಲಿ ವಕ್ಫ್‌ಗೆ ಪರಿಮಿತಿಯೇ ಇಲ್ಲದಾಗಿದೆ. ಜಗತ್ತಿನ ಯಾವ ದೇಶದಲ್ಲೂ ಇಂಥ ವಕ್ಫ್ ಕಾನೂನು ಇಲ್ಲ. ಹಿಂದೂಗಳು, ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ನಾವಿರುವ ಮನೆ, ನಿಂತ ನೆಲವೂ ತನ್ನದೇ ಎನ್ನಬಹುದು ವಕ್ಫ್

ಮುಂದೊಂದು ದಿನ ನಾವಿರುವ ಮನೆ, ನಿಂತ ನೆಲವನ್ನೇ ವಕ್ಫ್ ತನ್ನ ಆಸ್ತಿ ಎಂದರೂ ಅಚ್ಚರಿಯಿಲ್ಲ. ಅಷ್ಟೊಂದು ಅಪರಿಮಿತ ಅಧಿಕಾರ ಕೊಟ್ಟು ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಕುಮ್ಮಕ್ಕು

ರಾಜ್ಯದಲ್ಲಿ ರೈತರ ಜಾಮೀನು, ಮಠ, ದೇವಸ್ಥಾನ ಮತ್ತು ಬಡ ಮುಸ್ಲಿಮರ ಆಸ್ತಿಯನ್ನು ವಕ್ಫ್ ಮೂಲಕ ಕಬಳಿಸಲು ಸಚಿವ ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಪಕ್ಷ ಸಹ ಕುಮ್ಮಕ್ಕು ನೀಡಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.

ತಹಸೀಲ್ದಾರ್ ಅಮಾನತು ಮಾಡಿ

ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿದ ತಹಸೀಲ್ದಾರ್ ಮತ್ತು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತ್ತು ಪಡಿಸಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು.

ಪಹಣಿ ಸರಿಪಡಿಸಲಿ

ವಕ್ಫ್ ಆಸ್ತಿ ಎಂದಿರುವ ಪಹಣಿಗಳನ್ನು ಜಿಲ್ಲಾಧಿಕಾರಿ ಕೂಡಲೇ ಸರಿಪಡಿಸಬೇಕು. ರೈತರು ದಾಖಲೆ ಸಲ್ಲಿಸಲಿ ಎನ್ನುತ್ತಿದ್ದಾರೆ. ವಕ್ಫ್ ಹೆಸರು ನಮೂದು ಮಾಡುವಾಗ ದಾಖಲೆ ಕೇಳಿದ್ದರಾ? ಎಂದು ತರಾಟೆಗೆ ತೆಗೆದುಕೊಂಡ ಸಚಿವ ಜೋಶಿ, ಜಿಲ್ಲಾಧಿಕಾರಿ ತಕ್ಷಣವೇ ಯಾವುದೇ ಸಬೂಬು ನೀಡದೆ, ಕೇಳದೆ ನೋಟಿಸ್ ಹಿಂಪಡೆದು ಪಹಣಿ ಸರಿಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ ಸರ್ಕಾರ ಇರುವೆಡೆ ಆಸ್ತಿ ಕಬಳಿಸಲು ವಕ್ಫ್ ಸಂಚು: ಜೋಶಿ ಆರೋಪ

ಉಚಿತ ಸ್ಕೀಂಗಳಿಗೆ ಮರುಳಾಗಬೇಡಿ

ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಎಲ್ಲೆಡೆ ಹಿಂದೂಗಳಿಗೆ ಕಿಮ್ಮತ್ತು ಇಲ್ಲದಾಗಿದೆ. ದಯಮಾಡಿ ಯಾರೂ ಕಾಂಗ್ರೆಸ್‌ನ ಉಚಿತ ಸ್ಕೀಂಗಳಿಗೆ ಮಾರುಳಾಗಿ ಮತ ನೀಡಬಾರದು. ಮುಸ್ಲಿಂ ತುಷ್ಟೀಕರಣದ ಕಾಂಗ್ರೆಸ್ ಅನ್ನು ಬೆಂಬಲಿಸಿ ಕೊನೆಗೆ ಹೀಗೆ ಸ್ವಂತ ಮನೆ-ಮಠ, ಜಮೀನು ಕಳೆದುಕೊಳ್ಳಬೇಡಿ. ಇದು ನನ್ನ ಕಳಕಳಿಯ ಮನವಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.‌