Thursday, 21st November 2024

Waqf Act: ವಕ್ಫ್ ಕಾಯ್ದೆ ರದ್ದುಪಡಿಸಲು ಆಗ್ರಹ; ತುಮಕೂರಿನಲ್ಲಿ ರೈತರು, ಮಠಾಧೀಶರ ಪ್ರತಿಭಟನೆ

Waqf Act

ತುಮಕೂರು: ಜಿಲ್ಲೆಯ ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬ ಪಹಣಿಗಳನ್ನು ರದ್ದು ಪಡಿಸಬೇಕು. ದೇವಾಲಯದ ಜಮೀನು, ಗೋಮಾಳಗಳು, ಸರಕಾರಿ ಆಸ್ತಿಗಳು, ಶಾಲಾ, ಕಾಲೇಜುಗಳಿಗೆ ಸಂಬಂಧಪಟ್ಟ ಆಸ್ತಿಗಳು ವಕ್ಫ್ ಬೋರ್ಡ್‌ನಿಂದ (Waqf Act) ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ, ವಿವಿಧ ರೈತ ಹಾಗೂ ಸಾಮಾಜಿಕ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಬಿ.ಹೆಚ್.ರಸ್ತೆ, ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಠಾಧೀಶರು, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಬಿಜೆಪಿ, ಆರ್.ಎಸ್.ಎಸ್. ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಮಾತನಾಡಿ, ವಕ್ಫ್ ವಿವಾದ ಇಂದು, ನೆನ್ನೆಯದಲ್ಲ. ಹಲವಾರು ವರ್ಷಗಳಿಂದ ಜನರನ್ನು ಕಾಡುತ್ತಿದೆ. ವಕ್ಫ್‌ ವಿವಾದದಿಂದ ಕೇವಲ ಹಿಂದುಗಳ ಆಸ್ತಿಗಳಷ್ಠೇ ಹೋಗುತ್ತಿಲ್ಲ. ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವ ಬಡ ಮುಸ್ಲಿಂ ಸಮುದಾಯದ ಜನರಿಗೆ ಕಂಟಕ ಪ್ರಾಯವಾಗಿದೆ. ಹಾಗಾಗಿ ಸರಕಾರ ನೊಟೀಸ್ ವಾಪಸ್ ಪಡೆಯುವುದಕ್ಕಿಂತ ವಕ್ಫ್ ಕಾಯ್ದೆಯನ್ನು ರದ್ದುಪಡಿಸಬೇಕು ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಸರಿಘಟ್ಟದ ಚನ್ನಮ್ಮ ಅವರ ಮಗ ಮಾತನಾಡಿ, ಸುಮಾರು 70 ವರ್ಷಗಳ ಹಿಂದೆ ನಮ್ಮ ತಾತ ಖರೀಸಿದ ಭೂಮಿ ನಮ್ಮ ತಂದೆ ನಂತರ ನಮ್ಮ ತಾಯಿಯ ಹೆಸರಿನಲ್ಲಿದೆ. 2009ರಲ್ಲಿ ನಮ್ಮ ಕುಟುಂಬಕ್ಕೆ ಸೇರಿದ 3.10 ಗುಂಟೆಯೂ ಸೇರಿ ಒಟ್ಟು 56.06 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿ ಬರುತ್ತಿದೆ. ಈ ಬಗ್ಗೆ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಆದರೆ ಅರ್ಧ, ಎಕರೆ, ೧೦ ಗುಂಟೆ ಸೇರಿದಂತೆ ಸಣ್ಣ ಸಣ್ಣ ಹಿಡುವಳಿದಾರರ ಭೂಮಿಗಳ ಪಹಣಿಗಳಲ್ಲಿಯೂ ವಕ್ಫ್ ಎಂದು ನಮೂದಾಗಿರುವ ಕಾರಣ ಅವರು ನ್ಯಾಯಾಲಯಕ್ಕೆ ಹೋಗಲು ಆಗದೆ, ಭೂಮಿ ಕಳೆದುಕೊಳ್ಳಲು ಇಷ್ಟಪಡದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಸರಕಾರ ವಕ್ಫ್ ಆಸ್ತಿ ಹೆಸರಿನಲ್ಲಿ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ತುಮಕೂರು ಜಿಲ್ಲಾಧ್ಯಕ್ಷ ವಿಜಯಕುಮಾರ್, ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲ ಪ್ರಧಾನ ಕಾರ್ಯದರ್ಶಿ ಗಂಗಾಧರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನವೀನ್ ಸದಾಶಿವಯ್ಯ, ತುಮಕೂರು ತಾಲೂಕು ಅಧ್ಯಕ್ಷ ನಾರಾಯಣಗೌಡ, ಗುಬ್ಬಿ ತಾಲೂಕು ಅಧ್ಯಕ್ಷ ಮಂಜುನಾಥ್, ತುರುವೇಕೆರೆ ಅಧ್ಯಕ್ಷ ಸಿದ್ದಲಿಂಗಪ್ಪ, ಗುಬ್ಬಿ ಮಹಿಳಾ ಪ್ರಮುಖ ಪ್ರೇಮ, ಡಾ.ಪರಮೇಶ್, ಎಚ್.ಎನ್.ಚಂದ್ರಶೇಖರ್, ಅನಿಲ್‌ಕುಮಾರ್ ಭೈರಣ್ಣ, ಬ್ಯಾಟರಂಗೇಗೌಡ, ಅಣ್ಣೇನಹಲ್ಳಿ ಶಿವಕುಮಾರ್, ದಲೀಪ್, ಶಿವಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ | Zameer ahmed: ಎಚ್‌ಡಿಕೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆ ಕೋರಿದ ಜಮೀರ್‌ ಅಹ್ಮದ್‌

ಮೆರವಣಿಗೆಯಲ್ಲಿ ಗೋಡೆಕೆರೆಯ ಶ್ರೀಮೃತ್ಯಂಜಯ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾರ್ಜುನಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದ ವೀರಬಸವಸ್ವಾಮೀಜಿ, ಬಸವ ಮಹಾಲಿಂಗಸ್ವಾಮೀಜಿ, ಗೊಲ್ಲಹಳ್ಳಿ ಶ್ರೀಗಳು, ಕೋಡಿಹಳ್ಳಿ ಶ್ರೀಗಳು ಪಾಲ್ಗೊಂಡಿದ್ದರು.