Sunday, 13th October 2024

ಹುಮನಾಬಾದ್: ಲಸಿಕೆ ಪಡೆದ ಬೆನ್ನಲ್ಲೇ ಅನಾರೋಗ್ಯ

ಹುಮನಾಬಾದ್ : ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ 12ರಿಂದ 14 ವರ್ಷದ ಮಕ್ಕಳು ಲಸಿಕೆ ಪಡೆದ ನಂತರ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ. ತಾಲೂಕಿನ ಹುಡಗಿ ವಲಯದಲ್ಲಿ ಬುಧವಾರ ಘಟನೆ ಸಂಭವಿಸಿದೆ.

ತಾಲೂಕಿನ ಜನತಾನಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿಗಳು ಬುಧವಾರ ಲಸಿಕೆ ಪಡೆದು ಕೊಂಡಿದ್ದು, ನಂತರ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಂತಿ, ತಲೆನೋವು, ತಲೆ ಸುತ್ತುವುದು ಮಕ್ಕಳಲ್ಲಿ ಕಾಣಿಸಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ। ನಾಗನಾಥ ಹುಲಸೂರೆ ಮಾಹಿತಿ ನೀಡಿದ್ದಾರೆ.

ಶಾಲೆಯ 20 ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡಲಾಗಿದ್ದು, 12 ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ನಂತರ ಮೊದಲಿಗೆ ಹುಡಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.