Thursday, 21st November 2024

Pralhad Joshi: ರಾಜ್ಯ ಸರ್ಕಾರ ಬಡವರ ಅನ್ನದ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ; ಜೋಶಿ ಆರೋಪ

Pralhad Joshi

ನವದೆಹಲಿ: ರಾಜ್ಯ ಸರ್ಕಾರ ಗ್ಯಾರಂಟಿಗಳಿಂದ ನುಣಿಚಿಕೊಳ್ಳಲು ಬಿಪಿಎಲ್‌ ಕಾರ್ಡ್‌ (BPL Card) ಪರಿಷ್ಕರಣೆಗೆ ಮುಂದಾಗಿ, ಈಗಿದಕ್ಕೆ ಕೇಂದ್ರ ಸರ್ಕಾರದ ಮಾನದಂಡದ ನೆಪ ಹೇಳುವುದು ತರವಲ್ಲ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಗೃಹಲಕ್ಷ್ಮಿ, ಗ್ಯಾರಂಟಿಗಳ ಹೊರೆ ತಪ್ಪಿಸಿಕೊಳ್ಳಲು ಕೇಂದ್ರದತ್ತ ಬೆರಳು ತೋರಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಬಿಪಿಎಲ್ ಕಾರ್ಡ್‌ಗಳಿಗೆ ಕೇಂದ್ರದಿಂದ ಮಾನದಂಡ ವಿಧಿಸಿ ಬಹಳ ದಿನಗಳೇ ಆಗಿವೆ. ಆದರೆ, ಇಷ್ಟು ದಿನ ಬಿಟ್ಟು ಈಗೇಕೆ? ಎಂದು ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರ ಬಡವರ ಅನ್ನದ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ಈ ಸುದ್ದಿಯನ್ನೂ ಓದಿ | Pralhad Joshi: ʼವಿದ್ಯಾಮಂತ್ರಿಗೆ ಕನ್ನಡ ಬರಲ್ಲʼ ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಇಂಗ್ಲೀಷ್‌ನಲ್ಲೇ ಸೂಚನೆ! ಜೋಶಿ ಆಕ್ರೋಶ

ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯ ಆಗಿದೆಯೇ?

ಕೇಂದ್ರ ಸರ್ಕಾರ ಬಹು ಹಿಂದೆಯೇ ಬಿಪಿಎಲ್‌ ಮಾನದಂಡ ವಿಧಿಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಗ್ಯಾರಂಟಿ ಯೋಜನೆಗಳ ಹೊರೆ ಬಿದ್ದಿದೆ. ಗ್ಯಾರೆಂಟಿಗಳ ಬಿಸಿ ತಟ್ಟಿದ್ದರಿಂದ ಈಗ ಜ್ಞಾನೋದಯ ಆಗಿದೆ. ಹಾಗಾಗಿ ‘ಕೇಂದ್ರ ಮಾನದಂಡ’ ಎಂಬ ನೆಪ ಹೇಳುತ್ತಿದೆ ಎಂದು ಜೋಶಿ ಟೀಕಿಸಿದರು.

ಭಾರತೀಯ ನೀತಿ ಆಯೋಗದ ಪ್ರಕಾರ ದೇಶಾದ್ಯಂತ 25 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. ಅದರ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಬಿಪಿಎಲ್ ಮಾನದಂಡ ವಿಧಿಸಿದೆ ನಿಜ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನುಣಿಚಿಕೊಳ್ಳಲಿ ಎಂದಲ್ಲ ಎಂದು ಅವರು ಹೇಳಿದರು.

ಬಡವರ ಪರ ಚಿಂತನೆ

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯಾವತ್ತೂ ಬಡವರ ಪರ ಚಿಂತನೆ ಉಳ್ಳದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಬಡವರ ಹಿತ ಮರೆತು ಕೇಂದ್ರದ ಮಾನದಂಡ ಎಂಬ ಸಬೂಬು ಹೇಳುತ್ತ ಅರ್ಹ ಬಿಪಿಎಲ್ ಕುಟುಂಬಗಳನ್ನೂ ವಂಚಿಸಲು ಹೊರಟಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಶೇ.80 ಬಿಪಿಎಲ್ ಕುಟುಂಬ

ಕರ್ನಾಟಕದಲ್ಲಿ ಶೇ.80 ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ ಎಂದು ರಾಜ್ಯ ಆಹಾರ ಖಾತೆ ಸಚಿವ ಮುನಿಯಪ್ಪ ಹೇಳಿದ್ದಾರೆ. ಆದರೆ, ಸರ್ಕಾರ ಸರಿಯಾಗಿ ಸಮೀಕ್ಷೆ ನಡೆಸಲಿ ಎಂದು ಜೋಶಿ ಸಲಹೆ ನೀಡಿದರು.

ಬಲಾಢ್ಯರ ಕಾರ್ಡ್‌ಗಳು ಹಾಗೇ ಉಳಿಯುತ್ತಿವೆ

ರಾಜ್ಯದಲ್ಲಿ “ಸ್ಥಿತಿವಂತರು” ಎಂಬ ನೆಪದಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಿಸಲಾಗುತ್ತಿದೆ. ನಿಜವಾದ ಬಡವರನ್ನು ವಂಚಿಸಲಾಗುತ್ತಿದೆ. ಬಲಾಢ್ಯರ ಕಾರ್ಡ್‌ಗಳನ್ನು ಹಾಗೇ ಉಳಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಈ ರೀತಿ ಆಗಬಾರದು ಎಂದು ಸಚಿವ ಜೋಶಿ ಆಕ್ಷೇಪಿಸಿದರು.

ಈ ಸುದ್ದಿಯನ್ನೂ ಓದಿ | IDBI Bank Recruitment 2024: IDBI ಬ್ಯಾಂಕ್‌ನಲ್ಲಿದೆ 600 ಹುದ್ದೆ; ಆನ್‌ಲೈನ್‌ ಮೂಲಕ ಹೀಗೆ ಅಪ್ಲೈ ಮಾಡಿ

ಪಾರದರ್ಶಕ ಆಗಿರಲಿ ಪರಿಷ್ಕರಣೆ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ ಪರಿಷ್ಕರಣೆ ಮಾಡಲಾಗುತ್ತಿದೆ ಎಂದಿದೆ ಕಾಂಗ್ರೆಸ್ ಸರ್ಕಾರ. ಆದರೆ, ಅರ್ಹರು ವಂಚಿತರಾಗಬಾರದು. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ, ಡಾಟಾ, ಟೆಕ್ನಾಲಜಿ ಆಧಾರದ ಮೇಲೆ ಪಾರದರ್ಶಕವಾಗಿ ಪರಿಷ್ಕರಣೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.