Thursday, 21st November 2024

Viral News: ಸತ್ತ ಮರದ ಬುಡ ತೆರವುಗೊಳಿಸಿದರೆ ಹೊಸ ಗಿಡ ನೆಡುತ್ತೇನೆ; ಪುಟ್ಟ ಬಾಲಕಿಯ ಪರಿಸರ ಕಾಳಜಿಗೆ ಮನಸೋತ ನೆಟ್ಟಿಗರು

Viral News

ಬೆಂಗಳೂರು: ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಜಾಗತಿಕ ತಾಪಮಾನಕ್ಕೆ ಇರುವ ಪರಿಹಾರ ಎಂದರೆ ಗಿಡ ನೆಡುವುದು, ಮರಗಳನ್ನು ಉಳಿಸಿ, ಬೆಳೆಸುವುದು ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಅದನ್ನು ಕಾರ್ಯ ರೂಪಕ್ಕೆ ತರುವವರು ವಿರಳ. ಅಂತಹವರಿಗೆಲ್ಲ ಮಾದರಿ ಈ ಬಾಲಕಿ. ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ ತೆರವುಗೊಳಿಸಿ ಬುಡವನ್ನು ಅಲ್ಲೇ ಬಿಟ್ಟುಹೋದ ಬಿಬಿಎಂಪಿ (BBMP) ಸಿಬ್ಬಂದಿಗೆ ಬಾಲಕಿ ಅದನ್ನು ತೆರವುಗೊಳಿಸಿದರೆ ಅಲ್ಲಿ ಹೊಸ ಗಿಡ ನೆಡುವುದಾಗಿ ತಿಳಿಸಿದ್ದಾಳೆ. ʼʼಬಿಬಿಎಂಪಿಯವರು ಬಂದು ಈ ಮರದ ಬುಡವನ್ನೂ ತೆರವುಗೊಳಿಸಿದರೆ ನಾನು ಇಲ್ಲೊಂದು ಹೊಸ ಗಿಡವನ್ನು ನೆಡುತ್ತೇನೆʼʼ ಎಂದು ಭರವಸೆ ನೀಡಿರುವ ವಿಡಿಯೊ ವೈರಲ್‌ ಆಗಿದೆ (Viral News).

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮಲ್ಲೇಶ್ವರದ ವೈಯಾಲಿಕಾವಲ್‌ನ 13ನೇ ಕ್ರಾಸ್‌ನಲ್ಲಿ ಬೃಹತ್‌ ಮರವೊಂದನ್ನು ಉರುಳಿ ಬಿದ್ದಿತ್ತು. ಸ್ಥಳೀಯರ ದೂರಿನನ್ವಯ ತೆರವುಗೊಳಿಸಿದ ಬಿಬಿಎಂಪಿ ಸಿಬ್ಬಂದಿ ಬಿದ್ದಿರುವ ಮರವನ್ನು ಸಂಪೂರ್ಣವಾಗಿ ಕಡಿದುಕೊಂಡು, ಕಟ್ಟಿಗೆಗಳನ್ನು ಟ್ರ್ಯಾಕ್ಟರ್‌ಗೆ ತುಂಬಿಕೊಂಡು ಹೋದರು. ಆದರೆ ಮರದ ಬೃಹತ್ ಗಾತ್ರದ ಬುಡವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ರಸ್ತೆಯ ಪಕ್ಕದಲ್ಲಿ ಖಾಲಿ ಮರದ ಬುಡ ಮಾತ್ರ ಕಾಣುತ್ತಿದೆ. ಈ ಬಗ್ಗೆೆ ಸ್ಥಳೀಯ 7-8 ವರ್ಷದ ಪುಟ್ಟ ಬಾಲಕಿ ಶಿವನ್ಯಾ ವಿಡಿಯೊವೊಂದನ್ನು ಮಾಡಿ ಈ ಮರದ ಖಾಲಿ ಬುಡವನ್ನೂ ತೆರವು ಮಾಡಿದರೆ ತಾನೊಂದು ಗಿಡ ನೆಡುವುದಾಗಿ ಹೇಳಿದ್ದಾಳೆ.

ವಿಡಿಯೊದಲ್ಲಿ ಏನಿದೆ?

ʼʼಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಬಿಬಿಎಂಪಿಯವರೇ ನಮಸ್ಕಾರ. ನಾನು ಶಿವನ್ಯಾ ವೈಯಾಲಿಕಾವಲ್ 13ನೇ ಕ್ರಾಸ್‌ನಿಂದ ಮಾತನಾಡುತ್ತಿದ್ದೇನೆ. ಆವತ್ತು ಜೋರಾದ ಗಾಳಿ, ಮಳೆಗೆ ಈ ಮರ ಬಿದ್ದು ಹೋಯ್ತು. ಪುಣ್ಯಕ್ಕೆ ಯಾರಿಗೂ ಏನೂ ಅನಾಹುತ ಆಗಲಿಲ್ಲ. ಬಿಬಿಎಂಪಿಯವರು ಬಂದು ಮರ ಕಡಿದುಕೊಂಡು ಹೋದರು. ಆದರೆ ಈ ಬುಡ ಮಾತ್ರ ಉಳಿದಿದೆ. ನೀವು ಇದ್ದನ್ನೂ ತೆರವುಗೊಳಿಸಿ ಸ್ವಚ್ಛಗೊಳಿಸಿ ಕೊಟ್ಟರೆ ಇಲ್ಲಿ ನಾನೊಂದು ಹೊಸ ಗಿಡ ನೆಡುತ್ತೇನೆ. ಇದು ನನ್ನ ಪ್ರಾಮಿಸ್ʼʼ ಎಂದು ಹೇಳಿದ್ದಾಳೆ.

ನೆಟ್ಟಿಗರಿಂದ ಮೆಚ್ಚುಗೆ

ವೆಂಕಿ ಅಡಿಗ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಪುಟ್ಟ ಬಾಲಕಿಯ ಪರಿಸರ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆಕೆಯ ಕಾಳಜಿಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ʼʼಸೂಪರ್ ಪುಟಾಣಿ. ನಿಮ್ಮ ವಿಡಿಯೊವನ್ನು ನಾನು ಖಂಡಿತ ಸಿಎಂ ಅವರಿಗೆ ತಲುಪಿಸುತ್ತೇನೆʼʼ ಎಂದು ಬರೆದುಕೊಂಡಿರುವ ಒಬ್ಬರು ಮುಖ್ಯಮಂತ್ರಿಯನ್ನು ಟ್ಯಾಗ್‌ ಮಾಡಿದ್ದಾರೆ. ”ಕೂಡಲೇ ಕ್ರಮ ಕೈಗೊಳ್ಳಿ” ಎಂದು ಇನ್ನೊಬ್ಬರು ಬಿಬಿಎಂಪಿಯನ್ನು ಕೇಳಿಕೊಂಡಿದ್ದಾರೆ. ʼʼದಯವಿಟ್ಟು ಇತ್ತ ಗಮನ ಹರಿಸಿʼʼ ಎಂದು ಮತ್ತೊಬ್ಬರು ಸರ್ಕಾರದ ಗಮನ ಸೆಳೆದಿದ್ದಾರೆ. ʼʼಈ ವಿಡಿಯೊವನ್ನು ಶೇರ್‌ ಮಾಡಿʼʼ ಎಂದು ಕೆಲವರು ಮನವಿ ಮಾಡಿದ್ದಾರೆ. ಬಾಲಕಿಯ ಪ್ರಯತ್ನಕ್ಕೆ ಫಲ ಸಿಕ್ಕರೆ ಸಾಕು ಎಂದು ಹಲವರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಬಾಲಕಿಯ ಈ ವಿಡಿಯೊ ಗಮನ ಸೆಳೆದಿದ್ದಂತೂ ಹೌದು.

ಇದನ್ನೂ ಓದಿ : Rahul Gandhi: ದಿಲ್ಲಿಯ ಸಲೂನ್‌ಗೆ ರಾಹುಲ್‌ ಗಾಂಧಿ ಭೇಟಿ- ಗಡ್ಡ ಟ್ರಿಮ್‌ ಮಾಡಿಸ್ಕೊಂಡು ಕ್ಷೌರಿಕನ ಜೊತೆ ಚಿಟ್‌ಚಾಟ್‌-ವಿಡಿಯೋ ವೈರಲ್‌