Friday, 22nd November 2024

Viral News: ಕನ್ನಡದಲ್ಲೇ ಮಾತನಾಡುವ ಜರ್ಮನ್‌ ಯುವತಿ; ಈಕೆಯ ಭಾಷಾ ಸೊಗಡು ನೀವೇ ಕೇಳಿ

Viral News

ಬೆಂಗಳೂರು: ಕೆಲವು ದಿನಗಳ ಹಿಂದೆ ಉತ್ತರ ಭಾರತದ (North Indian) ಮಹಿಳೆಯೊಬ್ಬಳು ಬೆಂಗಳೂರಿನ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ʼʼಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ, ನಾವು ಕಟ್ಟುವ ತೆರಿಗೆ ಹಣದಿಂದ” ಎಂದಿರುವ ಈಕೆಗೆ ಹಲವರು ಕಮೆಂಟ್‌ ಮೂಲಕವೇ ಹಿಗ್ಗಾಮುಗ್ಗಾ ಝಾಡಿಸಿದ್ದರು. ಈ ಮಧ್ಯೆ ದೂರದ ಜರ್ಮನ್‌ ಮೂಲದ ಯುವತಿಯೊಬ್ಬರು ಅಚ್ಚ ಕನ್ನಡದಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಇವರ ಈ ಅಭಿಮಾನ ಕನ್ನಡಿಗರ ಮನಗೆದ್ದಿದ್ದು ವೀಡಿಯೊ ವೈರಲ್‌ ಆಗಿದೆ (viral Video).

ವೀಡಿಯೋದಲ್ಲಿ ಏನಿದೆ?

ಪ್ರಸ್ತುತ ಕರ್ನಾಟಕದಲ್ಲಿ ನೆಲೆಸಿರುವ ಜರ್ಮನಿಯ ಜೆನಿಫರ್‌ ಕನ್ನಡವನ್ನು ಕಲಿತು ಕನ್ನಡದಲ್ಲೇ ಮಾತನಾಡಿದ್ದಾರೆ. ಸೀರೆಯುಟ್ಟು ಅವರು ಕನ್ನಡದಲ್ಲಿ ಮಾತನಾಡುವ ವೀಡಿಯೊ ಇದಾಗಿದೆ. ಸೀರೆಯುಟ್ಟು, ಹಣೆಗೆ ಸ್ಟಿಕ್ಕರ್‌ ಇಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿರುವ ಜೆನಿಫರ್‌ ಮಾರುಕಟ್ಟೆಯಲ್ಲಿ ನಡೆದಾಡುತ್ತಾ, ಕನ್ನಡದಲ್ಲೇ ಮಾತನಾಡುತ್ತಾ ಈ ವೀಡಿಯೊ ಮಾಡಿದ್ದಾರೆ. ಈ ವೇಳೆ ಎದುರಾದವರಿಗೆ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿರುವುದು ವಿಶೇಷ.

”ಕನ್ನಡ ಕಲಿಯುತ್ತಿದ್ದೇನೆ. ನನಗೆ ಗೊತ್ತು ನನ್ನ ಕನ್ನಡ ಅಷ್ಟೊಂದು ಚೆನ್ನಾಗಿಲ್ಲ. ಇದಕ್ಕಾಗಿ ಕ್ಷಮಿಸಿ” ಎಂದು ಹೇಳುತ್ತಲೇ ಜೆನಿಫರ್‌ ಮಾತು ಆರಂಭಿಸಿ ಕೋಟ್ಯಾಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ʼʼಈ ಬಗ್ಗೆ ನನ್ನ ಸ್ನೇಹಿತರಿಗೂ ತಿಳಿಸಿದ್ದೇನೆ. ಇದು ಸ್ವಲ್ಪ ಕಷ್ಟ ಅಂತ ಗೊತ್ತು. ಆದರೂ ಪ್ರಯತ್ನಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ. ಈ ವೇಳೆ ಎದುರಾದವರಿಗೆ ಕನ್ನಡದಲ್ಲೇ ನಮಸ್ಕಾರ ಎಂದಿದ್ದಾರೆ. ಜೊತೆಗೆ ಪರಿಚಿತರ ಜೊತೆ ಕನ್ನಡದಲ್ಲೇ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

Che_ಕೃಷ್ಣ ಎನ್ನುವವರು ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ʼʼಜರ್ಮನ್‌ ಮೂಲದ ಜೆನಿಫರ್‌ ಸದ್ಯ ಕರ್ನಾಟಕದಲ್ಲಿ ನೆಲೆಸಿದ್ದು, ಕನ್ನಡ ಕಲಿತು ಸ್ಥಳೀಯರ ಜೊತೆ ಕನ್ನಡದಲ್ಲೇ ಮಾತನಾಡಲು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಜರ್ಮನರು ಕನ್ನಡ ಕಲಿಯಲು ಸಾಧ್ಯವಿರುವಾಗ ಬೆಂಗಳೂರಿನಲ್ಲಿ ನೆಲೆಸಿರುವ, ಭಾರತದವರೇ ಆದ ಪರಭಾಷಿಕರು ಯಾಕೆ ಕನ್ನಡ ಕಲಿಯಬಾರದು?ʼʼ ಎಂದು ಪ್ರಶ್ನಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಸದ್ಯ ಈ ವೀಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಜರ್ಮನ್‌ ಯುವತಿಯ ಭಾಷಾಭಿಮಾನಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ʼʼಇದು ನಿಜ. ನಾನು ಹಲವು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದೇನೆ. ಕನ್ನಡಿಗ ಸ್ನೇಹಿತರ ಜೊತೆ ಮಾತನಾಡಲು ನಾನು ಕನ್ನಡ ಕಲಿತೆ. ನಾವು ಸ್ಥಳೀಯ ಭಾಷೆಯನ್ನು ಕಲಿಯಲು ಯತ್ನಿಸುವುದರಿಂದ ಅವರ ಸಂಸ್ಕೃತಿಗೆ ಗೌರವ ಕೊಟ್ಟಂತಾಗುತ್ತದೆ. ಇದು ಮೂಲಭೂತ ಸಭ್ಯತೆ. ನಾನು ಈಗಲೂ ಕನ್ನಡ ಮಾತನಾಡಬಲ್ಲೆʼʼ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಕಮೆಂಟ್‌ ಮಾಡಿ, ʼʼನಾನು ಉತ್ತರ ಪ್ರದೇಶದ ಮೂಲದವನು. ನನಗೆ ಕನ್ನಡ ಕಲಿಯುವ ಇಚ್ಛೆ ಇದೆ. ಹೇಗೆ ಕಲಿಯುವುದು ಎನ್ನುವುದರ ಬಗ್ಗೆ ದಯವಿಟ್ಟು ಮಾಹಿತಿ ನೀಡಿʼʼ ಎಂದು ಕೇಳಿಕೊಂಡಿದ್ದಾರೆ. ತಮಿಳು ಮೂಲದವರೊಬ್ಬರು ಪ್ರತಿಕ್ರಿಯಿಸಿ, ʼʼಕನ್ನಡ ಕಲಿಯುವುದನ್ನು ಆರಂಭಿಸಿದ್ದೇನೆ. ಇದೊಂದು ಸುಂದರ ಭಾಷೆ. ಇದಕ್ಕಾಗಿ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದೇನೆ. ಕನ್ನಡದಲ್ಲಿರುವ ಅತ್ಯುತ್ತಮ ಚಲನಚಿತ್ರಗಳನ್ನು ಹೆಸರಿಸಿ. ಇದರಿಂದ ಕನ್ನಡ ಕಲಿಯಲು ಸುಲಭವಾಗುತ್ತದೆʼʼ ಎಂದಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೊ ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದಂತೂ ಸತ್ಯ.

ಈ ಸುದ್ದಿಯನ್ನೂ ಓದಿ: Viral Video: ʼಬೆಂಗಳೂರು ನಡೆಯುತ್ತಿರುವುದೇ ಉತ್ತರದವರಿಂದʼ ಎಂದು ಪೊಗರು ತೋರಿಸಿದ ಮಹಿಳೆಗೆ ʼನಡಿಯಾಚೆʼ ಎಂದ ಕನ್ನಡಿಗರು!