Wednesday, 18th December 2024

VAO Exam: ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ; ದಾಖಲೆ ಪರಿಶೀಲನೆ, ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ

KEA Exam

ಬೆಂಗಳೂರು: ಅಕ್ಟೋಬರ್ 27ರಂದು ನಡೆದಿದ್ದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ (VAO Exam 2024) ಸಂಬಂಧ ಮಹತ್ವದ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದೀಗ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಾಗೂ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಕುರಿತು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿ ಅಗತ್ಯ ಸೂಚನೆಗಳನ್ನು ನೀಡಿದೆ.

ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸೆ.29ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಒಟ್ಟು 4,16,459 ಅಭ್ಯರ್ಥಿಗಳು ಅರ್ಹರಾಗಿದ್ದರು.

ನಂತರ 3 ವರ್ಷ ವಯೋಮಿತಿ ಸಡಿಲಿಕೆ ನೀಡಿದ್ದರಿಂದ ಹೊಸದಾಗಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಅ.26ರಂದು ಕಡ್ಡಾಯ ಕನ್ನಡ ಪರೀಕ್ಷೆ ಮತ್ತು ಒಟ್ಟು 4,79,386 ಅಭ್ಯರ್ಥಿಗಳಿಗೆ ಅ.27ರಂದು ಎಲ್ಲ ಜಿಲ್ಲೆಗಳಲ್ಲಿ ಪತ್ರಿಕೆ -1 ಮತ್ತು ಪತ್ರಿಕೆ -2 ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಆಕ್ಷೇಪಣೆಗಳನ್ನು ಪರಿಶೀಲಿಸಿ ಡಿ.9ರಂದು ಜಿಲ್ಲಾವಾರು ಅಂತಿಮ ಅಂಕ ಪಟ್ಟಿಯನ್ನು ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

30 ಜಿಲ್ಲೆಗಳ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 45,933 ಅಭ್ಯರ್ಥಿಗಳು ಅರ್ಹತೆ (ಕನಿಷ್ಠ ಶೇ.35ಕ್ಕಿಂತ ಹೆಚ್ಚು ಅಂಕ) ಪಡೆದಿದ್ದಾರೆ. ಹೀಗಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಿ, ನಂತರ 1:1 ಅನುಪಾತದಂತೆ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿ

ಡಿಸೆಂಬರ್ 20ರಿಂದ 24 : ದಾಖಲೆ ಪರಿಶೀಲನೆಗೆ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
2024ರ ಜ.2 ರಿಂದ 10 : 1:3 ಅನುಪಾತದಲ್ಲಿ ದಾಖಲೆ ಪರಿಶೀಲನೆ
ಜನವರಿ 15: 1:1 ತಾತ್ಕಾಲಿಕ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ
ಜ. 16ರಿಂದ 23ರವರೆಗೆ: ಅಕ್ಷೇಪಣೆಗಳ ಆಹ್ವಾನ
ಜನವರಿ 27: ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಅಯ್ಕೆ ಪಟ್ಟಿ ಪ್ರಕಟಿಸುವುದು

ಈ ಸುದ್ದಿಯನ್ನೂ ಓದಿ | KEA Exam Result: ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಫಲಿತಾಂಶ, ಅಂತಿಮ ಅಂಕಪಟ್ಟಿ ಬಿಡುಗಡೆ