| ಪ್ರತ್ಯಕ್ಷ ವರದಿ: ರಾಜು ಅಡಕಳ್ಳಿ
ಕರ್ನಾಟಕದಿಂದ ಜಪಾನ್ ಸುಮಾರು ಏಳು ಸಾವಿರ ಕಿ.ಮೀ ದೂರದಲ್ಲಿದ್ದರೂ ಅಲ್ಲಿನ ಅನೇಕ ವಸ್ತುಗಳ ಮೂಲಕ ಭಾರತ ಮತ್ತು ಜಪಾನ್ ನಡುವೆ ನಿರಂತರ ಸಂಬಂಧಗಳಿವೆ. ಈ ನಂಟಿಗೆ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಗಂಟನ್ನು ಹಾಕಿ ಹೊಸ ಸಂಚಲನ ಮೂಡಿಸುವ ನಿಟ್ಟಿನಲ್ಲಿ ‘ವಿಶ್ವವಾಣಿ’ಯು ಟೋಕಿಯೋದಲ್ಲಿ ಏರ್ಪಡಿಸಿದ್ದ ಗ್ಲೋಬಲ್ ಅಚೀವರ್ಸ್ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ (Vishwavani Global Achievers Award) ಯಶಸ್ವಿಯಾಗಿ ನಡೆಯಿತು.
‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ಬೆಂಗಳೂರಿನಿಂದ 50 ಮಂದಿ ಸಾಧಕರ, ವಿವಿಧ ಕ್ಷೇತ್ರಗಳ ದಿಗ್ಗಜರ ವಿಶೇಷ ನಿಯೋಗವೊಂದು ಕಳೆದ ಒಂದು ವಾರದಿಂದ ಜಪಾನಿನ ವಿವಿಧ ಐತಿಹಾಸಿಕ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಜಗತ್ತಿನಲ್ಲಿಯೇ ಅತ್ಯಂತ ಶಿಸ್ತಿನ ದೇಶವೆಂದು ಹೆಸರು ಪಡೆದಿರುವ ಜಪಾನಿನ ಜೀವಜೀವನ, ವೈಶಿಷ್ಟ್ಯಗಳನ್ನು ಅರಿತುಕೊಳ್ಳುವ ಪ್ರಯತ್ನ ನಡೆಸಿತು.
22 ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ
ಈ ನಿಯೋಗದ ಪ್ರವಾಸದ ಸಂದರ್ಭದಲ್ಲಿಯೇ ಜಪಾನ್ ರಾಜಧಾನಿ ಟೋಕಿಯೋದ ಗಿಂಜಾ ಪ್ರದೇಶದಲ್ಲಿ ವಿಶೇಷ ಸಮಾರಂಭವೊಂದನ್ನು ಏರ್ಪಡಿಸಿ, ಕನ್ನಡ, ನಾಡು, ನುಡಿ ಮತ್ತಿತರ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 22 ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪುರಸ್ಕೃತರು
- ಆರಗ ಜ್ಞಾನೇಂದ್ರ, ಶಾಸಕರು
- ಅವಧೂತ ಶ್ರೀ ಬಿಂದುಮಾಧವ ಶರ್ಮ ಪರವಾಗಿ ಶ್ರೀ ವಿಜಯ ಮಾರುತಿ ಶರ್ಮಾ ಗುರೂಜಿ
- ಎಚ್.ಎಸ್. ಚಂದ್ರಮೌಳಿ
- ಲತಿಕಾ ಜಿ.ಭಟ್
- ಎಚ್.ಎಂ. ರಾಮಚಂದ್ರ
- ರಕ್ಷಿತ್ ಜಿ.
- ಗಣಪತಿ ನಾರಾಯಣ ಹೆಗಡೆ
- ಹುಲಿ ಕಾರ್ತಿಕ್
- ಉಮೇಶ್ ಬಿ.ಎನ್.
- ಕೆ. ನಾಗರಾಜ್ ಅಡಿಗ
- ಕೆ.ಎಸ್. ಹರೀಶ್
- ಡಾ.ಕೆ.ವಿ. ಸಿದ್ದರಾಜು
- ಲೋಕೇಶ್ ಆರ್.ಎಚ್
- ಕೆ. ಮಂಜುನಾಥ
- ಡಾ. ಬಸವರಾಜ್ ವಿ. ಬಳ್ಳಾರಿ
- ರಾಘವೇಂದ್ರ ಎಚ್.ಎನ್
- ಡಾ. ಚೌಡಯ್ಯ
- ನವೀನ ಸಿ.ವಿ
- ವಿಜಯಕುಮಾರ್ ಎಸ್.ಕೆ
- ಜಗನಾಥ್ ಹಲಿಂಗೆ
- ವಿಜಯ ರಾಘವೇಂದ್ರನ್
- ಕೆ.ಎಂ. ಶ್ರೀಶ
ಅನೇಕ ಕನ್ನಡ ಬಾಂಧವರ ಆಗಮನ
ಈ ಸಮಾರಂಭಕ್ಕೆೆ ಜಪಾನಿನ ವಿವಿಧ ಪ್ರಾಂತ್ಯಗಳಲ್ಲಿ ಕೆಲಸ ಮಾಡುತ್ತಾ, ಬದುಕು ಕಟ್ಟಿಕೊಂಡಿರುವ ಅನೇಕ ಕನ್ನಡ ಬಾಂಧವರು ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಕಳೆಕಟ್ಟಿದರು. ಹೆಣ್ಣುಮಕ್ಕಳಿಗೆ ತಮ್ಮ ತವರುಮನೆಯಿಂದ ಯಾರಾದರೂ ಬಂದರೆ ಎಷ್ಟೊಂದು ಖುಷಿಯಾಗುತ್ತದೆಯೋ, ಅದೇ ರೀತಿ ಭಾವನಾತ್ಮಕ ಅನುಭೂತಿ ಈ ‘ವಿಶ್ವವಾಣಿ’ ಕಾರ್ಯಕ್ರಮದಿಂದ ಸಿಕ್ಕುವಂತಾಗಿದೆ ಎಂದು ಹಲವು ಅನಿವಾಸಿ ಕನ್ನಡ ಮಿತ್ರರು ಈ ಸಮಾರಂಭದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದು ವಿಶೇಷವಾಗಿತ್ತು.
ನಾವು ನಿತ್ಯ ಬಳಸುವ ಮೋಟರ್ ಸೈಕಲ್, ಕಾರು, ಟೇಪ್ ರೆಕಾರ್ಡರ್ ಮುಂತಾದ ಅನೇಕ ವಸ್ತುಗಳು ಜಪಾನಿಯರ ಕೊಡುಗೆಗಳಾಗಿವೆ. ಹೋಂಡಾ, ಯಮಹಾ, ಕವಾಸಕಿ, ಸುಜುಕಿ ದ್ವಿಚಕ್ರ ವಾಹನಗಳು, ಟೊಯೋಟಾ, ನಿಸ್ಸಾನ್ ಕಾರುಗಳು, ಸೋನಿ, ನ್ಯಾಷನಲ್ ಪ್ಯಾನಸೋನಿಕ್ ಮುಂತಾದ ಕಂಪನಿಗಳ ಉಪಕರಣಗಳ ಜನಕರು ಈ ಜಪಾನಿಯರೇ. ಹೀಗೆ ಹಲವು ವಿಧಗಳ ತಂತ್ರಜ್ಞಾನಗಳ ಕೊಡು-ತೆಗೆದುಕೊಳ್ಳುವಿಕೆಯ ಬಾಂಧವ್ಯವಿರುವ ಜಪಾನಿನೊಂದಿಗೆ, ಅದರಲ್ಲಿಯೂ ಮುಖ್ಯವಾಗಿ ಜಪಾನಿನಲ್ಲಿರುವ ಕನ್ನಡಿಗರೊಂದಿಗೆ ಪ್ರೀತಿ, ಸ್ನೇಹಗಳ ಭಾವನಾತ್ಮಕ ಬಂಧ ಗಟ್ಟಿಗೊಳಿಸುವ ಹೊಸ ಪ್ರಯತ್ನವಾಗಿ ವಿಶ್ವೇಶ್ವರ ಭಟ್ಟರ ಉಸ್ತುವಾರಿಯಲ್ಲಿ ನಡೆದ ಸಾಧಕರ ಸಂಗಮ ಸಮಾರಂಭ ಅರ್ಥಪೂರ್ಣ ಎಂಬ ಸಾರ್ವತ್ರಿಕ ಪ್ರಶಂಸೆ, ಜಪಾನಿನಲ್ಲಿರುವ ಅನಿವಾಸಿ ಕನ್ನಡಿಗರಿಂದ ವ್ಯಾಪಕವಾಗಿ ವ್ಯಕ್ತವಾಯಿತು.
ನಾನಾ ಕ್ಷೇತ್ರದ ಗಣ್ಯರು ಭಾಗಿ
‘ವಿಶ್ವವಾಣಿ’ಯ ಈ ವಿಶ್ವ ಪರ್ಯಟನೆಯ ನಿಯೋಗದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ವಿಜಯ ಮಾರುತಿ ಶರ್ಮ ಗುರೂಜಿ, ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ, ಲೇಖಕಿ ಫ್ಯಾನ್ಸಿ ಮುತ್ತಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
ಭಾರತ-ಜಪಾನ್ ದೇಶಗಳ ರಾಷ್ಟ್ರಗೀತೆಗಳೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಕಿರಣ್‌ಕುಮಾರ್ ಅವರು ನಿರ್ವಹಿಸಿದರು. ವಿಶ್ವವಾಣಿ ಮಾರ್ಕೆಟಿಂಗ್ ಮ್ಯಾನೇಜರ್ ನಾಗಾರ್ಜುನ್ ವಂದಿಸಿದರು. ಈ ವೇಳೆ ವಿಶ್ವವಾಣಿ ಸಿಇಒ ಚಿದಾನಂದ್ ಕಡಲಾಸ್ಕರ, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ, ಲೇಖಕಿ ಫ್ಯಾನ್ಸಿ ಮುತ್ತಣ್ಣ, ಉದ್ಯಮಿ ಮುತ್ತಣ್ಣ, ಸಿದ್ದೇಶ್ ಹಾಸನಹಳ್ಳಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಜಪಾನಿನಲ್ಲಿರುವ ಅನೇಕ ಅನಿವಾಸಿ ಭಾರತೀಯರು ಆಗಮಿಸಿದ್ದು ವಿಶೇಷವಾಗಿತ್ತು. ಇವರಲ್ಲಿ ಪ್ರಮುಖರೆಂದರೆ ರವಿ ರಾಮಕೃಷ್ಣ, ರೇವತಿ ರಚಿ, ಯೋಕೋಹಾಮಾ, ವಿನಯ್ ದೊಡ್ಡೇರಿ, ಅಶೋಕ್ ಸಿಂಗಾರೆಡ್ಡಿ, ಜಿಷ್ಣು, ಅಕ್ಷಯ್ ಹೆಗಡೆ, ಮನೋಜ್ ಮೈಸೂರು, ನಾಗಶ್ರೀ ಎಂ.ಎಸ್. ಶ್ವೇತಾ ಆರಾಧ್ಯ, ಖಾತ್ರಿ ಅಂಕಿತ್, ಸಂದೀಪ್ ಗುಂಡಪ್ಪ, ಅನಿಲ್ ರಾಜ್, ಎ.ಎಲ್. ಗಂಗಾಧರ್, ಗಗನಾ ಹೆಗಡೆ, ಸತ್ಯ ಜಯಂತ್, ಗೋಪಿ ನೊಹರಾ ಸೇರಿ ಅನೇಕರಿದ್ದರು. ಕರ್ನಾಟಕ ಸರಕಾರದ ಅನಿವಾಸಿ ಭಾರತೀಯರ ಫೋರಂನ ಉಪಾಧ್ಯಕ್ಷೆೆ ಡಾ. ಆರತಿ ಕೃಷ್ಣ ಅವರು ವಿಶ್ವವಾಣಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಪಾನಿನಲ್ಲಿರುವ ಕನ್ನಡಿಗರ ಕಷ್ಟ-ಸುಖಗಳನ್ನು ಆಲಿಸಿ ಸ್ಪಂದಿಸಿದ್ದು ವಿಶೇಷವಾಗಿತ್ತು.
ಮೊದಲು ಸೂರ್ಯ ಉದಯಿಸುವ ನಾಡು ಜಪಾನ್. ತಂತ್ರಜ್ಞಾನ ವೈಜ್ಞಾನಿಕ ಆವಿಷ್ಕಾರಗಳಲ್ಲಂತೂ ಈ ಪುಟ್ಟ ದೇಶದ್ದು ದೊಡ್ಡ ಸಾಧನೆ. ತನ್ನ ಮೇಲೆ ಪರಮಾಣು ಬಾಂಬ್ ದಾಳಿ ನಡೆದರೂ, ಅತ್ಯಂತ ಕ್ಷಿಪ್ರ ಅವಧಿಯಲ್ಲೇ ಮತ್ತೆೆ ಚೇತರಿಸಿಕೊಂಡು ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದ ಹಿರಿಮೆ ಜಪಾನಿಯರದ್ದು. ಭೂಕಂಪ ಪೀಡಿತ ಪ್ರದೇಶವಾಗಿದ್ದರೂ ಇವರು ನಗರಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಕಟ್ಟಿಕೊಂಡು ತಮ್ಮ ನೆಲೆಯನ್ನು ಸುರಕ್ಷಿತವಾಗಿಟ್ಟುಕೊಂಡಿದ್ದಾರೆ. ಸಮಯ ಪಾಲನೆಗೆ, ಶಿಸ್ತಿನ ಜೀವನಕ್ಕೆೆ ಜಪಾನಿಯರು ಇಡೀ ಜಗತ್ತಿಗೆ ಮಾದರಿ. ಟೋಕಿಯೋದಂತಹ ಜನನಿಬಿಡ ಪ್ರದೇಶಗಳಲ್ಲೂ ಎಲ್ಲೂ ಕಸ, ಕೊಳಚೆ ಇಲ್ಲದೇ ತನ್ನ ಪ್ರತಿಷ್ಠೆೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿಕೊಂಡಿರುವ ಅಪರೂಪದ ದೇಶ ಇದು. ಇವುಗಳನ್ನೆೆಲ್ಲಾ ‘ವಿಶ್ವವಾಣಿ’ಯ ವಿಶ್ವಪ್ರವಾಸದಲ್ಲಿ ಪ್ರತ್ಯಕ್ಷ ನೋಡುವಾಗ “ಜೈ ಜವಾನ್, ಜೈ ಜಪಾನ್” ಎಂಬ ಉದ್ಗಾರ ಬರುವುದು ಸಹಜ.
ಎಲೆಮರೆಯ ಕಾಯಿಗಳನ್ನು ಗುರುತಿಸುವುದು ನಮ್ಮ ಕರ್ತವ್ಯ
ಕಾರ್ಯಕ್ರಮದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಎಲೆ ಮರೆಯ ಕಾಯಿಗಳಂತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ವಿದೇಶಗಳಲ್ಲಿ ಈ ರೀತಿ ಸಾಧಕರೊಂದಿಗೆ ವಿಶೇಷ ನಿಯೋಗದಲ್ಲಿ ತೆರಳಿ, ಆಯಾ ದೇಶಗಳ ಕಲೆ, ಸಂಸ್ಕೃತಿ, ರಾಜಕೀಯ, ಆರ್ಥಿಕ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡರೆ ಹಲವು ಪುಸ್ತಕಗಳನ್ನು ಓದಿದ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಪಾನ್ ಭಾಷೆಯಲ್ಲಿ ನಸೀಬಾ ನಾರು ಎಂದರೆ ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು. ಅದೇ ರೀತಿ ಹಲವು ಸವಾಲುಗಳ ನಡುವೆಯೂ ಜಪಾನಿನಂತಹ ದೂರದ ರಾಷ್ಟ್ರದಲ್ಲಿ ‘ವಿಶ್ವವಾಣಿ’ಯು ಈ ಕಾರ್ಯಕ್ರಮ ಸಂಪನ್ನಗೊಂಡಿರುವುದು ಸಂತೋಷದ ವಿಷಯ ಎಂದು ವಿಶ್ವೇಶ್ವರ ಭಟ್ ಹೇಳಿದರು.
ಕಳೆದ ಒಂದು ವರ್ಷದಲ್ಲಿ ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ, ಮಾಲ್ಡೀವ್ಸ್, ಮಾರಿಷಸ್ ರಾಷ್ಟ್ರಗಳಲ್ಲಿ ಕನ್ನಡದ ಸಾಧಕರನ್ನು ಪ್ರೋತ್ಸಾಹಿಸುವ ‘ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿ, ಇದೀಗ ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಪದಾರ್ಪಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ‘ವಿಶ್ವವಾಣಿ’ಯು ತನ್ನ ಪತ್ರಿಕೋದ್ಯಮದ ಕಾಯಕದ ಜತೆಗೆ ಸಾಂಸ್ಕೃತಿಕ ರಾಯಭಾರಿ ಕೆಲಸವನ್ನೂ ಮುಂದುವರಿಸುವ ಸಂಕಲ್ಪ ಮಾಡಿದೆ ಎಂದು ವಿವರಿಸಿದರು.
ವಿಶ್ವವಾಣಿಯ ಗ್ಲೋಬಲ್ ಫೋರಂ ಚಟುವಟಿಕೆಗಳಿಗೆ ಹಿರಿಯ ನಟಿ, ಮಾಜಿ ಸಚಿವೆ ಜಯಮಾಲಾ ಅವರು ಸದಾ ಬೆಂಬಲಿಸುತ್ತಾ ಬಂದಿದ್ದಾರೆ. ಅವರು ನಮ್ಮ ಈ ಕಾರ್ಯಕ್ರಮದ ಸಾಂಸ್ಕೃತಿಕ ರಾಯಭಾರಿ ಎಂದು ಹೇಳುವುದಕ್ಕೆೆ ಹೆಮ್ಮೆಯಿದೆ ಎಂದು ಭಟ್ ಹೇಳಿದರು.
ಶಿಸ್ತು, ಸ್ವಚ್ಛತೆ, ಸಮಯ ಪಾಲನೆ, ತಾಂತ್ರಿಕ ಕೌಶಲ್ಯ ಈ ಮುಂತಾದ ಹಲವು ಕ್ಷೇತ್ರಗಳಲ್ಲಿ ಜಪಾನಿಯರಿಂದ ನಾವು ಕಲಿಯುವುದು ಸಾಕಷ್ಟಿವೆ. ಈ ರೀತಿಯ ಜೀವನಾನುಭವ ಕಲಿಸಿಕೊಡುವ ವಿದೇಶ ಪ್ರವಾಸಗಳಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವು ಅನುಕೂಲಗಳಿವೆ ಎಂದು ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
ವಿದೇಶಗಳಲ್ಲಿ ಈ ರೀತಿ ಸಾಧಕರೊಂದಿಗೆ ವಿಶೇಷ ನಿಯೋಗದಲ್ಲಿ ತೆರಳಿ, ಆಯಾ ದೇಶಗಳ ಕಲೆ, ಸಂಸ್ಕೃತಿ, ರಾಜಕೀಯ, ಆರ್ಥಿಕ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡರೆ ಹಲವು ಪುಸ್ತಕಗಳನ್ನು ಓದಿದ ಜ್ಞಾನ ಪ್ರಾಪ್ರಿಯಾಗುತ್ತದೆ. ಸದ್ಯದಲ್ಲಿಯೇ ವಿಶ್ವವಾಣಿ ಬಳಗದಿಂದ ಪ್ರವಾಸಿ ಪ್ರಪಂಚ ಎಂಬ ಪ್ರವಾಸೋದ್ಯಮಕ್ಕೆೆ ಮೀಸಲಾದ ನಿಯತಕಾಲಿಕವನ್ನೂ ಪ್ರಕಟಿಸಲಾಗುವುದು.
| ವಿಶ್ವೇಶ್ವರ ಭಟ್, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ
ವಿಶ್ವವಾಣಿಗೆ ದಶಕದ ಸಂಭ್ರಮ
ಮುಂದಿನ ಸಂಕ್ರಾಂತಿಗೆ ‘ವಿಶ್ವವಾಣಿ’ಗೆ ಹತ್ತು ವರ್ಷ ತುಂಬುತ್ತದೆ. ಆರು ಆವೃತ್ತಿಗಳಲ್ಲಿ ಪ್ರಕಟವಾಗುತ್ತಿರುವ ವಿಶ್ವವಾಣಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ರಾಜ್ಯಮಟ್ಟದ ಪತ್ರಿಕೆಯಾಗಿರುವುದು ವಿಶೇಷ. ಪುಸ್ತಕ ಪ್ರಕಾಶನವನ್ನೂ ‘ವಿಶ್ವವಾಣಿ’ ಪ್ರಾರಂಭಿಸಿ ಈಗಾಗಲೇ 40 ಕನ್ನಡ ಕೃತಿಗಳನ್ನು ಪ್ರಕಟಿಸಿದೆ. ಇದರೊಂದಿಗೆ ವಿಶ್ವವಾಣಿಯ ಮಾಧ್ಯಮ ವಿದ್ಯಾಪೀಠವನ್ನೂ ಪ್ರಾರಂಭಿಸಿ ಪತ್ರಿಕೋದ್ಯಮ ಶಿಕ್ಷಣ- ತರಬೇತಿ ನೀಡುತ್ತಿದೆ. ಕ್ಲಬ್‌ಹೌಸ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ, 1100ಕ್ಕೂ ಹೆಚ್ಚು ಕ್ಲಬ್‌ಹೌಸ್ ಕಾರ್ಯಕ್ರಮಗಳನ್ನು ಈಗಾಗಲೇ ಪ್ರಸ್ತುತಪಡಿಸಿರುವುದು ಹೊಸ ದಾಖಲೆಯಾಗಿದೆ. ಶಿರಸಿಯಿಂದ ಲೋಕಧ್ವನಿ ಪತ್ರಿಕೆಗೂ ಹೊಸ ಸ್ವರೂಪ ನೀಡಿ, ಈ ಪತ್ರಿಕೆಯ ಕೊಪ್ಪಳ ಮತ್ತು ಗಂಗಾವತಿ ಆವೃತ್ತಿಗಳನ್ನು ಶೀಘ್ರವೇ ಪ್ರಾಾರಂಭಿಸುವ ಉದ್ದೇಶವನ್ನು ವಿಶ್ವವಾಣಿ ಸಂಸ್ಥೆೆ ಹೊಂದಿದೆ. ಇದೀಗ ವಿಶ್ವವಾಣಿ ಟಿವಿ ಡಿಜಿಟಲ್ ಆವೃತ್ತಿಯನ್ನೂ ಆರಂಭಿಸಲಾಗಿದೆ ಎಂದು ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ವಿವರಿಸಿದರು.
ಜೀವನದಲ್ಲಿ ಪುಟಿದೇಳಲು ಜಪಾನ್ ಉತ್ತಮ ಉದಾಹರಣೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು, ನಯ, ವಿನಯ, ಸೌಜನ್ಯತೆ, ಅತಿಥಿ ಸತ್ಕಾರದಂತಹ ಆದರ್ಶ ಗುಣಗಳು ಜಪಾನಿಯರಲ್ಲಿ ಮೈಗೂಡಿದೆ. ಇದಕ್ಕೆೆ ಕಾರಣ ಅವರಲ್ಲಿನ ಉತ್ತಮ ಸಂಸ್ಕೃತಿ. ಉತ್ತಮ ಸಂಸ್ಕೃತಿ ಇರುವಲ್ಲಿ ಜನಜೀವನವೂ ಉತ್ತಮವಾಗಿರುತ್ತದೆ ಎಂಬುದಕ್ಕೆೆ ಈ ಜಪಾನ್ ದೇಶವೇ ಸಾಕ್ಷಿ. ಸೋಲು, ಹತಾಶೆಗಳಿಂದ ಕುಗ್ಗದೆ, ಸಾಧನೆಯಲ್ಲಿ ಪುಟಿದೇಳಲು ಸಾಧ್ಯ ಎಂಬುದಕ್ಕೆೆ ಜಪಾನ್ ಸೂಕ್ತ ನಿದರ್ಶನ ಎಂದು ಅಭಿಪ್ರಾಯಪಟ್ಟರು.
ಹಿರೋಶಿಮಾ- ನಾಗಾಸಾಕಿ ಮೇಲೆ ಬಾಂಬ್ ದಾಳಿ ನಡೆದಾಗ ಈ ಪುಟ್ಟದೇಶದ ಕಥೆ ಮುಗಿದೇ ಹೋಯಿತು ಎನ್ನಲಾಗಿತ್ತು. ಆದರೆ ಇದನ್ನೇ ದೊಡ್ಡ ಸವಾಲಾಗಿ ಸ್ವೀಕರಿಸಿದ ಜಪಾನಿಯರು ಇಂದು ಅನೇಕ ಕ್ಷೇತ್ರಗಳಲ್ಲಿ ನಮಗೆಲ್ಲ ಮಾದರಿಯಾಗಿದ್ದಾರೆ. ಇಂಥ ಉದಾತ್ತ ದೇಶಗಳನ್ನು ಪರಿಚಯಿಸಿ, ಭಾರತೀಯ ಸಂಸ್ಕೃತಿ, ಸಾಧನೆ, ಪತ್ರಿಕೋದ್ಯಮವನ್ನು ವಿದೇಶಗಳಲ್ಲೂ ಪಸರಿಸುವಂತೆ ‘ವಿಶ್ವವಾಣಿ’ಯ ಮೂಲಕ ವಿಶ್ವೇಶ್ವರ ಭಟ್ಟರು ಈ ಸಮಾರಂಭವನ್ನು ಯಶಸ್ವಿಯಾಗಿ ಏರ್ಪಡಿಸಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.
ವಿಶ್ವವಾಣಿ ಹೊರದೇಶದ ಕಾರ್ಯಕ್ರಮಗಳು ಶ್ಲಾಘನೀಯ
ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆೆ ಆರತಿ ಕೃಷ್ಣ ಅವರು, ಹೊರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರಕಾರಗಳಿಗೂ ಸವಾಲಿನ ಕೆಲಸ. ಆದರೆ ಇಂತಹ ಸವಾಲಿನ ಕೆಲಸವನ್ನು ವಿಶ್ವವಾಣಿ ಸಮರ್ಥವಾಗಿ, ನಿರಂತರವಾಗಿ ಮಾಡುತ್ತಾ ಯಶಸ್ವಿಯಾಗಿರುವುದು ಶ್ಲಾಘನೀಯ. ಈ ಬಗ್ಗೆೆ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳು. ‘ವಿಶ್ವವಾಣಿ’ಯು ಈ ರೀತಿ ವಿದೇಶಗಳಲ್ಲಿ ಸಮಾರಂಭ ಏರ್ಪಡಿಸುವುದರಿಂದ ಅಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೊಸ ಉತ್ಸಾಹ, ಸ್ಫೂರ್ತಿ ಸಿಗುವುದಕ್ಕೆೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಕೆಲ ಕಾರ್ಮಿಕರಿಗೆ ಜಪಾನಿ ಭಾಷೆ ಕಲಿಸಿ
ಜಪಾನಿನಲ್ಲಿ ಕಾರ್ಮಿಕರಿಗೆ ಬಹುದೊಡ್ಡ ಪ್ರಮಾಣದಲ್ಲಿ ಬೇಡಿಕೆಯಿದೆ. ನಮ್ಮ ಕರ್ನಾಟಕದಲ್ಲಿ ಕೆಲವರಿಗೆ ಜಪಾನ್ ಭಾಷೆ ಕಲಿಸಿದರೆ ಅವರಿಗೆ ಜಪಾನಿನಲ್ಲಿ ಕೆಲಸ ಸಿಗಲು ಸಾಧ್ಯ. ಆದ್ದರಿಂದ ಎನ್‌ಆರ್‌ಐ ಫೋರಂ ಮೂಲಕ ಅವರಿಗೆ ಕನ್ನಡ ಕಲಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆೆ ಇಂದು ಭಾರತ-ಜಪಾನ್ ರಾಯಭಾರ ಕಚೇರಿಯಲ್ಲೂ ಸಭೆ ನಡೆಸಲಾಯಿತು ಎಂದರು.
ಬೇರೆ ಬೇರೆ ದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೆ ವೇದಿಕೆ ಕಲ್ಪಿಸಲು, ಅವರ ಕಷ್ಟಸುಖಗಳಿಗೆ ನಾವೂ ಸ್ಪಂದಿಸುವಂತಾಗಲು ಕರ್ನಾಟಕ ಸರಕಾರದಿಂದ ಪ್ರವಾಸಿ ದಿವಸ್ ಆಚರಿಸುವ ಬಗ್ಗೆೆ ನಿರ್ಧರಿಸಲಾಗಿದೆ. ಅನಿವಾಸಿ ಭಾರತೀಯರ ಚಟುವಟಿಕೆಗಳನ್ನು ಉತ್ತೇಜಿಸಲು, ಎನ್‌ಆರ್‌ಐ ಫೋರಮ್‌ನಿಂದ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೊಳಿಸಲು ಸರಕಾರದಿಂದ ಇನ್ನೂ ಹೆಚ್ಚಿನ ಬಜೆಟ್ ನೆರವು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ ಜಾತಿ ವ್ಯವಸ್ಥೆೆ ತೊಲಗಬೇಕು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕುಂಚಿಟಿಗ ಮಹಾ ಸಂಸ್ಥಾನ ಹೊಸದುರ್ಗದ ಶ್ರೀ ಶಾಂತವೀರ ಮಹಾಸ್ವಾಮೀಜಿಯವರು, ಭಾರತದಲ್ಲಿ ಜಾತಿ ವ್ಯವಸ್ಥೆೆ ಮತ್ತು ಭ್ರಷ್ಟಾಚಾರ ತೊಲಗಿದರೆ ಜಪಾನಿನಂತೆಯೇ ಭಾರತವೂ ಮೂಲ ಸೌಕರ್ಯ ನಿರ್ಮಾಣ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಬಹುದು. ಸರಕಾರ ಮತ್ತು ಮಠಗಳಲ್ಲಿ ಜಾತಿ ಆಧಾರಿತವಾದ ಯಾವುದೇ ಮಾನದಂಡಗಳಿರಬಾರದು. ಜಾತಿ ಎಂಬ ಕಾಲಮ್ಮನ್ನೇ ದಾಖಲೆಗಳಿಂದ ತೆಗೆದು ಹಾಕಬೇಕು. ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ವಿಶ್ವವಾಣಿ ಗ್ಲೋಬಲ್ ಫೋರಂನಿಂದ ಈಗಾಗಲೇ ವಿವಿಧ ದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುವಂತಾಗಲಿ ಎಂದು ಆಶಿಸಿದರು.
ಜಪಾನಿನಲ್ಲೂ ದಕ್ಷಿಣ ಭಾರತದೂಟ
ದೂರದ ಜಪಾನಿನಲ್ಲಿ ಭಾರತೀಯ ಶೈಲಿಯ ಊಟ ಸಿಗುವುದೇ ಅಪರೂಪ. ಆದರೆ ಭಾರತದಿಂದ ಜಪಾನಿಗೆ ತೆರಳಿದ್ದ ನಿಯೋಗಕ್ಕೆೆ ಕನ್ನಡಿಗ ಅನಿಲ್‌ರಾಜ್ ಅವರ ನಿರ್ವಾಣಮ್ ಹೋಟೆಲ್‌ನಲ್ಲಿ ದಕ್ಷಿಣ ಭಾರತ ಶೈಲಿಯ ಊಟೋಪಚಾರದ ಅತಿಥ್ಯ ನಿಯೋಗಕ್ಕೆೆ ಮನತಣಿಸಿತು. ಇನ್ನು ನಿಯೋಗದ ಇಡೀ ವ್ಯವಸ್ಥೆೆಯನ್ನು ಫನ್‌ಸ್ಟೇ ಸಂಸ್ಥೆೆಯ ನಿತಿನ್ ಅಗರ್‌ವಾಲ್, ಮಹೀಮ್ ಮತ್ತು ಜಪಾನಿನಲ್ಲಿರುವ ಮೀನಾಲ್ ಅವರು ಅಚ್ಚುಕಟ್ಟಾಾಗಿ ನಿರ್ವಹಿಸಿದರು.
ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ನಮ್ಮ ಮಾತೃಭಾಷೆಯನ್ನು ಮರೆಯಬಾರದು. ಅನಿವಾಸಿ ಭಾರತೀಯರು ವಿದೇಶಗಳಲ್ಲಿ ತಮ್ಮ ಮಕ್ಕಳಿಗೆ ಕನ್ನಡ ಭಾಷೆ-ಸಂಸ್ಕೃತಿಯನ್ನು ತಿಳಿಸಿಕೊಡಲು ಹಿಂಜರಿಯಬಾರದು.
| ಎಚ್.ಎಸ್. ಚಂದ್ರಮೌಳಿ, ಹಿರಿಯ ನ್ಯಾಯವಾದಿ (ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪುರಸ್ಕೃತರು)
ಜಪಾನ್ ಹಾಗೂ ಇಸ್ರೇಲ್ ಪ್ರವಾಸ ಮಾಡುವುದು ನನ್ನ ಜೀವನದ ಕನಸಾಗಿತ್ತು. ಈ ಕನಸನ್ನು ವಿಶ್ವವಾಣಿ ಹಾಗೂ ವಿಶ್ವೇಶ್ವರ ಭಟ್ ಅವರು ನನಸು ಮಾಡಿದ್ದಾಾರೆ. ಜಪಾನ್‌ನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಸಿದ ಈ ಅವಕಾಶವನ್ನು ಮಾಡಿಕೊಟ್ಟ ತಂಡಕ್ಕೆೆ ಧನ್ಯವಾದ.
| ಆರಗ ಜ್ಞಾನೇಂದ್ರ, ಮಾಜಿ ಸಚಿವ