ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದ (Valmiki Corporation scam) ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಸೆಕ್ಷನ್ 35ಎ ಅಡಿ ವ್ಯಾಖ್ಯಾನವನ್ನು ಒಪ್ಪಲು ಸಾಧ್ಯವಿಲ್ಲ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮನವಿಗೆ ಅನುಮತಿಸಿದರೆ ಪ್ರತಿಯೊಂದು ಬ್ಯಾಂಕಿಂಗ್ ಸಂಸ್ಥೆಯು ತನಿಖೆಗೆ ಕೋರಬಹುದು. ಹೀಗೆ ಮಾಡಿದರೆ ದೆಹಲಿ ಪೊಲೀಸ್ ಸ್ಥಾಪನಾ ಕಾಯಿದೆಯು ಅನುಪಯುಕ್ತವಾಗಲಿದೆ ಎಂದು ಪೀಠ ಹೇಳಿದೆ.
ಬೆಂಗಳೂರು ಪೂರ್ವ ವಲಯದ ಸಿಬಿಐ ಡಿಜಿಎಂ ಜೆ. ಮಹೇಶ್ ಎಂಬುವವರು ಈ ಹಿಂದೆಯೇ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ದೂರಿನಲ್ಲಿ ಉಲ್ಲೇಖ ಮಾಡಿದ್ದರು.
ಯೂನಿಯನ್ ಬ್ಯಾಂಕ್ ಹಿರಿಯ ಅಧಿಕಾರಿಗಳ ಪತ್ರದ ಅನ್ವಯ ಬ್ಯಾಂಕಿನ ಮೂವರು ಸೇರಿ ಐವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿತ್ತು. ಈ ನಡುವೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿ ಆದೇಶಿಸಿತ್ತು. ಎಸ್‌ಐಟಿ ಈಗಾಗಲೇ ಪ್ರಕರಣದ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ವಾಲ್ಮಿಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆಯಾದ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಈ ಸುದ್ದಿಯನ್ನೂ ಓದಿ | Govt Employees: ರಾಜ್ಯ ಸರ್ಕಾರಿ ನೌಕರರ ಭತ್ಯೆ ಮರುಪಾವತಿ ಕುರಿತು ಸರ್ಕಾರ ಮಹತ್ವದ ಆದೇಶ
ಬೇಲೆಕೇರಿ ಅದಿರು ನಾಪತ್ತೆ ಕೇಸ್; ಶಾಸಕ ಸತೀಶ್ ಸೈಲ್‌ಗೆ ಬಿಗ್ ರಿಲೀಫ್
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ (Belekeri iron ore scam) ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿಕ್ಷೆಯನ್ನು ಅಮಾನತಿನಲ್ಲಿಡಲು ಹೈಕೋರ್ಟ್‌ನ ನ್ಯಾ.ಎಂ.ನಾಗ ಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದ್ದು, ಆರೋಪಿಗಳು ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ದಂಡದ ಮೊತ್ತದಲ್ಲಿ ಶೇ. 25 ಮೊತ್ತವನ್ನು ಠೇವಣಿ ಇಡಲು ಆರೋಪಿಗಳಿಗೆ ಸೂಚಿಸಲಾಗಿದೆ. 6 ವಾರದಲ್ಲಿ ದಂಡದ ಮೊತ್ತ ಠೇವಣಿ ಇಡುವಂತೆ ಕೋರ್ಟ್ ಸೂಚಿಸಿದೆ. ಇದರಿಂದ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಈ ಸುದ್ದಿಯನ್ನೂ ಓದಿ | Karnataka Bypoll: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.61.81 ಮತದಾನ
ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಅ.26ರಂದು ಆದೇಶ ಹೊರಡಿಸಿತ್ತು. ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಅಧಿಕಾರಿಯಾಗಿದ್ದ ಮಹೇಶ್ ಬಿಳಿಯೆ ಸೇರಿ 7 ಜನರಿಗೆ 7 ವರ್ಷ ಜೈಲು ಶಿಕ್ಷೆ ಜತೆಗೆ ಭಾರಿ ದಂಡ ವಿಧಿಸಲಾಗಿತ್ತು.
ಸತೀಶ್ ಸೈಲ್ ಜತೆಗೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಗೂ ಜೈಲು ಶಿಕ್ಷೆ ವಿಧಿಸಲಾಗಿತ್ತು. 6 ಪ್ರಕರಣಗಳ ಸಂಬಂಧ ಒಟ್ಟಾರೆ 40 ಕೋಟಿ ರೂ.ಗೂ ಅಧಿಕ ದಂಡವನ್ನು ಸಹ ನ್ಯಾಯಾಲಯ ವಿಧಿಸಿತ್ತು.