Wednesday, 23rd October 2024

ನಾಳೆಯಿಂದ ಅನ್‌ಲಕ್‌ 4.0: ಥಿಯೇಟರ್‌, ಕಾಲೇಜುಗಳ ಆರಂಭಕ್ಕೂ ತೀರ್ಮಾನ‌

ಬೆಂಗಳೂರು: ಲಾಕ್‌ಡೌನ್ ವೇಳೆ ಸ್ಥಗಿತಗೊಂಡಿದ್ದ ಚಲನಚಿತ್ರ ಮಂದಿರಗಳು ಜು.19 ರಿಂದ ಆರಂಭವಾಗುತ್ತಿವೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೋವಿಡ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ.

ಕೋವಿಡ್ ಮಹಾಮಾರಿ ಮೂರನೇ ಅಲೆ ಆತಂಕವಿದೆ. ಆದರೆ ಭಾರೀ ನಷ್ಟ ಅನುಭವಿಸಿದ್ದ ಸಿನಿಮಾ ಉದ್ಯಮಕ್ಕೆ ವಿನಾಯ್ತಿ ನೀಡಿದ್ದಾರೆ. ನಾಳೆಯಿಂದ ಚಲನಚಿತ್ರ ಮಂದಿರ ತೆರೆಯಲು ಅವಕಾಶ ನೀಡಿದ್ದಾರೆ. ಆದರೆ 50% ಸಾಮರ್ಥ್ಯ ಸೀಟು ಭರ್ತಿಗೆ ಮಾತ್ರ ಅನುಮತಿ ಇದೆ. ಜೊತೆಗೆ ರಂಗಮಂದಿರ, ಬಯಲು ರಂಗಭೂಮಿ, ಇನ್ನಿತರ ಕಾರ್ಯಕ್ರಮಗಳಿಗೆ ಅನುಮತಿ ನಿಡಲಾಗಿದೆ‌.

ಇನ್ನು ಉನ್ನತ ಶಿಕ್ಷಣ ಅಂದ್ರೆ ಪದವಿ ಮೇಲ್ಪಟ್ಟ ಕಾಲೇಜುಗಳ ಆರಂಭಕ್ಕೂ ತೀರ್ಮಾನ‌ ಮಾಡಿದ್ದಾರೆ. ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕನಿಷ್ಠ ಮೊದಲ ಲಸಿಕೆ ಡೋಸ್ ಪಡೆಯುವುದು ಕಡ್ಡಾಯ ಮಾಡಿದೆ. ರಾಜ್ಯದಾದ್ಯಂತ ಲಸಿಕೆ ಕೊರತೆ ಎದುರಿಸುತ್ತಿರುವಾಗ ಯಾವ ರೀತಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತದೆ ಎಂಬುದು ಪ್ರಶ್ನೆಯಾಗಿದೆ.

ಮದುವೆ, ಅಂತ್ಯ ಸಂಸ್ಕಾರ, ಜಾತ್ರೆ, ಉತ್ಸವಕ್ಕೆ‌ ವಿನಾಯ್ತಿ ನೀಡಲಾಗಿಲ್ಲ. ಪಬ್‌ಗಳಿಗೂ ಅನುಮತಿ ನೀಡಿಲ್ಲ. ನೈಟ್ ಕರ್ಫ್ಯೂ ಅವಧಿಯನ್ನು ಕಡಿತಗೊಳಿಸಿರುವ ಸರ್ಕಾರ, ರಾತ್ರಿ10 ರಿಂದ ಬೆಳಗ್ಗೆ 5ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ. ಬಾರ್, ರೆಸ್ಟೋರೆಂಟ್, ಹೋಟೆಲ್, ಅಂಗಡಿಗಳು 10ರವೆರೆಗೆ ವ್ಯಾಪಾರ ನಡೆಸಬಹುದು.

ದೇವಸ್ಥಾನದ ಪೂಜೆ ಪುನಸ್ಕಾರಗಳು ನಿರಾತಂಕವಾಗಿ ಸಲ್ಲಿಸಬಹುದು. ಪ್ರಸಾದ, ಅನ್ನ ಸಂತರ್ಪಣೆ, ತೀರ್ಥ ಸೇವನೆಗೂ ಅವಕಾಶ ನೀಡಿದೆ‌. ಮೂರನೇ ಅಲೆಯ ಆತಂಕದ ಮಧ್ಯೆ ಸರ್ಕಾರ ಸಡಿಲಿಕೆ ಪ್ರಮಾಣ ಹೆಚ್ಚಿಸುತ್ತಿದೆ‌. ಚಲನಚಿತ್ರಮಂದಿರಗಳು ತೆರೆದುಕೊಳ್ಳಲಿದ್ದು, ಪದವಿ‌ ಕಾಲೇಜುಗಳು ಆರಂಭವಾಗಲಿವೆ.