Thursday, 21st November 2024

CM Siddaramaiah: ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಶಾಸಕ ಅರವಿಂದ ಬೆಲ್ಲದ

cm siddaramaiah arvind bellad

ಬೆಂಗಳೂರು: ಟೀಕಿಸುವ ಭರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬಗ್ಗೆ ಅನುಚಿತ ಪದ ಬಳಸಿದ್ದಕ್ಕಾಗಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ (Arvind Chandrakanth Bellad) ಅವರು ಮುಖ್ಯಮಂತ್ರಿಗಳ ಕ್ಷಮೆ ಯಾಚಿಸಿದ್ದಾರೆ.

ಜಿಂದಾಲ್‌ ಕಂಪನಿಗೆ ಕಡಿಮೆ ದರದಲ್ಲಿ ಜಮೀನು ಕೊಟ್ಟಿರುವ ವಿಚಾರದಲ್ಲಿ ಅರಮನೆ ಮೈದಾನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭ ಸಿಎಂ ವಿರುದ್ಧ ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅವರು ಅನುಚಿತ ಪದ ಬಳಸಿದ್ದರು. ರಾಜ್ಯದ ಜಮೀನು ಕಡಿಮೆ ದರಕ್ಕೆ ಜಿಂದಾಲ್‌ಗೆ ಕೊಟ್ಟಿರುವುದಕ್ಕೆ ಆಕ್ರೋಶ ಹೊರಹಾಕಿದ್ದ ಶಾಸಕ ಬೆಲ್ಲದ, “ಜಮೀನು ಸಿದ್ದರಾಮಯ್ಯನವರ ಅಪ್ಪನ ಮನೆ ಆಸ್ತಿನಾ” ಎಂದಿದ್ದರು.

ಈ ಪದ ಬಳಕೆ ಮಾಡಿರುವುದಕ್ಕಾಗಿ ಬೆಲ್ಲದ್ ಪತ್ರದ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ. “ಈ ಸಂದರ್ಭದಲ್ಲಿ ಬಳಕೆ ಮಾಡಿರುವ ಪದ ನನಗೆ ಶೋಭೆ ತಂದಿರುವುದಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ” ಎಂದು ಅವರು ಪತ್ರ ಬರೆದಿದ್ದಾರೆ.

ಆರೋಗ್ಯ ಸಚಿವರು ರಾಜ್ಯ ಪ್ರವಾಸ ಮಾಡಲಿ: ಬೆಲ್ಲದ

ರಾಜ್ಯ ಸರ್ಕಾರ ಡೆಂಘೀ ನಿಯಂತ್ರಣಕ್ಕೆ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಚಿವರು ಬೆಂಗಳೂರು ಬಿಟ್ಟು ಹೊರ ಬಂದು ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಅರವಿಂದ ಬೆಲ್ಲದ ಆಗ್ರಹಿಸಿದರು.

ಹುಬ್ಬಳ್ಳಿಯ ಕಿಮ್ಸ್‌‍ ಆಸ್ಪತ್ರೆಗೆ ಭೇಟಿ ನೀಡಿ ಡೆಂಘೀಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಔಷಧ, ಪರೀಕ್ಷೆಗೆ ಪ್ರತ್ಯೇಕವಾಗಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಸಚಿವರು ರಾಜಧಾನಿ ಬೆಂಗಳೂರಿಗೆ ಸೀಮಿತವಾಗದೆ, ಎಲ್ಲಾ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಇರುವ ಆರೋಗ್ಯ ಪರಿಸ್ಥಿತಿಯ ಬಗ್ಗೆ ಗಮನ ಹರಿಸಬೇಕು. ಡೆಂಘೀ ಮಾರಕ ಕಾಯಿಲೆಯಾಗಿದ್ದು, ನಿಯಂತ್ರಿಸದಿದ್ದರೆ ಸಾರ್ವಜನಿಕರು ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ ಎಂದರು.

ಸಾವು-ನೋವುಗಳು ಹೆಚ್ಚಾಗುತ್ತಿವೆ. ಕೂಡಲೇ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಂಘೀ ಕಾಯಿಲೆಯಿಂದ ಹಲವರು ಸಾವನ್ನಪ್ಪಿದರೆ, ಸಾಕಷ್ಟು ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸರ್ಕಾರ ಡೆಂಘೀ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.