Sunday, 15th December 2024

Village administrative officer: ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ

Village administrative officer

ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ ಹುದ್ದೆ (Village administrative officer) ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ರಾಜ್ಯ ಸರ್ಕಾರವು ಗ್ರೂಪ್‌ ಬಿ ಮತ್ತು ಗ್ರೂಪ್ ಸಿ‌ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮತ್ತೆ ಅರ್ಜಿ (KEA VAO Recruitment 2024) ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ ಮೂಲಕ ಸೆ.19 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಈ ಬಗ್ಗೆ ಕೆಇಎ ಪ್ರಕಟಣೆ ಹೊರಡಿಸಿದ್ದು, ವಯೋಮಿತಿ ಸಡಿಲಿಕೆ ಮಾಡಿರುವ ಕಾರಣ ಗ್ರಾಮ ಆಡಳಿತಾಧಿಕಾರಿ (ವಿಎಒ) ಮತ್ತು ಜಿಟಿಟಿಸಿ ಹುದ್ದೆಗಳಿಗೆ ಸೆ.19ರಿಂದ 9 ದಿನ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಇ ತಿಳಿಸಿದೆ.

ಈಗಾಗಲೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ಸೆ. 29 ಮತ್ತು ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ.26ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಅಕ್ಟೋಬರ್‌ 27 ರಂದು ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

ಅರ್ಜಿ ಸಲ್ಲಿಕೆ ಯಾವಾಗಿನಿಂದ?

ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ಭರ್ತಿಗೆ ಫೆ.20ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಸೆ. 29ರಂದು ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಅ. 27ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಆದರೆ, ರಾಜ್ಯ ಸರ್ಕಾರವು ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗೆ ಒಂದು ಬಾರಿಯಂತೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶ ನೀಡಿತ್ತು. ಹೀಗಾಗಿ ಹೊಸದಾಗಿ ಸೆ.19ರಿಂದ ಅರ್ಜಿ ಸಲ್ಲಿಕೆಗೆ ಕೆಇಎ ಅವಕಾಶ ನೀಡಿದೆ.

ವಿದ್ಯಾರ್ಹತೆ

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ, ಇತರ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ, ಎನ್.ಐ.ಒ.ಎಸ್ ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ ಎಚ್.ಎಸ್.ಸಿ., 3 ವರ್ಷಗಳ ಡಿಪ್ಲೋಮಾ ಅಥವಾ 2 ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಒ.ಸಿ/ಜೆ.ಒ.ಡಿ.ಸಿ/ಜೆ.ಎಲ್.ಡಿ.ಸಿ)

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಪ್ರವರ್ಗ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ / ಪಂಗಡ, ಪ್ರವರ್ಗ -1, ಮಾಜಿ ಸೈನಿಕರು ಮತ್ತು ವಿಶೇಷ ಚೇತನ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ಹೇಗೆ?

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಕೆಇಎ ಭರ್ತಿ ಮಾಡಲಿದೆ. ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆ ಆಫ್‌ಲೈನ್‌-ಒಎಂಆರ್‌ ಮಾದರಿಯಲ್ಲಿ ಇರುತ್ತದೆ. ಪರೀಕ್ಷೆಗೆ 200 ಅಂಕಗಳನ್ನು ಒಳಗೊಂಡ 2 ಪತ್ರಿಕೆ ಇರಲಿದ್ದು, ಜತೆಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದೆ. ಇದರಲ್ಲಿ ಕನಿಷ್ಠ 50 ಅಂಕ ಗಳಿಸಬೇಕು. ಪರೀಕ್ಷೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ಹಿಂದೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ಆಧಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೆರಿಟ್‌ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿಯಿಂದ ಆಯ್ಕೆ ವಿಧಾನವನ್ನು ಬದಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ | KEA Exam: ಪಿಎಸ್‌ಐ, ವಿಎಒ, ಕೆ-ಸೆಟ್‌ ಸೇರಿ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಸ್ಪರ್ಧಾತ್ಮಕ ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಲಿದೆ. ನಂತರ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರನ್ನು ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯೋಜನೆಗೊಳಿಸಲಾಗುತ್ತದೆ. ನಿಗದಿತ ಮೀಸಲಾತಿಯಂತೆ ಹುದ್ದೆಗಳನ್ನು ಗುರುತಿಸಿ, ಆ ಪ್ರಕಾರ ಹುದ್ದೆ ಭರ್ತಿ ಮಾಡಲಾಗುತ್ತದೆ.