Tuesday, 22nd October 2024

Vijayapura News: ನಿಡಗುಂದಿ ನೌಕರರ ಸಂಘ ಚುನಾವಣೆಯಲ್ಲಿ ವ್ಯಾಪಕ ಅಕ್ರಮ: ನೌಕರರ ದೂರು

Govt Employees

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (Government Employees) ಸಂಘದ ತಾಲ್ಲೂಕು ಹಂತದ ಚುನಾವಣೆಯಲ್ಲಿ ಅಕ್ರಮ (Scam) ನಡೆಯುತ್ತಿದೆ ಎಂದು ವಿಜಯಪುರ (Vijayapura News) ಜಿಲ್ಲೆಯ ನಿಡಗುಂದಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಚುನಾವಣೆ ಘೋಷಣೆಯಾಗಿ, ಇಂದಿನಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡರೂ ನಿಡಗುಂದಿ ತಾಲ್ಲೂಕಿನ ಮತದಾರರ ಯಾದಿ ರಚನೆ, ಚುನಾವಣಾಧಿಕಾರಿ ನೇಮಕ ಸೇರಿ ಯಾವೊಂದೂ ಪ್ರಕ್ರಿಯೆ ಆರಂಭಗೊಂಡಿಲ್ಲ. ಪಾರದರ್ಶಕವಾಗಿ ಚುನಾವಣೆ ನಡೆಸಲಾಗುತ್ತಿಲ್ಲ. ಕಳೆದ ಅವಧಿಗೆ (ಐದು ವರ್ಷಗಳ ಹಿಂದೆ) ನೂತನವಾಗಿ ರಚನೆಯಾಗಿದ್ದ ನಿಡಗುಂದಿ ತಾಲ್ಲೂಕಿಗೆ ಚುನಾವಣೆ ನಡೆದು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆದರೆ ಈ ಬಾರಿ ನಿಡಗುಂದಿ ಬದಲಾಗಿ ಅವಿಭಜಿತ ಬಸವನಬಾಗೇವಾಡಿ ತಾಲ್ಲೂಕಿಗೆ ಒಂದೇ ಚುನಾವಣೆ ನಡೆಸುವ ಹುನ್ನಾರವೂ ಇದರ ಹಿಂದೆ ಅಡಗಿದೆ ಎಂದು ಆರೋಪಿಸಲಾಗಿದೆ.

ನೌಕರರ ಸಂಘದ ರಾಜ್ಯ ಘಟಕಕ್ಕೆ ಸರ್ಕಾರ ನೂತನವಾಗಿ ನೇಮಿಸಿರುವ ಆಡಳಿತಾಧಿಕಾರಿಗಳಿಗೆ ನಿಡಗುಂದಿ ತಾಲ್ಲೂಕಿನ ನೌಕರರ ಪರವಾಗಿ ಮಂಗಳವಾರ ಈ ಕುರಿತು ಮನವಿ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಎಸ್.‌ ಕಮತ, ಗೌರವಾಧ್ಯಕ್ಷ ಕುಮಾರ ಬಾಗೇವಾಡಿ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಕಾರ್ಯದರ್ಶಿ ಸಲೀಂ ದಡೆದ, ನೌಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಎಂ. ಮುಲ್ಲಾ, ಎಂ.ಆರ್.‌ಮಕಾನದಾರ , ಆರ್. ಬಿ.ಗೌಡರ, ವಿ.ಕೆ.ಮಸೂತಿ, ಎಂ.ಬಿ. ಹೆಬ್ಬಾಳ, ಪಿ.ಎಸ್. ಇಜೇರಿ, ಕೆ.ಎಂ.ಗುಡದಿನ್ನಿ, ಬಿ.ಎಸ್. ಯರವಿನತೆಲಿಮಠ ಮತ್ತಿತರರು ದೂರು ನೀಡಿದ್ದಾರೆ.

ಪ್ರತಿ ವರ್ಷ ನೌಕರರ ಸಂಘಕ್ಕೆ 200 ರೂ. ವಂತಿಗೆ ತೆಗೆದುಕೊಳ್ಳಲಾಗುತ್ತಿದೆ. ಕನಿಷ್ಠ ಪಕ್ಷ ಮತದಾರರ ಯಾದಿಯಲ್ಲಿಯೂ ಹೆಸರಿಲ್ಲ. ಮತದಾರರ ಪಟ್ಟಿಯೂ ಪ್ರಕಟ ಮಾಡುವುದಿಲ್ಲ. ಅಖಂಡ ಬಸವನಬಾಗೇವಾಡಿ ತಾಲ್ಲೂಕಿನ ಕರಡು, ಅಂತಿಮ ಮತದಾರರ ಪಟ್ಟಿಯೂ ಪ್ರಕಟಣೆ ಮಾಡಿಲ್ಲ. ಚುನಾವಣಾಧಿಕಾರಿಗಳು ಇಲ್ಲ ಎಂದು ಆರೋಪಿಸಿದರು. ನಿಡಗುಂದಿ ತಾಲ್ಲೂಕಿಗೆ ಕಳೆದ ಅವಧಿಯಲ್ಲಿಯೇ ಪ್ರತ್ಯೇಕ ಚುನಾವಣೆ ನಡೆದಿದೆ. 2015ರಲ್ಲಿಯೇ ನಿಡಗುಂದಿ ತಾಲ್ಲೂಕಾಗಿ ರಚನೆಗೊಂಡಿದೆ. ಈಗ ನಿಡಗುಂದಿ ತಾಲ್ಲೂಕಿಗೆ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ತಕ್ಷಣವೇ ಚುನಾವಣೆ ಪ್ರಕ್ರಿಯೆ ರದ್ದುಗೊಳಿಸಿ, ಪ್ರತಿ ವರ್ಷ ವಂತಿಗೆ ನೀಡಿದ ಪ್ರತಿಯೊಬ್ಬ ಸರ್ಕಾರಿ ನೌಕರರ ಹೆಸರು ಮತದಾರರ ಯಾದಿಯಲ್ಲಿ ಸೇರ್ಪಡೆಗೊಳಿಸಿ ಮತದಾರರ ಹೆಸರು ಪ್ರಕಟಣೆ ಮಾಡಬೇಕು. ಚುನಾವಣಾಧಿಕಾರಿಗಳ ಕಚೇರಿ ಆರಂಭಿಸಬೇಕು. ತಹಶೀಲ್ದಾರ್‌ ಕಚೇರಿ ಸೇರಿ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದು ದೂರುದಾರರು ಆಗ್ರಹಿಸಿದರು.

ಮತದಾರರ ಯಾದಿಯ ಕರಡು ಪ್ರಕಟಣೆ, ಆಕ್ಷೇಪಣೆ ಸ್ವೀಕರಿಸುವಿಕೆ, ಅಂತಿಮ ಮತದಾರರ ಯಾದಿ ಪಾರದರ್ಶಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಮುಕ್ತವಾಗಿ ಪ್ರಕಟಣೆ ಮಾಡುತ್ತಿಲ್ಲ. ಈ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸರಿಯಾದ, ಸ್ಪಷ್ಟವಾದ ಮಾಹಿತಿ ನೀಡದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಚುನಾವಣಾಧಿಕಾರಿ ಯಾರು? ಚುನಾವಣಾ ಕಚೇರಿ ಎಲ್ಲಿದೆ ಎಂಬುದೇ ಯಾರಿಗೂ ಗೊತ್ತಾಗುತ್ತಿಲ್ಲ. ವ್ಯಾಪಕ ಅಕ್ರಮ ಎಸಗಲಾಗಿತ್ತಿದೆ, ಇಡೀ ಪ್ರಕ್ರಿಯೆ ಗೊಂದಲದ ಗೂಡಾಗಿದೆ ಎಂದು ಆರೋಪಿಸಿದರು. ತಾಲ್ಲೂಕು ಹಂತ ಮತ್ತು ಯೋಜನಾ ಶಾಖೆಗಳಿಗೆ ತಹಶೀಲ್ದಾರರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಯೋಜನಾ ಶಾಖೆಯಲ್ಲಿಯೂ ಗೋಲ್‌ ಮಾಲ್‌

ಆಲಮಟ್ಟಿ ಡ್ಯಾಂ ಸೈ‌ಟ್‌ನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಾಲಯಗಳಿವೆ. ಅಲ್ಲಿ ಹೆಚ್ಚಿಗೆ ನೌಕರರು ಇರುವುದರಿಂದ 1979ರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯೋಜನಾ ಶಾಖೆ ಕಾರ್ಯನಿರ್ವಹಿಸುತ್ತಿದೆ. ಆಲಮಟ್ಟಿ ಡ್ಯಾಂ ಸೈಟ್‌ ನಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಯೋಜನಾ ಶಾಖೆಯಲ್ಲಿ ಒಂದು ನಿರ್ದೇಶಕ ಹುದ್ದೆ 1979ರಿಂದಲೂ ನೀಡುತ್ತಾ ಬರಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಈ ಹುದ್ದೆಯನ್ನು ಹಿಂಪಡೆದು ಅಕ್ರಮ ಎಸೆಗಲಾಗಿದೆ. ಇದಕ್ಕೆ ಕಾರಣ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಆಲಮಟ್ಟಿ ಡ್ಯಾಂ ಸೈಟ್‌ ಶಾಲೆಯ ಶಿಕ್ಷಕ ಚಂದ್ರಶೇಖರ ನುಗ್ಗಲಿ ಅವರು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯ ಪದಾಧಿಕಾರಿಯ ಹುದ್ದೆಯ ಆಕಾಂಕ್ಷಿಯಾಗಿದ್ದು, ಅವರು ಸ್ಪರ್ಧಿಸುವ ಹೆದರಿಕೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಎರಡನೇ ದಿನಕ್ಕೆ ಕಾಲಿಟ್ಟ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ನೌಕರರ ಅನಿರ್ಧಿಷ್ಟ ಧರಣಿ