ಪ್ರತ್ಯಕ್ಷ ವರದಿ: ರಾಜು ಅಡಕಳ್ಳಿ
ಮಾಲೆ (ಮಾಲ್ಡೀವ್ಸ್): ದೇಶ ಸುತ್ತು ಕೋಶ ಓದು… ಈ ಗಾದೆ ಮಾತನ್ನು ಅಕ್ಷರಶಃ ನಿಜಗೊಳಿಸುವಂತೆ ‘ವಿಶ್ವವಾಣಿ’ಯು ತನ್ನ ಗ್ಲೋಬಲ್ ಫೋರಂ (Vishwavani Global Achievers Award) ಮೂಲಕ ಸಾವಿರಾರು ಮೈಲಿ ದೂರದ ಸುಂದರ ದ್ವೀಪವಾದ ಮಾಲ್ಡೀವ್ಸ್‌ನಲ್ಲಿ ಸಾಂಸ್ಕೃತಿಕ ಸಮ್ಮಿಲನ ಮತ್ತು ಕನ್ನಡ ನಾಡಿನ ಅಪರೂಪದ ಸಾಧಕರಿಗೆ ಜಾಗತಿಕ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿ ಹೊಸ ಸಂಚಲನ ಮೂಡಿಸಿತು. ಮಾಲ್ಡೀವ್ಸ್ ಎಂಬ ಮಾಯಾ ದ್ವೀಪದಲ್ಲಿರುವ ‘ನಾಟಿಕಾ’ಎಂಬ ನಡುಗಡ್ಡೆಯಲ್ಲಿ ಈ ವರ್ಣರಂಜಿತ ಸಮಾರಂಭಕ್ಕಾಗಿ ಬೆಂಗಳೂರಿನಿಂದ ಬಂದಿರುವ ‘ವಿಶ್ವವಾಣಿ’ಯ ವಿಶೇಷ ನಿಯೋಗವು ಇದನ್ನು ಸಂಪನ್ನಗೊಳಿಸಿದ್ದಲ್ಲದೇ, ಈ ಸಮುದ್ರ ದೇಶದ ಕಲೆ, ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲು ಅರ್ಥಪೂರ್ಣ ಪ್ರಯತ್ನ ನಡೆಸಿದ್ದು ವಿಶೇಷವಾಗಿತ್ತು.
‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿರುವ ಈ ನಿಯೋಗದಲ್ಲಿ ಬಾಗಲಕೋಟೆ-ಚಿತ್ರದುರ್ಗದ ಶ್ರೀಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದು, ಖ್ಯಾತ ಅಭಿನೇತ್ರಿ ಡಾ.ಜಯಮಾಲಾ ರಾಮಚಂದ್ರ ಮತ್ತು ಯುವ ನಟಿ ಸೌಂದರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಹೀಗೆ ಆಗಮಿಸಿದ ನಿಯೋಗದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಸಂಗಮಿಸಿದ್ದರು.
ರಾಜಕೀಯ, ಸಮಾಜ ಸೇವೆ, ಆಯುರ್ವೇದ, ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮ, ಸರಕಾರಿ ಸೇವೆ, ವೈದ್ಯಕೀಯ, ಕಲೆ , ಸಾಹಿತ್ಯ, ಪತ್ರಿಕೋದ್ಯಮ, ಪ್ರವಾಸೋದ್ಯಮ, ಧಾರ್ಮಿಕ, ಚಲನಚಿತ್ರ, ಫ್ಯಾಷನ್ ಡಿಸೈನಿಂಗ್, ಕೃಷಿ, ಮಾಹಿತಿ ತಂತ್ರಜ್ಞಾನ, ಕೈಗಾರಿಕೋದ್ಯಮ…ಈ ಮುಂತಾದ ಹಲವು ರಂಗಗಳಲ್ಲಿ ಅದ್ವಿತೀಯ ಸಾಧನೆಗೈದ ಪ್ರಮುಖರು ಈ ನಿಯೋಗದಲ್ಲಿದ್ದು, ಈ ಅಂತಾರಾಷ್ಟ್ರೀಯ ಸಮಾರಂಭಕ್ಕೆ ಸಾಕ್ಷಿಯಾದರು. ಇವರ ಪೈಕಿ ಹದಿಮೂರು ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು.
ಇಳಿ ಸಂಜೆಯ ಹೊತ್ತು. ಸೂರ್ಯ ಸಮುದ್ರದಲ್ಲಿ ಮುಳುಗಿ ಅಸ್ತಮಿಸುವ ಸುಂದರ ದೃಶ್ಯ ವೈಭವ. ಗೋಧೂಳಿ ಮುಹೂರ್ತ ಬೇರೆ. ಹಕ್ಕಿ ಪಕ್ಕಿಗಳೆಲ್ಲ ಕಲರವಗಯ್ಯುತ್ತಾ ಗೂಡು ಸೇರುವ ಚೆಂದದ ನೋಟ. ಇಂಥ ಅಪರೂಪದ ಸನ್ನಿವೇಶದಲ್ಲಿ, ಮಾಲೆ ಸಮೀಪದ ನಾಟಿಕಾ ದ್ವೀಪದಲ್ಲಿ ನವ ವಧುವಿನಂತೆ ಕಂಗೊಳಿಸುವ ರೆಸಾರ್ಟಿನ ಜಗುಲಿಯಲ್ಲಿ ವಿಶ್ವವಾಣಿಯ ಈ ವಿಶಿಷ್ಟ ಸಮಾರಂಭ ಕಳೆಗಟ್ಟಿತ್ತು. ಮೊದಲಿಗೆ ಭಾರತ-ಮಾಲ್ಡೀವ್ಸ್ ಉಭಯ ದೇಶಗಳ ರಾಷ್ಟ್ರಗೀತೆ ಮೊಳಗಿಸಿ ಗೌರವ ಸೂಚಿಸುವುದರೊಂದಿಗೆ, ಗಣನಾಯಕ- ಗಜವದನನಿಗೆ ನಮಿಸುವ ಮೂಲಕ ಈ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ವಿಶ್ವೇಶ್ವರ ಭಟ್ಟರು ಆಗಮಿಸಿದ್ದ ಮಾಲ್ಡೀವ್ಸ್ ಮತ್ತು ಭಾರತದ ಅತಿಥಿಗಳನ್ನು, ನಿಯೋಗದ ಸದಸ್ಯರನ್ನು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಸ್ವಾಗತಿಸಿ, ವಿಶ್ವವಾಣಿಯು ಈವರೆಗೆ ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ ಮಾರಿಷಸ್ ಮತ್ತು ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಉದ್ದೇಶ ಮತ್ತು ಅನುಭವ ಹಂಚಿಕೊಂಡರು.
ಮಾಲ್ಡೀವ್ಸ್‌ನ ವಿಲ್ಲಾ ನಾಟಿಕಾ ಸಂಸ್ಥೆಯ ಹಿರಿಯ ಅಧಿಕಾರಿ ಮಹಮದೂನ್ ಅಬ್ದುಲ್ ಹಮೀದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ.ಮುಳೆ, .ಎಚ್.ಎಸ್.ರಾಘವೇಂದ್ರ ರಾವ್, ಡಾ.ಕೃಷ್ಣಾ ರೆಡ್ಡಿ ಕೆ.ಎಸ್., ಡಾ.ಲೇಖನ ಪಂಡಿತ್, ಡಾ.ರವಿ ಮಾಕಳಿ ಮಾತನಾಡಿದರು.
ಈ ಸಮಾರಂಭದಲ್ಲಿ ಮೂವರು ಮಹಿಳೆಯರೂ ಸೇರಿದಂತೆ, ಒಟ್ಟು 13 ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಇದೇ ವೇದಿಕೆಯಲ್ಲಿ ಕೊಡಗಿನ ಲೇಖಕಿ ಫ್ಯಾನ್ಸಿ ಮುತ್ತಣ್ಣ ಅವರು ಬರೆದ ‘ಒಡಲ ಉರಿ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಫ್ಯಾನ್ಸಿ ಮತ್ತು ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.
ನಂಜನಗೂಡು ಮೋಹನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಫನ್‌ಸ್ಟೇ ಸಂಸ್ಥೆಯ ನಿತಿನ್ ಅಗರ್ವಾಲ್ ಅವರು ಈ ಪ್ರವಾಸದ ಸಂಯೋಜನೆಯಲ್ಲಿ ಮುಖ್ಯ ಪಾತ್ರವಹಿಸಿದ್ದರು. ಲೇಖಕ ರಾಜು ಅಡಕಳ್ಳಿ, ವಿಶ್ವವಾಣಿ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ಕಡಲಾಸ್ಕರ್ ಮತ್ತು ನಾಗಾರ್ಜುನ, ವಿಶ್ವವಾಣಿ ಬಳಗದ ಹಿತೈಷಿಗಳಾದ ವೆಂಕಟೇಶ್ ಹೆಗಡೆ ಹೊಸಬಾಳೆ, ಸದಾನಂದ ಭಟ್, ಸಿದ್ದೇಶ್ ಹಾರನಹಳ್ಳಿ, ಸುಮಾ ಕೃಷ್ಣಾ ರೆಡ್ಡಿ, ಭೋವಿ ಗುರುಪೀಠದ ಅನೇಕ ಭಕ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕನ್ನಡಿಗರ ಸಾಧನೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಿರಂತರ
ಪತ್ರಿಕೋದ್ಯಮವೆಂಬುದು ನಿಂತ ನೀರಲ್ಲ. ಇದು ಬದಲಾವಣೆಯ ಹರಿಕಾರನಾಗಬೇಕು. ಈ ನಿಟ್ಟಿನಲ್ಲಿ ‘ವಿಶ್ವವಾಣಿ’ ಚಿಂತಿಸಿ, ಕಾರ್ಯಶೀಲವಾದ ಫಲಶೃತಿಯೇ ಈ ಅಂತಾರಾಷ್ಟ್ರೀಯ ಸಮಾರಂಭ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಐದನೇ ಅಂತಾರಾಷ್ಟ್ರೀಯ ಕಾರ್ಯಕ್ರಮ. ಕೇವಲ ಒಂಬತ್ತು ತಿಂಗಳುಗಳಲ್ಲಿಯೇ ಹೀಗೆ ಐದು ದೇಶಗಳಿಗೆ ಸಾಂಸ್ಕೃತಿಕ ನಿಯೋಗವನ್ನು ಕರೆದೊಯ್ದು, ಅಲ್ಲಿ ಕನ್ನಡದ ಅಪ್ರತಿಮ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ‘ವಿಶ್ವವಾಣಿ’ಯು ಸಾಮಾಜಿಕ ಬದ್ಧತೆ ಪ್ರದರ್ಶಿಸುತ್ತಿದೆ. ‘ವಿಶ್ವವಾಣಿ’ಯ ಈ ನೂತನ ಪ್ರಯೋಗಕ್ಕೆ ನಾಡಿನ ಮೂಲೆಮೂಲೆಗಳಿಂದ ಅಪಾರ ಪ್ರಶಂಸೆ ವ್ಯಕ್ತವಾಗಿರುವುದು, ಅನೇಕ ಪ್ರತಿಷ್ಠಿತ ವ್ಯಕ್ತಿಗಳು, ಸಂಘ ಸಂಸ್ಥೆಗಳು ನಮ್ಮ ಈ ಪ್ರಯತ್ನವನ್ನು ಪ್ರೋತ್ಸಾಹಿಸುತ್ತಿರುವುದು ನಮಗೆಹೆಮ್ಮೆಯ ಸಂಗತಿ. ಮುಂದೆಯೂ ಇನ್ನಷ್ಟು ದೇಶಗಳಲ್ಲಿ ಇದೇ ರೀತಿಯ ಸಮಾರಂಭಗಳನ್ನು ಏರ್ಪಡಿಸಿ ಕನ್ನಡಿಗರ ಸಾಧನೆಗಳ ಮೇಲೆ ವಿಶ್ವ ಮಟ್ಟದಲ್ಲಿ ಬೆಳಕು ಚೆಲ್ಲುವತ್ತ ‘ವಿಶ್ವವಾಣಿ‘ಯ ನಿರಂತರ ಪ್ರಯತ್ನ ಮುಂದುವರಿಯುತ್ತದೆ ಎಂದರು. ಇಮ್ಮಡಿ ಸಿದ್ಧರಾಮೇಶ್ವರ ಮಹಾ ಸ್ವಾಮೀಜಿಯವರು, ಡಾ. ಜಯಮಾಲಾ ಇವರಂಥ ಸಿನಿಮಾ ಲೋಕದ ದಿಗ್ಗಜರು ವಿಶ್ವವಾಣಿಯ ಪ್ರಯತ್ನದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಅನುಪಮ ಅನುಭವ. ಡಾ.ಜಯಮಾಲಾ ಅವರು ವಿಶ್ವವಾಣಿಯ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಸಮಾರಂಭಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಾವು ಸಾಂಸ್ಕೃತಿಕ ರಾಯಭಾರಿಯಾಗಿರು ವುದನ್ನು ಪ್ರಸ್ತುತಪಡಿಸಿರುವುದು ವಿಶೇಷ ಎಂದರು.
ಇದನ್ನೂ ಓದಿ: MB Patil: ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಅಗತ್ಯ ತರಬೇತಿ ವ್ಯವಸ್ಥೆ: ಎಂ.ಬಿ. ಪಾಟೀಲ್
ವಿಶ್ವವಾಣಿಯ ಪ್ರಯತ್ನ ಪತ್ರಿಕೋದ್ಯಮದಲ್ಲಿ ಹೊಸ ದಾಖಲೆ
ವಿಶ್ವವಾಣಿಯ ಅಪೂರ್ವವಾದ ಈ ಪ್ರಯತ್ನ ನಿಜಕ್ಕೂ ಪತ್ರಿಕೋದ್ಯಮದಲ್ಲಿ ಹೊಸ ದಾಖಲೆ ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಾಣಿಯು ಸುದ್ದಿ, ವಿಶ್ಲೇಷಣೆ, ಅಂಕಣಗಳ ಮೂಲಕ ಹೇಗೆ ಹೊಸತನದ ಹರಿಕಾರನಾಗಿದೆಯೋ, ಅದೇ ರೀತಿ ವಿಶ್ವಮಟ್ಟದಲ್ಲೂ ಈ ರೀತಿಯ ಅರ್ಥಪೂರ್ಣ ಸಮಾರಂಭಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕಾಗಿ‘ವಿಶ್ವವಾಣಿ’ ಬಳಗವನ್ನು ಮತ್ತು ವಿಶ್ವೇಶ್ವರ ಭಟ್ಟರನ್ನು ಅಭಿನಂದಿಸುತ್ತೇನೆ ಎಂದರು.
ಭಾರತೀಯ ಮೌಲ್ಯ, ಸಂಸ್ಕೃತಿಗಳನ್ನು ಜಾಗತಿಕವಾಗಿ ಪರಿಚಯಿಸಲು ಇಂಥ ಕಾರ್ಯಕ್ರಮಗಳು ನೆರವಾಗಲಿದೆ. ಹೊರಗೆ ಶಾಂತಿಯನ್ನು ಬೋಧಿಸುತ್ತಾ ಒಳಗೊಳಗೇ ಹಿಂಸೆ, ಭಯೋತ್ಪಾದನೆ ಪ್ರತಿಪಾದಿಸುವಂಥ ಕೆಲವು ಧಾರ್ಮಿಕ ಮುಖಂಡರಿಂದ ಸಮಾಜಕ್ಕೆ ಅಪಾಯ ಎಂದು ತಿಳಿಸಿದರು.
ಎಲ್ಲ ಧರ್ಮಗಳ ತಿರುಳು-ದಯವೇ ಧರ್ಮದ ಮೂಲವಯ್ಯ ಎಂಬುದನ್ನು ಜಗತ್ತಿನ ಎಲ್ಲ ದೇಶಗಳೂ, ಎಲ್ಲ ಧರ್ಮಗಳೂ ಅರ್ಥ ಮಾಡಿಕೊಳ್ಳಬೇಕು. ಸಕಾರಾತ್ಮಕ ಯೋಚನೆಗಳು ಮನುಷ್ಯನ ಬದುಕನ್ನು ಅರ್ಥಪೂರ್ಣಗೊಳಿಸುತ್ತೇವೆ. ಇಂಥ ಸಕಾರಾತ್ಮಕ ಕ್ರಿಯಾಶೀಲ ಯೋಚನೆಗಳನ್ನು ಸಮಾಜದಲ್ಲಿ ಬಿತ್ತಲು ವಿಶ್ವೇಶ್ವರ ಭಟ್ಟರು ತಮ್ಮ ಬರಹಗಳಲ್ಲಿ ಸದಾ ಪ್ರಯತ್ನಿಸುತ್ತಲೇ ಇರುವುದು ಪ್ರಶಂಸನಾರ್ಹ ಎಂದು ತಿಳಿಸಿದರು.
ಹಿಂದಿನಿಂದಲೂ ನಾನು ವಿಶ್ವೇಶ್ವರ ಭಟ್ಟರ ಪುಸ್ತಕ, ಬರಹಗಳ ಅಭಿಮಾನಿ. ಅವರ ಬರಹಗಳ ಪ್ರಭಾವ ನನ್ನ ಮೇಲೆಯೂ ಗಾಢವಾಗಿ ಆಗಿದೆ. ಈ ನಿಟ್ಟಿನಲ್ಲಿ ಅವರು ನನಗೆ ಮಾನಸ ಗುರುವಾಗಿದ್ದಾರೆ. ಇದು ನನ್ನಂತೆ ಇನ್ನೂ ಅನೇಕರ ಅನುಭವವಾಗಿರಲಿಕ್ಕೂ ಸಾಕು. ಒಬ್ಬ ಯಶಸ್ವಿ ಬರಹಗಾರ ಎನ್ನಿಸಿಕೊಳ್ಳುವುದಕ್ಕೆ ಭಟ್ಟರ ಈ ಸೃಜನಶೀಲ ಶಕ್ತಿಯೇ ಸೂಕ್ತ ನಿದರ್ಶನ ಎಂದು ಹೇಳಿದರು.
ವಿಶ್ವವಾಣಿಯ ವಿಶ್ವ ಪ್ರವಾಸ ಸುವರ್ಣಾವಕಾಶ
ಮುಖ್ಯ ಅತಿಥಿ ನಟಿ ಡಾ.ಜಯಮಾಲಾ ಅವರು ಮಾತನಾಡಿ, ವಿದೇಶಗಳಿಗೆ ಕೇವಲ ಕುಟುಂಬ ಸಮೇತ ಬಂದರೆ ಹೆಚ್ಚಿನ ಅನುಭವ ದಕ್ಕುವುದಿಲ್ಲ. ಆದರೆ ‘ವಿಶ್ವವಾಣಿ’ಯ ನಿಯೋಗದಲ್ಲಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುವುದೇ ವಿನೂತನ ಅನುಭವ .ಕಾರಣ ಹಲವು ಸಾಧಕರೊಂದಿಗೆ, ದಿಗ್ಗಜರೊಂದಿಗೆ ಅರ್ಥಪೂರ್ಣವಾಗಿ ಸಮಯ ಕಳೆಯಲು, ಹೊಸ ಹೊಸ ವಿಷಯಗಳನ್ನು ಅರಿತುಕೊಳ್ಳಲು ‘ವಿಶ್ವವಾಣಿ’ಯ ವಿಶ್ವ ಪ್ರವಾಸ ಸುವರ್ಣಾವಕಾಶವಾಗಿದೆ ಎಂದು ತಿಳಿಸಿದರು.
ಮಾಲ್ಡೀವ್ಸ್ ನಲ್ಲಿನ ಈ ಕಾರ್ಯಕ್ರಮ ಅಪರೂಪದ ಸಾಧಕರ ಸಂಗಮವಾಗಿದೆ. ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಹೆಚ್ಚೆಚ್ಚು ಓದಬೇಕು ಮತ್ತು ಹೆಚ್ಚೆಚ್ಚು ದೇಶಗಳನ್ನು ಸುತ್ತಲೇಬೇಕು. ಇವೆರಡೂ ಬೌದ್ಧಿಕ ಚಟುವಟಿಕೆಗಳನ್ನು ಪ್ರಚೋದಿಸುವಂತೆ ‘ವಿಶ್ವವಾಣಿ’ಯ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ವಿಶ್ವೇಶ್ವರ ಭಟ್ಟರು ಅಭಿನಂದನಾರ್ಹರು ಎಂದು ಹೇಳಿದರು.
ಈಗಾಗಲೇ ವಿಶ್ವವಾಣಿಯಿಂದ ಕನ್ನಡ ನಾಡಿನ ಐವತ್ತಕ್ಕೂ ಹೆಚ್ಚಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕರಿಸಲಾಗಿದೆ. ‘ವಿಶ್ವವಾಣಿ’ಯ ಈ ನೂತನ ಪ್ರಯೋಗಕ್ಕೆ ನಾಡಿನ ಮೂಲೆಮೂಲೆಗಳಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಮುಂದೆಯೂ ಇನ್ನಷ್ಟು ದೇಶಗಳಲ್ಲಿ ಇದೇ ರೀತಿಯ ಸಮಾರಂಭಗಳನ್ನು ಏರ್ಪಡಿಸಿ ಕನ್ನಡಿಗರ ಸಾಧನೆಗಳ ಮೇಲೆ ವಿಶ್ವ ಮಟ್ಟದಲ್ಲಿ ಬೆಳಕು ಚೆಲ್ಲುವತ್ತ ವಿಶ್ವವಾಣಿಯ ನಿರಂತರ ಪ್ರಯತ್ನ ಮುಂದುವರಿಯುತ್ತದೆ.
ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕ
ಮಾಲ್ಡೀವ್ಸ್‌ನ ಮಜಾ ಮಜಕೂರೇ ಬೇರೆ. ಇಲ್ಲಿ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಎಲ್ಲಿ ನೋಡಿದರೂ ಇಲ್ಲಿ ನೀರೆಯರು, ನಿರ್ಲಿಪ್ತತೆ, ನೀರು, ಪ್ರೀತಿ. ಇಂತಹ ಅವಿಸ್ಮರಣೀಯವಾದ ದ್ವೀಪ ತಾಣದಲ್ಲಿ ಬದುಕಿನ ಒಂದಷ್ಟು ಕ್ಷಣಗಳನ್ನು ಸುಂದರವಾಗಿ, ಪ್ರಶಾಂತವಾಗಿ ಕಳೆಯುವುದಕ್ಕೆ ವಿಶ್ವವಾಣಿಯು ಅವಕಾಶ ಮಾಡಿಕೊಟ್ಟಿದೆ. ಈ ಕಾರ್ಯಕ್ರಮಕ್ಕೆ ಮಾಲ್ಡೀವ್ಸ್‌ನ್ನೇ ಆಯ್ಕೆ ಮಾಡಿದ್ದು ನಿಜಕ್ಕೂ ಅರ್ಥಪೂರ್ಣ.
– ಡಾ.ಕೆ.ಎಸ್.ಕೃಷ್ಣಾರೆಡ್ಡಿ, ಕರ್ನಾಟಕ ಸ್ಟೇಟ್ ರೋಡ್ ರೆಗ್ಯೂಲೇಟರಿ ಮತ್ತು ಡೆವಲಪ್‌ಮೆಂಟ್ ಅಥಾರಿಟಿಯ ಹಿರಿಯ ಅಧಿಕಾರಿ
ಮನುಷ್ಯ ಸಂಬಂಧಗಳನ್ನು ಹೆಚ್ಚಿಸಲು ಇಂಥ ಕಾರ್ಯಕ್ರಮಗಳು ತೀರಾ ಅಗತ್ಯ. ಸಮಾಜ ಎಷ್ಟೇ ಆಧುನಿಕಗೊಂಡರೂ ಇಂದು ವ್ಯಕ್ತಿ- ವ್ಯಕ್ತಿಗಳ ನಡುವೆ ಸಮಾಜ-ಸಮಾಜದ ಮಧ್ಯೆ ಅಂತರ ಹೆಚ್ಚುತ್ತಲೇ ಇದೆ. ಇವುಗಳಿಗೆ ಪರಿಹಾರ ನೀಡಬಲ್ಲ ತಾಕತ್ತು ನಮ್ಮ ಸಾಂಸ್ಕೃತಿಕ ಕ್ಷೇತ್ರಗಳಿಗಿದೆ. ವಿಶ್ವವಾಣಿ ಸಮರ್ಥವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.
-ಸೌಂದರ್ಯ, ನಟಿ