Friday, 13th December 2024

Utthana Katha Spardhe 2024 Result: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2024; ಶಿರಸಿಯ ಗಣೇಶ ಭಟ್ಟಗೆ ಪ್ರಥಮ ಬಹುಮಾನ

Utthana Katha Spardhe 2024 Result

ಬೆಂಗಳೂರು: ʼಉತ್ಥಾನʼ ಮಾಸಪತ್ರಿಕೆ ಆಯೋಜಿಸಿದ್ದ ರಾಜ್ಯಮಟ್ಟದ ವಾರ್ಷಿಕ ಕಥಾ ಸ್ಪರ್ಧೆ 2024 ರ ಫಲಿತಾಂಶ (Utthana Katha Spardhe 2024 Result) ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ಭಟ್ಟ ಕೊಪ್ಪಲತೋಟ ಅವರ ʼತೀರ್ಪುʼ ಕಥೆ ಪ್ರಥಮ ಬಹುಮಾನ ಪಡೆದಿದೆ.

ಈ ವರ್ಷ 412 ಕಥೆಗಳು ಸ್ಪರ್ಧೆಯಲ್ಲಿದ್ದವು. ಲೇಖಕ ಮತ್ತು ಪತ್ರಕರ್ತ ಪ್ರೊ. ಎನ್‌.ಎಸ್‌. ಶ್ರೀಧರಮೂರ್ತಿ ಅವರು ತೀರ್ಪುಗಾರರಾಗಿ ಬಹುಮಾನಕ್ಕೆ ಕಥೆಗಳನ್ನು ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ 15 ಸಾವಿರ ರೂ.ನಗದು ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಮೃತ್ಯುಂಜಯ ಎಚ್‌. ಅವರ ʼಕಥೆಯ ಪಾತ್ರದ ಎದುರುʼ ಕಥೆ ದ್ವಿತೀಯ ಬಹುಮಾನ ಹಾಗೂ ದಾವಣಗೆರೆಯ ಹೊನ್ನಾಳಿಯ ಸದಾಶಿವ ಸೊರಟೂರು ಅವರ ʼಮುರಿದ ಮರದ ಚಿಗುರುʼ ಕಥೆಯು ತೃತೀಯ ಬಹುಮಾನವನ್ನು ಪಡೆದಿದೆ. ಈ ಬಹುಮಾನಗಳು ಕ್ರಮವಾಗಿ 12 ಸಾವಿರ ರೂ. ಹಾಗೂ 10 ಸಾವಿರ ರೂ. ನಗದು ಒಳಗೊಂಡಿವೆ.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ

ಐದು ಕಥೆಗಳು ಮೆಚ್ಚುಗೆಯ ಬಹುಮಾನಕ್ಕೆ ಆಯ್ಕೆಯಾಗಿವೆ. ಬೆಂಗಳೂರಿನ ರಾಜನಹಳ್ಳಿಯ ಕಿರಣ್‌ ಪ್ರಸಾದ್‌ ಅವರ ʼಸ್ಥಿತ್ಯಂತರʼ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವನರಾಗ ಶರ್ಮ ಅವರ ʼನೆತ್ತರ ಬೀದಿಗುಂಟʼ, ಬೆಂಗಳೂರಿನ ಭಾಗ್ಯರೇಖಾ ದೇಶಪಾಂಡೆ ಅವರ ʼನಿಷ್ಕ್ರಮಣʼ, ಜಯರಾಮಾಚಾರಿ ಅವರ ʼಅನಿಕೇತನʼ ಹಾಗೂ ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ʼಸಾಂಗತ್ಯʼ ಕಥೆ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಬಹುಮಾನವು ತಲಾ 2 ಸಾವಿರ ರೂ. ನಗದು ಒಳಗೊಂಡಿವೆ ಎಂದು ʼಉತ್ಥಾನʼ ದ ಸಂಪಾದಕ ಅನಿಲ್‌ ಕುಮಾರ್‌ ಮೊಳಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.