Tuesday, 19th November 2024

Waqf land row: ಪ್ರಧಾನಿ ಕಚೇರಿ ತಲುಪಿದ ವಿಜಯಪುರ ವಕ್ಫ್‌ ಆಸ್ತಿ ವಿವಾದ; ಶಾಸಕ ಯತ್ನಾಳ್‌ ಪತ್ರಕ್ಕೆ ಬಂತು ಪ್ರತಿಕ್ರಿಯೆ

Waqf land row

ವಿಜಯಪುರ: ರಾಜ್ಯದಲ್ಲಿ ವಕ್ಫ್‌ ಅಸ್ತಿ ವಿವಾದ (Waqf land row) ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರ ಆಸ್ತಿಗಳಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿರುವುದಕ್ಕೆ ಜಿಲ್ಲೆಯಲ್ಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಈ ವಿಚಾರ ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ತಲುಪಿದೆ. ವಕ್ಫ್‌ ಆಸ್ತಿ ರಾಷ್ಟ್ರೀಕರಣ ಮಾಡುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಬರೆದಿದ್ದ ಪತ್ರಕ್ಕೆ ಇದೀಗ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದೆ.

ಕಳೆದ ಅಕ್ಟೋಬರ್ 30ರಂದು ಪ್ರಧಾನಿ ಮೋದಿ ಅವರಿಗೆ ಶಾಸಕ‌ ಯತ್ನಾಳ್ ಪತ್ರ ಬರೆದಿದ್ದರು. ಇದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯದ ಹೆಚ್ಚುವರಿ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ್ ಅವರಿಂದ ಪ್ರತಿಕ್ರಿಯೆ ಬಂದಿದ್ದು, ನೀವು ಬರೆದ ಪತ್ರ ಕಚೇರಿಗೆ ತಲುಪಿದೆ. ಪ್ರಧಾನಮಂತ್ರಿಗಳಿಗೆ ಬರೆದಿದ್ದ ಪತ್ರ ಸ್ವೀಕೃತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಕ್ಫ್ ಆಸ್ತಿ ರಾಷ್ಟ್ರೀಕರಣಕ್ಕೆ ಯತ್ನಾಳ್‌ ಮನವಿ

ಕರ್ನಾಟಕದಲ್ಲಿ ವಕ್ಫ್ ಮಂಡಳಿ, ರೈತರು, ಮಠ, ದೇವಸ್ಥಾನದ ಭೂಮಿಯನ್ನು ತನ್ನದೆಂದು ಹೇಳಿ ನೋಟೀಸ್ ಕಳುಹಿಸುತ್ತಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಪ್ರಸಕ್ತ ಇರುವ ವಕ್ಫ್ ಕಾಯ್ದೆಯಿಂದಾಗಿ ಖಾಸಗಿ ಭೂಮಿ, ಕೃಷಿ ಭೂಮಿ, ಐತಿಹಾಸಿಕ ಸ್ಥಳ, ಹಾಗೂ ಸ್ವಾತಂತ್ರ್ಯ ಪೂರ್ವದ ಆಸ್ತಿಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಲಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮನವಿ ಮಾಡಿದ್ದರು.

ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿದರೆ ಪಾರದರ್ಶಕತೆ ಜತೆಗೆ ಅರ್ಹ ಭೂ ಮಾಲೀಕರ ಹಕ್ಕನ್ನೂ ಕಾಪಾಡಿದಂತಾಗುತ್ತದೆ. ಇದರಿಂದ ಸಾರ್ವಜನಿಕ ಬಳಕೆಗೆ ಅನುಕೂಲವಾಗಲಿದೆ. ಯಾವುದೇ ಜಾತಿ, ಧರ್ಮಾತೀತವಾಗಿ ವಕ್ಫ್ ಆಸ್ತಿಗಳನ್ನು ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರ ಮುಂತಾದವುಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಹೀಗಾಗಿ ದೇಶದ ನಾಗರಿಕ ಹಕ್ಕನ್ನು ರಕ್ಷಿಸಲು ತಾವು ಕೂಡಲೇ ವಕ್ಫ್ ಆಸ್ತಿಗಳ ನಿರ್ವಹಣೆಗೆ ನೀತಿ ರೂಪಿಸುವಂತೆ ಕೋರುತ್ತೇನೆ ಎಂದು ಕೋರಿದ್ದರು.

ವಕ್ಫ್ ಕಾನೂನಿನಂತೆ ಹಿಂದೂ, ಜೈನ್, ಸಿಖ್ ಮುಂತಾದ ಸಮುದಾಯಗಳಲ್ಲಿ ಕಾನೂನು ಇಲ್ಲ. ವಕ್ಫ್ ಕಾನೂನು ಜಾತ್ಯತೀತತೆ, ಏಕತೆ, ಸಮಗ್ರತೆಗೆ ವಿರುದ್ಧವಾಗಿದೆ. ಯಾವುದೇ ಆಸ್ತಿಯನ್ನು ದಾನ ಮಾಡಿದರೆ ಅದು ವಕ್ಫ್ ಆಸ್ತಿಯಾಗುತ್ತದೆ. ಸಂವಿಧಾನದಲ್ಲಿ ವಕ್ಫ್ ಎಂಬ ಪದವನ್ನು ಎಲ್ಲೂ ಬಳಸಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್‌ಗೆ ಇದೊಂದು ಅಸ್ತ್ರವಾಗಿದೆ. ವಕ್ಫ್ ಕಾನೂನು ದೇಶದ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿಯ ವಿರಕ್ತ ಮಠಕ್ಕೆ 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಆಸ್ತಿ ದಾನ ಮಾಡಿದ್ದರು. ವಕ್ಫ್ ಅಸ್ತಿತ್ವಕ್ಕೆ ಬಂದಿದ್ದು, 19ನೇ ಶತಮಾನದಲ್ಲಿ. ಆದರೆ, ವಕ್ಫ್ ಮಂಡಳಿ ಈಗ ಆ ಆಸ್ತಿ ತನ್ನದೆಂದು ಹೇಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಸುದ್ದಿಯನ್ನೂ ಓದಿ | G Parameshwara: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ಪರಮೇಶ್ವರ್‌

ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಸಂಬಂಧ ಜಂಟಿ ಸದನ ಸಮಿತಿ ರಚಿಸಿದ ಬಳಿಕ ವಕ್ಫ್ ಮಂಡಳಿ ನೋಟಿಸ್ ಕಳುಹಿಸುವುದು, ಆರ್​ಟಿಸಿಯಲ್ಲಿ ಹೆಸರು ಬದಲಾಯಿಸುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ವಕ್ಫ್ ಆಸ್ತಿಯ ರಾಷ್ಟ್ರೀಕರಣ ಮಾಡಬೇಕು ಎಂದು ಶಾಸಕ ಯತ್ನಾಳ್‌ ಮನವಿ ಮಾಡಿದ್ದರು.