Friday, 20th September 2024

Valmiki Corporation Scam: ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ಮಾಸ್ಟರ್‌ ಮೈಂಡ್!‌ ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

b nagendra valmiki corporation scam

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ (Valmiki Corporation Scam) ಸಂಪೂರ್ಣ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರ (Ex minister B Nagendra) ಆಗಿರುವುದು ಕಂಡುಬಂದಿದೆ ಎಂದು ಜಾರಿ ನಿರ್ದೇಶನಾಲಯ (enforcement directorate – ED) ಸಲ್ಲಿಕೆ ಮಾಡಿದ ಆರೋಪ ಪಟ್ಟಿಯಲ್ಲಿ (Chargesheet) ಕೋರ್ಟ್‌ಗೆ ತಿಳಿಸಲಾಗಿದೆ.

ಜೊತೆಗೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣವನ್ನು ಲೋಕಸಭಾ ಚುನಾವಣೆಗೂ ಬಳಕೆ ಮಾಡಲಾಗಿದೆ ಎಂದು ಇಡಿ ಬೊಟ್ಟು ಮಾಡಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು 82ನೇ ಸಿಸಿಹೆಚ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮಾಜಿ ಸಚಿವರಾದ ನಾಗೇಂದ್ರ ಪ್ರಕರಣದ ಪ್ರತಿ ಹಂತದಲ್ಲಿಯೂ ಹಣದ ದುರ್ಬಳಕೆಯ ಮೇಲೆ ನಿಯಂತ್ರಣ ಹೊಂದಿದ್ದರು. ಪ್ರತಿ ಹಂತದಲ್ಲಿಯೂ ಸ್ವತಃ ಸಚಿವ ನಾಗೇಂದ್ರ ಭಾಗಿಯಾಗಿದ್ದಾರೆ. ಅವರೇ ಡೀಲ್ ಮಾಡಿಸಿದ್ದಾರೆ. ಅಂದರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಸಂಪೂರ್ಣ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರನೇ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಸಚಿವ ಬಿ. ನಾಗೇಂದ್ರ ಪ್ರಕರಣದ ಪ್ರಧಾನ ಆರೋಪಿ, ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್​ನ ಎಂಡಿ ಸತ್ಯನಾರಾಯಣ ವರ್ಮ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಹೀಗಾಗಿ ನಾಗೇಂದ್ರರ ಅಣತಿಯಂತೆಯೇ ಸಂಪೂರ್ಣ ಹಣದ ಅವ್ಯವಹಾರ ನಡೆದಿದೆ. ಈ ಹಣದಲ್ಲಿ ಒಟ್ಟು 21 ಕೋಟಿ ರೂ. ಹಣವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಹಣದ ಅವ್ಯವಹಾರ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಂತೆ, ಇತ್ತ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಶಾಸಕ ಬಸನಗೌಡ ದದ್ದಲ್​ ವಾಲ್ಮೀಕಿ ನಿಗಮದ ಹಗರಣದಲ್ಲಿ ವಿಚಾರಣೆ ಎದುರಿಸಿದ್ದರು.

ಈ ಸುದ್ದಿ ಓದಿ: ವಾಲ್ಮೀಕಿ ನಿಗಮದ ಅಧ್ಯಕ್ಷ, ಶಾಸಕ ದದ್ದಲ್, ಆಪ್ತ ಸಹಾಯಕ ಪಂಪ್ಪಣ್ಣ ಫ್ಲಾಟಿನಲ್ಲೂ ಎರಡನೆಯ ದಿನ ತಲಾಷ್