Wednesday, 18th December 2024

Unlock Raghava Movie: ʼಅನ್‌ಲಾಕ್ ರಾಘವʼ ರಿಲೀಸ್‌ ಡೇಟ್‌ ಅನೌನ್ಸ್‌!

Unlock Raghava Movie

ಬೆಂಗಳೂರು: ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ʼಅನ್‌ಲಾಕ್ ರಾಘವʼ ಚಿತ್ರದ (Unlock Raghava Movie) ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್ (ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ನನ್ನ ಹಿಂದಿನ ಚಿತ್ರಗಳನ್ನು ನೋಡಿದ್ದ ನನ್ನ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ʼಅನ್‌ಲಾಕ್ ರಾಘವʼ ಚಿತ್ರದ ಫಸ್ಟ್ ಲುಕ್‌ನಲ್ಲಿ ರೆಚೆಲ್ ಅವರನ್ನು ನೋಡಿದ ಗೆಳೆಯರು ಈಗ ನೀನೊಬ್ಬ ಕಮರ್ಷಿಯಲ್ ಚಿತ್ರದ ನಿರ್ದೇಶಕ ಎಂದು ಹೇಳಿದರು‌. ಇನ್ನು, ನಾಯಕ ಮಿಲಿಂದ್ ಸುರದ್ರೂಪಿ ನಟ ಅಷ್ಟೇ ಅಲ್ಲ. ಭರವಸೆಯ ನಟ ಕೂಡ ಹೌದು. ಇದೊಂದು ಪಕ್ಕಾ‌ ಮನೋರಂಜನೆಯ ರಸದೌತಣ ನೀಡುವ, ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ. ʼರಾಮ ರಾಮ ರೆʼ ಖ್ಯಾತಿಯ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಬಗನ್ನು ನೋಡುವುದೆ ಚೆಂದ. ಅನೂಪ್ ಸೀಳಿನ್ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಸತ್ಯಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಹೊಸ ನಾಯಕನ ಎಂಟ್ರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ಒಂದು ಚೆಂದವಾದ ಕಥೆಯನ್ನು ಸತ್ಯಪ್ರಕಾಶ್ ಅವರು ಕಟ್ಟಿ ಕೊಟ್ಟಿದ್ದಾರೆ. ಅಷ್ಟೇ ಸುಂದರವಾಗಿ ದೀಪಕ್ ನಿರ್ದೇಶನ ಮಾಡಿದ್ದಾರೆ‌. ರೆಚೆಲ್ ಅವರ ಅಭಿನಯ ಅದ್ಭುತವಾಗಿದೆ‌. ನೀವು ಈ ಹಿಂದೆ ಯಾವ ಚಿತ್ರಗಳಲ್ಲೂ ನೋಡಿರದ ಸಾಧುಕೋಕಿಲ ಹಾಗೂ ಶೋಭ್ ರಾಜ್ ಅವರನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಅವಿನಾಶ್, ಭೂಮಿ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಇತ್ತೀಚಿಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರ ನೋಡಿದಾಗ ಎಲ್ಲರ ಮುಖದಲ್ಲಿ ಭರವಸೆಯ ನಗು ಮೂಡಿತ್ತು. ಆ ನಗು ಪ್ರೇಕ್ಷಕನ ಮುಖದಲ್ಲೂ ಮೂಡಲಿದೆ ಎಂಬ ಭರವಸೆ ಇದೆ ಎಂದರು ನಾಯಕ ಮಿಲಿಂದ್. ಚಿತ್ರದ ನಾಯಕಿ ರೆಚೆಲ್ ಡೇವಿಡ್ ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Feather Accessories Fashion: ಯುವತಿಯರನ್ನು ಸೆಳೆಯುತ್ತಿದೆ ಫಂಕಿ ಫೆದರ್ ಆಕ್ಸೆಸರೀಸ್!

ಇದು ನನ್ನ ನಿರ್ಮಾಣದ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ಮಾಪಕ ಮಂಜುನಾಥ್, ಸಾಕಷ್ಟು ಸವಾಲುಗಳನ್ನು ಎದುರಿಸಿ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚಿಗೆ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಯಿತು. ಇದೊಂದು ನಮ್ಮ ಸೊಗಡಿನ ಚಿತ್ರ. ʼಅನ್‌ಲಾಕ್ ರಾಘವʼ ಚೆನ್ನಾಗಿ ಮೂಡಿಬರಲು ಚಿತ್ರತಂಡದ ಸಹಕಾರವೇ ಕಾರಣ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್ ದಾಸೇಗೌಡ.