ಬೆಂಗಳೂರು: ರೈತರ ಮತ್ತಿತರರ ಪಹಣಿಗಳಲ್ಲಿ ವಕ್ಫ್ ಬೋರ್ಡ್ (Waqf Board) ಎಂದು ತಿದ್ದುಪಡಿ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿರುವುದರ ವಿರುದ್ದ ನ.4ರಂದು ಬಿಜೆಪಿ (BJP protest) ತೀವ್ರ ರೀತಿಯ ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕ (Opposition leader) ಆರ್.ಅಶೋಕ್ (R Ashok) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಸಚಿವ ಜಮೀರ್ ಅಹ್ಮದ್ ನೇತೃತ್ವದ ಕಾಂಗ್ರೆಸ್ಸಿನ ತಂಡ ಅನ್ನದಾತನಿಗೆ ಕನ್ನ ಹಾಕುವ ಕೆಲಸವನ್ನು ರಾಜಾರೋಷವಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರಿಗೆ ಮುಸ್ಲಿಮರ ಭೂತ ಹಿಡಿದಿದೆ. ಹುಣಿಸೆ ಬರಲು ತೆಗೆದುಕೊಂಡು ದೆವ್ವ ಬಿಡಿಸುವವರೆಗೂ ಬಿಜೆಪಿಯ ನಾವೆಲ್ಲರೂ ರೈತರ ಪರವಾಗಿ ಇರುತ್ತೇವೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಕೆಯಾದ ರೈತರ ಜಮೀನು ವಾಪಸ್ ನೀಡುವ ತನಕ ಹೋರಾಟ ಮಾಡಲಾಗುವುದು ಎಂದರು.
ವಿಜಯಪುರ ಜಿಲ್ಲೆಯಲ್ಲಿ ಮಾತ್ರವೇ ವಕ್ಫ್ ಸಮಸ್ಯೆ ಇರುವುದಲ್ಲ. ಕೋಲಾರದಲ್ಲೂ ದೇವಸ್ಥಾನದ ಜಮೀನನ್ನು ವಕ್ಫ್ ಬೋರ್ಡ್ ಜಮೀನೆಂದು ನಮೂದಿಸಿದ ಮಾಹಿತಿ ಇದೆ. ನಗರಸಭೆ ಆಸ್ತಿಗಳು, ಮನೆಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದ್ದಾರೆ. ಮಂಡ್ಯದ ನಾಗಮಂಗಲ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹುಬ್ಬಳ್ಳಿ, ಬೆಳಗಾವಿ ಸೇರಿ ಎಲ್ಲೆಡೆ ಜನರಿಗೆ ಗೊತ್ತಿಲ್ಲದೆ ಯಾಮಾರಿಸಲಾಗಿದೆ. ಎಲ್ಲಾ ಕಡೆಯಲ್ಲೂ ನುಸುಳುಕೋರರಂತೆ ವಕ್ಫ್ ಬೋರ್ಡ್ ಕೆಲಸ ಮಾಡುತ್ತಿದೆ ಎಂದರು.
ವಕ್ಫ್ ವಿಚಾರದಲ್ಲಿ ಸರ್ಕಾರವೇ ಭೂ ಕಬಳಿಕೆದಾರನಂತೆ ವರ್ತಿಸುತ್ತಿದೆ. ಆದ್ದರಿಂದ ರೈತ ಸಂಘ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು. ಒಬ್ಬ ಮತಾಂಧ ದೇಶದ ಸಂಸತ್ ನಮ್ಮದೆಂದರೆ, ಇನ್ನೊಬ್ಬ ಸಂಸತ್ತಿಗೆ ಹಣ ಕೊಟ್ಟು ಹೋಗಬೇಕೆನ್ನುತ್ತಾನೆ. ತಲೆ ಕೆಟ್ಟ ವ್ಯಕ್ತಿಯೊಬ್ಬರು ವಿಧಾನಸೌಧವೂ ವಕ್ಫ್ ಬೋರ್ಡ್ ಆಸ್ತಿ ಎನ್ನುತ್ತಾರೆ. ಇವರು ಈ ದೇಶಕ್ಕೆ ಬಂದದ್ದು ಯಾವಾಗ ಎಂದು ಪ್ರಶ್ನಿಸಿದರು.
ಕೊಡಗಿನಲ್ಲಿ ಅಪಾರ ಜನರ ಮತಾಂತರ, ದಕ್ಷಿಣ ಕನ್ನಡದಲ್ಲೂ ಕ್ರಿಶ್ಚಿಯನ್ನರ ಮತಾಂತರ ಮಾಡಿದವರು ಇವರೇ. ಇದೆಲ್ಲವೂ ಬ್ರಿಟೀಷ್ ಗೆಜೆಟ್‌ನಲ್ಲಿದೆ. ಈಗ ಮತಾಂತರ ಬಿಟ್ಟು, ಜಮೀನು ಹಸ್ತಾಂತರ ನಡೆದಿದೆ. ಸಿದ್ದರಾಮಯ್ಯನವರಿಗೆ ಇವರ ಓಲೈಕೆ ಮಾಡದೆ ಇದ್ದರೆ ನಿದ್ರೆ ಬರುವುದಿಲ್ಲ ಎಂದು ಟೀಕಿಸಿದರು.
ನಮ್ಮನ್ನು ಹಿಟ್ ಅಂಡ್ ರನ್ ಎನ್ನುವ ಮುಖ್ಯಮಂತ್ರಿಗಳ ಮೇಲೆ ಇ.ಡಿ., ಲೋಕಾಯುಕ್ತ, ಹೈಕೋರ್ಟ್ ಎಲ್ಲವೂ ಛೀಮಾರಿ ಹಾಕಿದೆ. ನಿಮ್ಮ ಬೆಂಬಲಿಗರ ಮನೆ ಮೇಲೆ ಎಲ್ಲ ಕಡೆ ದಾಳಿ ಆಗಿದೆ. ಸಂಪತ್ತು, ದಾಖಲೆಗಳೂ ಸಿಕ್ಕಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ನಿಷ್ಠಾವಂತ ಅಧಿಕಾರಿ ಸಾವಿಗೆ ನ್ಯಾಯ ಕೊಡಿಸಿದ್ದೇವೆ ಎಂದು ಅಶೋಕ್ ಕುಟುಕಿದರು.
ಇದನ್ನೂ ಓದಿ: Waqf Board: ಮಂಡ್ಯದಲ್ಲಿ ದೇವಸ್ಥಾನದ ಜಾಗವೂ ತನ್ನದು ಎಂದ ವಕ್ಫ್! ಭಕ್ತರ ಆಕ್ರೋಶ