Saturday, 14th December 2024

V Somanna: 88.41 ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಕೇಂದ್ರ ಸಚಿವ ಸೋಮಣ್ಣ

V Somanna

ತುಮಕೂರು: ತುಮಕೂರು ರೈಲ್ವೆ ನಿಲ್ದಾಣವನ್ನು ಏರ್‌ಪೋರ್ಟ್ ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೆ ಸಚಿವಾಲಯವು 88.41 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದ್ದಾರೆ.

ಬೆಂಗಳೂರಿನಂತೆ ತುಮಕೂರು ಕೂಡ ಅತಿವೇಗವಾಗಿ ಬೆಳೆಯುತ್ತಿದ್ದು, ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ವಿಶ್ವ ದರ್ಜೆಯ ಸೌಲಭ್ಯಗಳು ಸಿಗಬೇಕೆಂಬ ಭವಿಷ್ಯದ ಸಾರಿಗೆ ವ್ಯವಸ್ಥೆಯನ್ನು ಮನಗಂಡು ತುಮಕೂರು ರೈಲ್ವೆ ನಿಲ್ದಾಣವನ್ನು ಸಿದ್ದಗಂಗಾ ಮಠದ ಮಾದರಿಯ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲಾಗುವುದು.
ಬಹುಮಹಡಿ ಕಟ್ಟಡ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಆಗಮನ-ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳು, ಏರ್‌ಕಾನ್‌ಕೋರ್ಸ್, ವಿಶೇಷ ಚೇತನ ಸ್ನೇಹಿ ಲಿಫ್ಟ್-ಎಸ್ಕಲೇಟರ್‌ಗಳು, ರಿಟೇಲ್, ವಾಣಿಜ್ಯ ಕಟ್ಟಡಗಳನ್ನು ನೂತನ ನಿಲ್ದಾಣ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮನ್ ಕಿ ಬಾತ್ ವೀಕ್ಷಣೆ: ರಾಜ್ಯದಲ್ಲೇ ತುಮಕೂರಿಗೆ ಅಗ್ರ ಸ್ಥಾನ

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನ ಹತ್ತನೇ ವರ್ಷದ ಕಾರ್ಯಕ್ರಮ ವೀಕ್ಷಣೆಯಲ್ಲಿ ನಗರ ಕ್ಷೇತ್ರದಲ್ಲಿ ವಿಶಿಷ್ಟ ದಾಖಲೆಯಾಗಿದೆ. ಕ್ಷೇತ್ರದ ಎಲ್ಲಾ 234 ಬೂತ್‌ಗಳಲ್ಲೂ ವೀಕ್ಷಣೆಯಾಗಿ ಮನ್ ಕಿ ಬಾತ್ ಕಾರ್ಯಕ್ರಮ ಶೇಕಡ 100ರಷ್ಟು ವೀಕ್ಷಣೆಯಾಗಿ ತುಮಕೂರು ನಗರ ಕ್ಷೇತ್ರ ರಾಜ್ಯದಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲೆಯ ಮನ್ ಕಿ ಬಾತ್ ಸಂಚಾಲಕ ಕೆ.ಸಂದೀಪ್‌ಗೌಡ, ನಗರ ಬಿಜೆಪಿ ಅಧ್ಯಕ್ಷ ಟಿ.ಹೆ.ಹನುಮಂತರಾಜು ಹೇಳಿದ್ದಾರೆ.

ಮನ್ ಕಿ ಬಾತ್ ವಿನೂತನ ಕಾರ್ಯಕ್ರಮ, ಪ್ರಧಾನ ಮಂತ್ರಿಗಳಾದ ನರೆಂದ್ರ ಮೋದಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮ ಹಲವಾರು ಉಪಯುಕ್ತ, ದೇಸಿಯ ವಿಚಾರಗಳನ್ನು ಪ್ರಬಲವಾಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಿದೆ. ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಕೆಲಸ ಸಾಧನೆ ಮಾಡುತ್ತಿರುವ ಹಲವು ಸಾಧಕರನ್ನು ನರೇಂದ್ರ ಮೋದಿ ಅವರು ಗುರುತಿಸಿ, ಮನ್ ಕಿ ಬಾತ್‌ನಲ್ಲಿ ಅವರನ್ನು ಬೆಳಕಿಗೆ ತರುವ ಸಾರ್ಥಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಷ್ಟೆಲ್ಲಾ ಕಾರಣಕ್ಕೆ ಮನ್‌ಕಿ ಬಾತ್ ಜನಪ್ರಿಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಮನ್ ಕಿ ಬಾತ್‌ನ ಹತ್ತನೇ ವರ್ಷದ ಕಾರ್ಯಕ್ರಮವನ್ನು ತುಮಕೂರು ನಗರ ಕ್ಷೇತ್ರದ ಎಲ್ಲಾ 234 ಬೂತ್‌ಗಳಲ್ಲೂ ಶೇಕಡ 100ರಷ್ಟು ವೀಕ್ಷಣೆ ಮಾಡಿ ರಾಜ್ಯದಲ್ಲೇ ದಾಖಲೆಯ ವೀಕ್ಷಣೆಗೆ ಸಹಕರಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ | Viral Video: ಕುರ್ಚಿ, ಕೋಲು ಹಿಡಿದುಕೊಂಡು ಆಟೋ ಚಾಲಕನೊಂದಿಗೆ ಹೊಡೆದಾಡಿದ ಪಾನಮತ್ತ ಪೊಲೀಸ್ ಅಧಿಕಾರಿ!

ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ವೀಕ್ಷಣೆ ಮಾಡಿ, ಪ್ರಧಾನಿ ಮೋದಿಯವರು ತಿಳಿಸುವ ಉಪಯುಕ್ತ ಸಲಹೆ, ಸಂದೇಶಗಳನ್ನು ಮತ್ತಷ್ಟು ಜನರಿಗೆ ತಿಳಿಸುವಂತೆ ಸಂದೀಪ್‌ಗೌಡ, ಹನುಮಂತರಾಜು ಮನವಿ ಮಾಡಿದ್ದಾರೆ.