Thursday, 21st November 2024

Waqf board: ರೈತರಿಗೆ ನೀಡಿದ್ದ ವಕ್ಫ್ ಬೋರ್ಡ್ ನೋಟಿಸ್ ಹಿಂಪಡೆಯಲು ಸಿಎಂ ಸೂಚನೆ: ಪರಮೇಶ್ವರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ನೀಡಿದ್ದ ವಕ್ಫ್ ಬೋರ್ಡ್ (Waqf board) ನೋಟಿಸ್ ಹಿಂಪಡೆಯಲು ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Home minister G Parameshwara) ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್‌ನಿಂದ ರೈತರಿಗೆ ನೀಡಲಾಗಿರುವ ನೋಟಿಸ್ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರೈತರಿಗೆ ಕೊಟ್ಟಿರುವ ನೋಟಿಸ್ ಹಿಂಪಡೆಯಲಾಗುವುದು. ವಿವಾದ ಇಲ್ಲಿಗೆ ಮುಗಿದಿದೆ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ ಎಂದರು.

ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಅದರಲ್ಲಿ ಏನಿದೆಯೋ ಅದರಂತೆ ಆಗುತ್ತೆ. ವಕ್ಫ್ ದಾಖಲಾತಿಯಲ್ಲೊಂದೇ ಇದ್ದರೆ ರೈತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ರೈತರಿಗೆ ನೀಡಲಾಗಿರುವ ನೋಟಿಸ್ ವಾಪಾಸ್ ಪಡೆಯಲಾಗುವುದು. ಕಂದಾಯ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಭೂ ವಿವಾದ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

“ವಕ್ಫ್‌ ಆಸ್ತಿ ವಿವಾದ ಸಂಬಂಧ ಯಾವುದೇ ರೈತರನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸುವುದಿಲ್ಲ, ಈ ಕುರಿತು ನೋಟಿಸ್‌ ನೀಡಿದ್ದರೆ ಅದನ್ನು ವಾಪಸ್‌ ಪಡೆಯಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನ್ನೆ ಹೇಳಿದ್ದರು. ವಿಜಯಪುರದ ವಕ್ಫ್‌ ಆಸ್ತಿ ಕುರಿತು ಹೊರಡಿಸಿದ ನೋಟಿಸ್‌ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ಹಾಗೂ ವಕ್ಫ್‌ ಸಚಿವ ಜಮೀರ್‌ ಅಹಮದ್‌ ಅವರು ಸ್ಪಷ್ಟನೆ ನೀಡಿದ್ದಾರೆ. ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯಲ್ಲಿಯೂ ರೈತರಿಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌ ನೀಡಿರುವ ಬಗ್ಗೆ ಕಂದಾಯ ಸಚಿವರ ಜೊತೆ ಚರ್ಚಿಸಲಾಗುವುದು. ನೋಟಿಸ್‌ ನೀಡಿದ್ದರೆ ವಾಪಸ್‌ ಪಡೆಯಲಾಗುವುದು ಎಂದಿದ್ದರು.

ಇದನ್ನೂ ಓದಿ: Waqf Board: ರೈತರ ಪಹಣಿಗಳಿಂದ ವಕ್ಫ್‌ ಬೋರ್ಡ್ ಹೆಸರು ಕೈ ಬಿಡಲು ಆಗ್ರಹಿಸಿ ನ.4ರಂದು ಬಿಜೆಪಿ ಹೋರಾಟ