ಹುಬ್ಬಳ್ಳಿ: ಗಣೇಶ ಚತುರ್ಥಿ ಪ್ರಯುಕ್ತ (Ganesh Chaturthi) ನಗರದ ರಾಣಿ ಚೆನ್ನಮ್ಮ ಮೈದಾನದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ ಮತ್ತು ಪಾಲಿಕೆ ಸದಸ್ಯರೂ ಸಾಥ್ ನೀಡಿದರು.
ಜೋಶಿಯವರ ಗೃಹದಲ್ಲಿ ಗಣೇಶ ಪ್ರತಿಷ್ಠಾಪನೆ
ಗಣೇಶ ಚತುರ್ಥಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರ ಹುಬ್ಬಳ್ಳಿಯ ನಿವಾಸದಲ್ಲಿ ಸಹ ಶ್ರೀ ಗಣೇಶನ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಸಚಿವ ಜೋಶಿ ಮತ್ತು ಕುಟುಂಬದ ಸದಸ್ಯರೆಲ್ಲ ಸೇರಿ ಗಣೇಶನ ಪೂಜೆಯಲ್ಲಿ ಭಾಗಿಯಾಗಿ ಭಕ್ತಿ ಮೆರೆದರು.
ಸಚಿವರೇ ಗಣೇಶನ ವಿಗ್ರಹವನ್ನು ಡೋಲು-ವಾದ್ಯ ಮೇಳದೊಂದಿಗೆ ವಾಹನದಲ್ಲಿ ಮೆರವಣಿಗೆ ಮೂಲಕ ತಂದು ನಿವಾಸದಲ್ಲಿ ಪ್ರತಿಷ್ಠಾಪಿಸಿದರು. ಸಚಿವರೇ ಅರ್ಚಕರಾಗಿ ಮಂತ್ರೋಪದೇಶ, ಗಂಧಾಕ್ಷತೆ, ಪುಷ್ಪಾಲಂಕಾರ, ಮಹಾ ಮಂಗಳಾರತಿ ಸಮೇತ ಪೂಜಿಸಿದರು. ಗಣೇಶ ಸ್ತೋತ್ರ ಪಠಿಸಿ ವಿಘ್ನೇಶ್ವರನ ಕೃಪೆಗೆ ಪಾತ್ರರಾದರು.
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಗಣೇಶೋತ್ಸವ ಆಚರಣೆಯಲ್ಲೂ ಸಚಿವರು ಭಾಗಿಯಾಗಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸುದ್ದಿಯನ್ನೂ ಓದಿ | Sarvasva Song: “ಸರ್ವಸ್ವ” ಹಾಡು ಸೆ.20ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯ
ಮೂರು ದಿನಗಳ ಕಾಲ ರಾಣಿ ಚೆನ್ನಮ್ಮ ಮೈದಾನದಲ್ಲಿ ವಿಜೃಂಭಿಸಲಿರುವ ಗಣೇಶೋತ್ಸವದಲ್ಲಿ ಸರ್ವ ಭಕ್ತರೂ ಪಾಲ್ಗೊಂಡು ವಿಘ್ನ ವಿನಾಶಕ ಗಣೇಶನ ಕೃಪೆಗೆ ಪಾತ್ರರಾಗಬೇಕು ಎಂದು ಇದೇ ವೇಳೆ ಸಚಿವ ಪ್ರಲ್ಹಾದ್ ಜೋಶಿ ಕರೆ ಕೊಟ್ಟರು.