Thursday, 12th December 2024

ನಾಳೆ ದ.ಕ., ಉಡುಪಿ ಜಿಲ್ಲೆಯಲ್ಲಿ ಬೃಹತ್‌ ಲಸಿಕಾಕರಣ ಅಭಿಯಾನ

ಮಂಗಳೂರು/ಉಡುಪಿ: ಸರಕಾರದ ಸೂಚನೆಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.17ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೃಹತ್‌ ಲಸಿಕಾಕರಣ ಅಭಿಯಾನ ನಡೆಯಲಿದೆ.

ದ.ಕ.ದಲ್ಲಿ 533 ಮತ್ತು ಉಡುಪಿ ಜಿಲ್ಲೆಯಲ್ಲಿ 300 ಕೇಂದ್ರಗಳಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಭಯ ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ.ಮತ್ತು ಕೂರ್ಮಾ ರಾವ್‌ ಎಂ. ಹೇಳಿದರು.

ಕೋವಿಡ್‌ ಲಸಿಕಾ ಮೇಳವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲು ಎಲ್ಲ ಗ್ರಾ. ಪಂ. ಅಧ್ಯಕ್ಷರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಗ್ರಾಮಲೆಕ್ಕಿಗರ ಜತೆ ನಡೆದ ವೀಡಿಯೋ ಸಂವಾದದಲ್ಲಿ ಡಾ| ರಾಜೇಂದ್ರ ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದ ಪ್ರತಿ ಮನೆಗಳಿಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಲ್‌ ಕಲೆಕ್ಟರ್‌ ಮತ್ತು ಪಿಡಿಒ ಅವರು ಭೇಟಿ ನೀಡಿ ಲಸಿಕೆ ಪಡೆಯದಿರುವ 18 ವರ್ಷ ಮೆಲ್ಪಟ್ಟವರನ್ನು ಗುರುತಿಸಿ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವಂತೆ ಸೂಚಿಸಿದರಲ್ಲದೇ, ವಿಶೇಷ ಚೇತನರು ಮತ್ತು ಅಶಕ್ತರನ್ನು ಗುರುತಿಸಿ ಅವರು ಇರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಬಹುದು ಅಥವಾ ಅವರನ್ನು ವಾಹನದ ಮೂಲಕ ಲಸಿಕಾ ಕೇಂದ್ರ ಕ್ಕೆ ಕರೆತಂದು ಲಸಿಕೆ ನೀಡಬಹುದು ಎಂದರು.

ಮೆಗಾ ಲಸಿಕೆ ಮೇಳದಲ್ಲಿ 1.5 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದು, ಲಸಿಕಾ ಕೇಂದ್ರಗಳಲ್ಲಿ ಹೆಚ್ಚಿನ ವೈದ್ಯಕೀಯ ಸಿಬಂದಿ ಆವಶ್ಯಕತೆ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರುಗಳೊಂದಿಗೆ ಚರ್ಚಿಸಿ ಅವರ ಸೇವೆಯನ್ನು ಪಡೆದುಕೊಳ್ಳ ಬಹುದು ಎಂದು ಸೂಚಿಸಿದರು.

ಉಡುಪಿ: ಜಿಲ್ಲೆಯಲ್ಲಿ 1ನೇ ಡೋಸ್‌ ಲಸಿಕೆಯನ್ನು 8,47,940 (ಶೇ.84.6) ಜನರಿಗೆ ನೀಡಲಾಗಿದೆ. ಈಗಾಗಲೇ 3,45,558 (ಶೇ.34.5) ಮಂದಿ ಎರಡನೇ ಡೋಸ್‌ ಪಡೆದು ಕೊಂಡಿದ್ದಾರೆ ಎಂದು ಜಿಲ್ಲಾಧಿರಿ ಕೂರ್ಮಾರಾವ್‌ ಎಂ. ತಿಳಿಸಿದರು.

ಸೆ. 17ರ ಮೆಗಾ ಲಸಿಕೆ ಮೇಳದಲ್ಲಿ ನೂರು ಪ್ರತಿಶತ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಅಂದು 80 ಸಾವಿರ ಡೋಸ್‌ ಲಸಿಕೆ ಲಭ್ಯವಿದ್ದು, ಗ್ರಾ.ಪಂ. ಮತ್ತು ನಗರ ವ್ಯಾಪ್ತಿಯಲ್ಲಿ 300 ಲಸಿಕಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.