| ಅರವಿಂದ ಸಿಗದಾಳ್, ಮೇಲುಕೊಪ್ಪ
ಕೇರಳದ ವಯನಾಡಿನ ಧರೆ ಕುಸಿತಕ್ಕೆ ಪಶ್ಚಿಮಘಟ್ಟದ ನಿವಾಸಿಗಳು ಕಾರಣ ಎನ್ನುತ್ತಿರುವ ‘ನಗರ ಪರಿಸರವಾದಿಗಳು’ ಈಗ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನ ಭೂ ಕುಸಿತಕ್ಕೆ ಪಶ್ಚಿಮಘಟ್ಟದ ರೈತರು ಕಾರಣ ಅಂತ ಒಂದು ಹೇಳಿಕೆ ಕೊಟ್ಟರೂ ಆಶ್ಚರ್ಯವಿಲ್ಲ! ಗಾಡ್ಗಿಳ್ ವರದಿ ಜಾರಿ ಸಾಧ್ಯವೇ ಇಲ್ಲ ಎಂದು ಸೂಪರ್ಸೀಡ್ ಮಾಡಿ ತಳ್ಳಿ ಹಾಕಿದ ವರದಿಯನ್ನು ಹಿಡಿದ ನಗರ ಪರಿಸರವಾದಿಗಳಿಗೆ, ಬೆಂಗಳೂರಿನ ಭೂ ಕುಸಿತ ಸಂದರ್ಭದಲ್ಲಿ, ಪಶ್ಚಿಮಘಟ್ಟದ (Western Ghats) ನೆಲವಾಸಿಗಳ ಪರವಾಗಿ ಹೀಗೊಂದು ಒಂದು ಆತ್ಮೀಯ ಪತ್ರ.
ನಮಸ್ಕಾರ,
ಉಭಯ ಕುಶಲೋಪರಿ… ಸದ್ಯಕ್ಕೆ ನಾವು ಕ್ಷೇಮ. ಬೆಂಗಳೂರಿನ ಭಾರೀ ಮಳೆ, ಧರೆ ಕುಸಿತಗಳ ನಡುವೆಯೂ ನೀವು ಕ್ಷೇಮವೆಂದು ಭಾವಿಸುತ್ತೇವೆ. ಬೆಂಗಳೂರಿನ ಕುಂಭದ್ರೋಣ ಮಳೆಗೆ, ನಿಮಗೂ ಸೇರಿದಂತೆ, ಬೆಂಗಳೂರಿನ ಸಮಸ್ತರಿಗೂ ಏನೂ ಆಗದಿರಲಿ.
ಆತ್ಮೀಯ ನಗರ ಪರಿಸರವಾದಿಗಳೇ,
ಬೆಂಗಳೂರಿನ ಮಳೆ, ಬೆಂಗಳೂರಿನ ಧರೆ ಕುಸಿತ, ಟ್ರಾಫಿಕ್ ಜಾಮ್, ಕಲ್ಮಶ ನೀರಿನಿಂದ ಆಗುತ್ತಿರುವ ಅನಾರೋಗ್ಯ ಸಮಸ್ಯೆ, ಲೆಕ್ಕಕ್ಕೆ ಸಿಗದಷ್ಟು ವಾಹನಗಳ ಸಂಖ್ಯೆ, ಹೆಚ್ಚುತ್ತಿರುವ ವಾಯುಮಾಲಿನ್ಯ, ಬಿಗಡಾಯಿಸುತ್ತಿರುವ ನಗರದ ಕಸದ ಸಮಸ್ಯೆ, ಆಕಾಶ ಮುಟ್ಟುವ ಕಟ್ಟಡಗಳು, ಉಕ್ಕಿ ಹರಿಯುವ ರಾಜಾಕಾಲುವೆ, ನಿಷೇಧವಿದ್ದರೂ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುವ ಏಕ ಬಳಕೆ ಮತ್ತು 60mmಕ್ಕಿಂತ ಕಮ್ಮಿ ಗೇಜಿನ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಗಳು, ಅನಿವಾರ್ಯ ಮತ್ತು ಭೀಕರವಾದ ಅಭಿವೃದ್ಧಿ!, ಉಷ್ಣತೆ ಹೆಚ್ಚಿಸುವ ಗಾಜಿನ ಬಿಲ್ಡಿಂಗ್, ಸಣ್ಣ ಮಳೆ ಬಂದರೂ ನದಿಗಳಾಗುವ ರಸ್ತೆ, ಕಳೆದು ಹೋದ ಜೀವನಾಡಿ ಕೆರೆಗಳು ಮುಂತಾದ ಅಧ್ವಾನಗಳ ‘ಸೂಕ್ಷ್ಮ ಪರಿಸರದಲ್ಲಿ’ ಜೀವನ ಸಾಗಿಸುವ ನೀವು ಅಲ್ಲಿಯ ಎಲ್ಲಾ ಅಧ್ವಾನಗಳನ್ನು ಪ್ರತಿರೋಧ ವ್ಯಕ್ತಪಡಿಸದೆ ಸಹಿಸಿಕೊಂಡು ಬದುಕುತ್ತಿರುವ ನಿಮ್ಮ ಬಗ್ಗೆ ನಮಗೆ ಅತೀವ ಅನುಕಂಪ ಇದೆ.
ಈ ಸುದ್ದಿಯನ್ನೂ ಓದಿ | Horticulture: ತೋಟಗಾರಿಕೆ ಬೆಳೆಗಳಲ್ಲಿ ಕಂಡು ಬರುವ ರೋಗ ಗಳ ನಿರ್ವಹಣೆಗೆ ವಿಜ್ಞಾನಿಗಳ ಸಲಹೆಯಂತೆ ಮುಂದಾಗಿ
ನಗರದಲ್ಲಿ ಎಷ್ಟೊಂದು ಸಮಸ್ಯೆ:
ನಿಮ್ಮ ಕಾಲು ಬುಡದಲ್ಲಿ ಪರಿಸರ ವಿಧ್ವಂಸಕ ಕ್ರಿಯೆಗಳು ನಡೆಯುತ್ತಿದ್ದರೂ, ಅದರ ಬಗ್ಗೆ ಚಿಂತಿಸದೆ, ಪರಿಹಾರಕ್ಕೆ ದಾರಿ ಹುಡುಕದೆ, ವಿರೋಧಿಸದೆ, ಹೋರಾಡದೆ, “ಪಶ್ಚಿಮಘಟ್ಟದ ಪರಿಸರ ಹಾಳಾಗುತ್ತಿದೆ” ಎಂದು ಧ್ವನಿ ಎತ್ತುತ್ತಿರುವುದು, ಹೋರಾಡುತ್ತಿರುವುದು ನೋಡಿದರೆ, ಪಶ್ಚಿಮಘಟ್ಟದ ಕಾಡಂಚಿನಲ್ಲಿ ಕುಳಿತವರಿಗೆ ನೀವು ಅರ್ಥವಾಗದ ಪ್ರಶ್ನಾರ್ಥಕ ನಗರ ಪರಿಸರವಾದಿಗಳಾಗಿ ಕಾಣುತ್ತಿದ್ದೀರಿ!
ಅನಾರೋಗ್ಯಕರ ಪರಿಸರದಲ್ಲಿರುವ ನಿಮಗೆ, ಸದಾ ನಿಮ್ಮ ಹಿತವನ್ನೇ ಬಯಸುತ್ತ, ಪಶ್ಚಿಮ ಘಟ್ಟದವರ ಪರವಾಗಿ ಈ ಮೂಲಕ ಒಂದು ಆರೋಗ್ಯಕರ ಸಲಹೆ ಕೊಡಲು ಆಶಿಸುತ್ತೇವೆ. ಬೆಂಗಳೂರಿನಲ್ಲಿಯೂ ಧರೆ ಕುಸಿತದಂತಹ ಪ್ರಕರಣಗಳು ವರದಿಯಾಗುತ್ತಿರುವ ಸಮಯದಲ್ಲಿ ಈ ಸಲಹೆಯನ್ನು ಧನಾತ್ಮಕವಾಗಿ ಸ್ವೀಕರಿಸುತ್ತೀರಿ ಎಂಬುದು ನಮ್ಮ ಭರವಸೆ.
ಸಲಹೆ: ಬೆಂಗಳೂರನ್ನು ಪರಿಸರ ಸೂಕ್ಷ್ಮ ಪ್ರದೇಶ (ಎಕೋ ಸೆನ್ಸಿಟಿವ್ ಏರಿಯ (ESA) ಅಂತ ಘೋಷಣೆ ಮಾಡಿ, ಅಲ್ಲೂ ಕಸ್ತೂರಿ ರಂಗನ್/ಗಾಡ್ಗಿಳ್ ವರದಿಗಳ ಶಿಫಾರಸುಗಳನ್ನು ಜಾರಿ ಮಾಡಿಸಲು ತಾವುಗಳು ಧ್ವನಿ ಎತ್ತಬಹುದಾ?
AC ರೂಮಿನಲ್ಲಿ ಕುಳಿತು, ಸಹ್ಯಾದ್ರಿ ಪಶ್ಚಿಮ ಘಟ್ಟಕ್ಕೆ ಮಾತ್ರ ನಿಯಮ ರೂಪಿಸುವ ನಗರ ಪರಿಸರವಾದಿಗಳಾದ ನೀವು ವಿಸ್ತಾರವಾದ ಮನಸ್ಸಿನಿಂದ ವಿವೇಚನೆ ಮಾಡಿ, ಬೆಂಗಳೂರಿನ ಭೂಮಿಗೆ ಗಾಡ್ಗಿಳ್ ವರದಿಯನ್ನು ಯಥಾವತ್ ಓವರ್ಲ್ಯಾಪ್ ಮಾಡಿಸಿ ಜಾರಿ ಮಾಡುವುದರ ಬಗ್ಗೆ ನಿಮ್ಮ ಹೋರಾಟದ ಪ್ರಯತ್ನ ಶುರು ಮಾಡಬಹುದಾ?
ವಯನಾಡಿನಲ್ಲಿ ಭೂ ಕುಸಿತ ಆದಾಗ ಅದಕ್ಕೆ ಪಶ್ಚಿಮಘಟ್ಟದಲ್ಲಿ ಜನ ಸಾಂದ್ರತೆ ಹೆಚ್ಚುತ್ತಿರುವುದೇ ಕಾರಣ ಎಂಬ ಗಾಡ್ಗಿಳ್ ವರದಿಯ ಸಾಲನ್ನು ಎತ್ತಿ ಹಿಡಿದು, ಪಶ್ಚಿಮಘಟ್ಟದ ಜನರನ್ನು ಪರೋಕ್ಷವಾಗಿ ಒಕ್ಕಲೆಬ್ಬಿಸುವ ಧ್ವನಿಗೆ ಒತ್ತು ನೀಡುವ, ಮೆಟ್ರೋಪಾಲಿಟನ್ ಸಿಟಿಗಳಲ್ಲಿ ನಿತ್ಯ ಕಾರ್ಬನ್ ಡೈ ಆಕ್ಸೈಡ್ ಸೇವಿಸುವ ಪರಿಸರವಾದಿಗಳಾದ ನೀವು, ಶುದ್ಧ ಆಮ್ಲಜನಕ ಸೇವಿಸುತ್ತ ಬದುಕುವ ಪಶ್ಚಿಮಘಟ್ಟದ ಕಡೆ ಬೆರಳು ತೋರಿಸಿ, “ಪಶ್ಚಿಮಘಟ್ಟದ ಜೀವ ವೈವಿಧ್ಯ ನಾಶವಾಗುತ್ತಿದೆ ಎಂಬ ನಿಮ್ಮ ಧ್ವನಿ ಮತ್ತು ಅದಕ್ಕೆ NGO ಗಳಿಂದ ಪಡೆದ ಧ್ವನಿವರ್ಧಕಗಳೊಂದಿಗೆ ವಾದ ಮಾಡುವುದರ ಮೊದಲು ನೀವು ನಿಂತ ನೆಲವೇ ಸರ್ವ ನಾಶ ಆಗುತ್ತಿರುವಂತೆ ಕಾಣುತ್ತಿರುವುದರ ಬಗ್ಗೆ ಮರು ಯೋಚನೆ ಮಾಡಬಹುದಾ? ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಲು ಚಿಂತನೆ ಮಾಡಬಹುದಾ?
ಪರಿಸರ ಸಂರಕ್ಷಣೆ, ಸಮತೋಲನ, ಭೂಮಿಯ ಎಲ್ಲಾ ಭಾಗದಲ್ಲೂ ಆಗಬೇಕು, ಪಶ್ಚಿಮಘಟ್ಟದಲ್ಲಿ ಮಾತ್ರ ಅಲ್ಲ ಅಲ್ವಾ? ಪಶ್ಚಿಮಘಟ್ಟ ಪ್ರದೇಶದಲ್ಲಿ ವರದಿಗಳನ್ನು ಜಾರಿಗೆ ತಂದರೆ, ಗ್ರಾಜುವಲ್ ಆಗಿ ಪಶ್ಚಿಮಘಟ್ಟದ ಜನ ಸಾಂದ್ರತೆ ನಿಜವಾಗಿಯೂ ಕಡಿಮೆ ಆಗುತ್ತದೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳ ಪೀಠಿಕೆ ಶುರುವಾಗುವುದೇ ಪಶ್ಚಿಮಘಟ್ಟದ ಜನ ಸಾಂದ್ರತೆ ಹೆಚ್ಚಿರುವುದೇ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದ ದೊಡ್ಡ ಸಮಸ್ಯೆ ಎಂದು. ವರದಿಗಳ ಎಲ್ಲ ಶಿಫಾರಸುಗಳು ಪರೋಕ್ಷವಾಗಿ ಪಶ್ಚಿಮಘಟ್ಟದ ಜನ ಸಾಂದ್ರತೆ ಕಡಿಮೆ ಮಾಡಲು (ನಿಧಾನವಾಗಿ ಒಕ್ಕಲೆದ್ದು ಹೋಗುವಂತೆ ಮಾಡಲು) ಶಿಫಾರಸುಗಳನ್ನು ಮಾಡಲಾಗಿದೆ. ಮತ್ತು ಆ ಶಿಫಾರಸುಗಳನ್ನು ಜಾರಿಗೆ ನೀವು ಉತ್ಸುಕತೆಯಿಂದ ಒತ್ತಾಯ ಮಾಡುತ್ತಿದ್ದೀರಿ. ಧ್ವನಿ ಎತ್ತಿ ಹೋರಾಟ ಮಾಡುತ್ತಿದ್ದೀರಿ.
ಆಯ್ತು, ನಿಮ್ಮ ಧ್ವನಿಯೇ ಜೋರಾಗಿ, ನಾಳೆ ನಾವೆಲ್ಲ ಒಕ್ಕಲೆದ್ದು ಬಂದ್ರೆ, ನಮಗೆಲ್ಲ ನಿಮ್ಮ ಬೆಂಗಳೂರಿನಲ್ಲಿ ನೆಲೆ ಸಿಗುತ್ತದಾ? ಈಗಾಗಲೆ ಬೆಂಗಳೂರು ಬೆಳೆಯಲು ಅಡ್ಡ-ಉದ್ದ ಜಾಗ ಸಾಲದೆ ಮೇಲ್ಮುಖವಾಗಿ ಕಟ್ಟಡಗಳನ್ನು ಏರಿಸಲಾಗುತ್ತಿದೆ. ಲಕ್ಷ ಲಕ್ಷ ಜನರು ಗಂಟು ಮೂಟೆ ಕಟ್ಟಿಕೊಂಡು ಬಂದು, ನಿಮ್ಮ ಬೆಂಗಳೂರಿನ ಒಳಗೆ ನಮ್ಮನ್ನು ನಾವೇ ತುರುಕಿಕೊಂಡರೆ… ನಿಮ್ಮ ಉಸಿರಾಟಕ್ಕೂ, ಬದುಕಿಗೂ ಸಮಸ್ಯೆ ಆಗುವುದಿಲ್ವಾ? ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಈಗ ಉಳಿದಿರಬಹುದಾದ ಬೆರಳೆಣಿಕೆಯ ಮರ ಕಡಿದು, ಕೆರೆ ತುಂಬಿ, ರಾಜಾ ಕಾಲುವೆಯ ಮೇಲೆ ಒಂದು RCC ಹಾಕಿ ಮನೆ ಕಟ್ಟಬೇಕಾದ ಪರಿಸ್ಥಿತಿ ಬರೋದಿಲ್ವಾ? ಪಶ್ಚಿಮಘಟ್ಟದಿಂದ ಗುಳೆ ಎದ್ದು ಬಂದವರಿಂದ ಬೆಂಗಳೂರಿನ ಜನ ಸಾಂದ್ರತೆ ಮತ್ತಷ್ಟು ಹೆಚ್ಚಲಿಕ್ಕಿಲ್ಲವಾ? ಕುಡಿಯುವ ನೀರಿಗೇನು ಕತೆ? ಈ ಎಲ್ಲ ಹಿನ್ನೆಲೆಯಲ್ಲೂ ನಗರ ಪರಿಸರವಾದಿಗಳಾದ ನೀವು ಗಾಡ್ಗಿಳ್ ವರದಿಯನ್ನು ಮೊದಲು ಬೆಂಗಳೂರಿನಲ್ಲಿ ಜಾರಿ ಮಾಡಲು ಒತ್ತಾಯ ಮಾಡಬಹುದಾ?
ಆಮೇಲೆ, ಬೆಂಗಳೂರಿನಲ್ಲಿ ಗಾಡ್ಗಿಳ್ ವರದಿಯ ಜಾರಿ ಆಗಿ, ಭೂ ಕುಸಿತ ಕಮ್ಮಿ ಆದ ಮೇಲೆ, ಸಾಧ್ಯವಾದರೆ, ಸರಿ ಎನಿಸಿದರೆ, ಆ ವರದಿಯನ್ನು ಪಶ್ಚಿಮಘಟ್ಟದಲ್ಲಿ ಜಾರಿಗೊಳಿಸಲು ಧ್ವನಿ ಏರಿಸಿ. ಅಲ್ಲಿಯವರೆಗೆ ಪಶ್ಚಿಮಘಟ್ಟದ ಜನರನ್ನು ಪಶ್ಚಿಮ ಘಟ್ಟದಲ್ಲೇ ನೆಮ್ಮದಿಯಿಂದ ಬದುಕಲು ಬಿಡಿ. ನೆಮ್ಮದಿ ಕೂಡ ಕೊಟ್ಟು ತೆಗೆದುಕೊಳ್ಳುವಂತಹದು ಎಂದು ಬೆಂಗಳೂರಿನ ಇತ್ತೀಚಿನ ಪರಿಸ್ಥಿತಿ ನಿಮಗೆ ಮನವರಿಕೆ ಮಾಡಿದೆ ಎಂದು ನಂಬುತ್ತೇವೆ.
ಇಲ್ಲಿ ವಾಸ ಮಾಡಿ ನೋಡಿ
ಗಾಡ್ಗಿಳ್ ವರದಿಯನ್ನು ಪಶ್ಚಿಮ ಘಟ್ಟದಲ್ಲಿ ಜಾರಿ ಮಾಡಲು ಒತ್ತಾಯಿಸುವ ನೀವು, ಪಶ್ಚಿಮಘಟ್ಟದಲ್ಲಿ ಆಗಾಗ ತಿರುಗಾಡುತ್ತಿರುವುದು ಸರಿಯಷ್ಟೆ? ಹಾಗೆ ತಿರುಗಾಡುವ ನೀವು, ಒಂದೆರಡು ತಿಂಗಳು ಪಶ್ಚಿಮಘಟ್ಟದ ನಿಮ್ಮ ಪರಿಚಿತರ ಮನೆಗಳಲ್ಲಿ ವಾಸ ಮಾಡಿ (ಹೈಟೆಕ್ ರೆಸಾರ್ಟ್ನಲ್ಲಲ್ಲ), ಇಲ್ಲಿಯ ಜನರ ಹೃದಯ ಬಡಿತವನ್ನು ಗಮನಿಸಿ. ಪಶ್ಚಿಮಘಟ್ಟದ ಪರಿಸರ ಹಾಳುತ್ತಿದೆ ಅಂತಾದರೆ, ಅದಕ್ಕೆ ಕಾರಣ ಯಾರು ಎಂದು ಕಾಲ್ನಡಿಗೆಯಲ್ಲಿ ತಿರುಗಿ ಪರಿವೀಕ್ಷಣೆ ಮಾಡಬಹುದಾ? ಕಾಡಿನ ಮಧ್ಯದ, ಘಾಟ್ ಸೆಕ್ಷನ್ನ ನ್ಯಾಷನಲ್ ಹೈವೇ ಪಕ್ಕದಲ್ಲಿ ಒಂದು ಹತ್ತು ಅಡಿ ಕೆಳಗೆ ಇಳಿದು ನೋಡಿ. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್, ನಿಷೇಧಿತ 60 ಮೈಕ್ರಾನ್ ಒಳಗಿನ ಪ್ಲಾಸ್ಟಿಕ್ ತ್ಯಾಜ್ಯಗಳು ಎಷ್ಟು ಬಿದ್ದಿವೆ ಎಂದು ಒಮ್ಮೆ ನೋಡಿ. ಯಾವ ಯಾವ ಪ್ರಾಣಿ, ಪಕ್ಷಿಗಳು ಅದನ್ನು ತಿಂದು ರೋದಿಸುತ್ತಿವೆ, ಸಾಯುತ್ತಿವೆ, ಜೀವ ವೈವಿಧ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ಗಮನಿಸಿ.
ಅಷ್ಟು ನಿಷೇಧವಿರುವ ನಿಷೇಧಿತ ಪ್ಲಾಸ್ಟಿಕ್ಗಳು ತಯಾರಾಗುವುದೆಲ್ಲಿ? ನಿಮಗೆ ಗೊತ್ತಿಲ್ಲವೇನೋ? ಅವೆಲ್ಲ ತಯಾರಾಗುವುದು ನೀವು ಬದುಕುತ್ತಿರುವ ಬೆಂಗಳೂರು ಎಂಬ ಮಹಾನಗರದ ‘ಅತಿ ಸೂಕ್ಷ್ಮ ಪ್ರದೇಶದಲ್ಲೆ! ಕಾನೂನು ಮೀರಿ, ಅಲ್ಲಿ ಬಂದು ಅದನ್ನು ತಯಾರು ಮಾಡುವುದು ಯಾವ ಪಶ್ಚಿಮ ಘಟ್ಟದ ನೆಲವಾಸಿಗಳಲ್ಲ! ಅಲ್ಲಿಂದ ಅದನ್ನು ಪಶ್ಚಿಮ ಘಟ್ಟದ ನಿರ್ಜನ ಹೈವೇ ಪಕ್ಕದ ಘಾಟಿಗಳಗೆ ಬಂದು ಬೀಳುವಂತೆ ಕಳಿಸುವ ವ್ಯವಹಾರವನ್ನೂ ಪಶ್ಚಿಮ ಘಟ್ಟದ ನೆಲವಾಸಿಗಳು ಮಾಡುವುದಲ್ಲ. ಪಶ್ಚಿಮಘಟ್ಟ ಉಳಿವು ಹೋರಾಟವನ್ನು ಪ್ರಾರಂಭಿಸುವ ಮೊದಲು ನೀವಿರುವ ನಗರಗಳಲ್ಲೇ ಆಗುತ್ತಿರುವ ಇಂತಹ ಅಪಸವ್ಯಗಳನ್ನು ತಡೆಯುವ ಧ್ವನಿ ಎತ್ತಿ. ಪ್ಲಾಸ್ಟಿಕ್ ಅಪಸವ್ಯದ ಬಗ್ಗೆ ಹೇಳಿದ್ದು ಒಂದು ಉದಾಹರಣೆ ಮಾತ್ರ, ಇಂತಹ ಹತ್ತಾರು ಅಸಂಬದ್ಧಗಳು ನಿಮ್ಮ ಮನೆ ಇರುವ ಬೆಂಗಳೂರಿನ ಮೂಲೆಗಳಲ್ಲಿ. ಮೂಲೆಯ ಕಾರ್ಖಾನೆಗಳಲ್ಲಿ! ಇದರ ಬಗ್ಗೆ ನೀವೇ ನಿಮ್ಮಲ್ಲಿ ಜಾಗೃತಿ ಮೂಡಿಸಿಕೊಳ್ಳಬಹುದಾ?
ಇದಕ್ಕೆ ಕಾರಣ ಏನು?:
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಧರೆ ಜರಿಯುತ್ತಿದೆ. ಇಂತಹ ಮಳೆ ಬೆಂಗಳೂರಿನಲ್ಲಿ ಹಿಂದೆಯೂ ಬಂದಿದೆ. ಬೆಂಗಳೂರಿನಲ್ಲಿ ಇದಕ್ಕಿಂತ ದೊಡ್ಡ ಮಳೆ ಬಂದ ದಾಖಲೆಗಳು ಸಾಕಷ್ಟಿವೆ ಎಂದು ಟಿವಿ ಡಿಬೇಟ್ಗಳಲ್ಲಿ ಈಗಲೂ ಬರ್ತಾ ಇದೆ. ಆದರೆ, ಬೆಂಗಳೂರು ಈಗ ಈ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತಾದರೆ ಅದಕ್ಕೆ ಕಾರಣ ಏನು? ಪರಿಸರವಾದಿಗಳು ವಾಸಿಸುವ ನಿಮ್ಮ ನಗರದ ಧರೆಯೇ ನೀವಿದ್ದೂ ಕುಸಿಯುತ್ತಿದೆ ಅಂತಾದರೆ, ನೀವು ನಿಮ್ಮ ಮನೆಯ ಬೆಂಕಿ ಆರಿಸುವಿಕೆ ಬಿಟ್ಟು, ನಿಮ್ಮನ್ನು, ನಿಮ್ಮ ಕುಟುಂಬವನ್ನು ರಕ್ಷಣೆ ಮಾಡುವುದು ಬಿಟ್ಟು, ಪಶ್ಚಿಮಘಟ್ಟ ಉಳಿಯಬೇಕು ಅಂತ ಉರಿಯುತ್ತಿರುವ ಮನೆ, ಮಕ್ಕಳನ್ನು ಅಲ್ಲಿಯೇ ಬಿಟ್ಟು ಹೊರಡಬೇಡಿ. ಸದ್ಯಕ್ಕೆ ಪಶ್ಚಿಮಘಟ್ಟದ ಸಮಸ್ಯೆಯನ್ನು ನಾವು ನೋಡಿಕೊಳ್ತೇವೆ. ಅಗತ್ಯ ಬಿದ್ರೆ, ಭವಿಷ್ಯದಲ್ಲಿ ನಿಮ್ಮ ಸಹಾಯ ಕೋರುತ್ತೇವೆ. ಆಗಲೂ ನೀವು ನಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿ, ಅಲ್ಲಿಗೆ ಕರೆದೊಯ್ಯುವ ಸಹಾಯ ಬೇಡ.
ಪಶ್ಚಿಮ ಘಟ್ಟ ವಿಸ್ತಾರವಾಗಿದೆ:
ಸುರಿಯುತ್ತಿರುವ ಚಿತ್ತಾ ಮಳೆಗೆ ಬೆಂಗಳೂರು ಚಿತ್ ಆಗಿದೆ. ಉಡ್ತಾ ಬೆಂಗಳೂರು ಆಗಿದೆ. ಧರೆ ಕಟ್ಟಡಗಳು ಕುಸಿಯುತ್ತಿವೆ. ಪ್ರತೀ ವರ್ಷದ ಸಣ್ಣ ಮಳೆಗೂ ಬೆಂಗಳೂರು ಮುಳುಗುತ್ತಿದೆ. ಕಾಲದಲ್ಲಿ ಮುಂದೆ ಮುಂದೆ ಹೋದಹಾಗೆ ಪರಿಣಾಮ ಏನಾಗಬಹುದು? ದಯವಿಟ್ಟು ಅದರ ಬಗ್ಗೆ ಯೋಚನೆ ಮಾಡಿ. ಬೆಂಗಳೂರಿನಲ್ಲಿ ಬದುಕು ಅಸಾಧ್ಯ ಅನ್ನಿಸಿದರೆ ಇಲ್ಲಿಗೆ ಬನ್ನಿ, ಪಶ್ಚಿಮ ಘಟ್ಟ ವಿಸ್ತಾರವಾಗಿದೆ. ನೀವು ಆರೋಗ್ಯವಾದ ವಾತಾವರಣದಲ್ಲಿ ಸರಳವಾಗಿ ಜೀವಿಸಲು ಬರುವುದಾದರೆ, ನಾವು ಮತ್ತು ನಮ್ಮ ಪಶ್ಚಿಮಘಟ್ಟ ನಿಮ್ಮನ್ನು ಸ್ವಾಗತಿಸುತ್ತೇವೆ. ಕನಿಷ್ಠ ಈ ದೃಷ್ಟಿಯಿಂದಲಾದರೂ, “ಪಶ್ಚಿಮಘಟ್ಟ ಜನ ಸಾಂದ್ರತೆಯಿಂದ ತತ್ತರಿಸುತ್ತಿದೆ” ಎಂದು ಯಾರೋ ಉಸುರಿದ ಅಸಂಬದ್ಧ ಪದ ಹಿಡ್ಕೊಂಡು, ಈಗಿನ ಇಲ್ಲಿನ ಶಾಂತಿ ಕದಡಬೇಡಿ.
ಚೆನ್ನೈ ನಗರವೂ ವರುಣಾರ್ಭಟಕ್ಕೆ ಪ್ರತೀ ವರ್ಷ ತತ್ತರಿಸುತ್ತಿದೆ. ಇಡೀ ಮುಂಬಯಿ ಮಳೆಗಾಲ ಬಂದ್ರೆ ಭಯಂಕರ ಸೂಕ್ಷ್ಮ ಪ್ರದೇಶ ಆಗುತ್ತಾ ಇದೆ. ಉತ್ತರ ಭಾರತವಂತೂ ಕೇಳುವುದೇ ಬೇಡ. ಇದಕ್ಕೆಲ್ಲ ಕಾರಣ ಮಳೆ ಹೆಚ್ಚಾಗಿರುವುದಲ್ಲ. ಮೆಟ್ರೋ ನಗರಗಳ ತಡೆದುಕೊಳ್ಳುವ ಕೆಪಾಸಿಟಿ ಕ್ಷೀಣಿಸುತ್ತಿರುವುದು. ಗಾಡ್ಗಿಳ್ ವರದಿಯ ಯಾವುದಾದರೂ ಶಿಫಾರಸುಗಳು ನಿಮ್ಮ ಬೆಂಗಳೂರಿಗೆ, ಚೆನ್ನೈ ಅಥವಾ ಇನ್ನುಳಿದ ನಗರಗಳಿಗೆ ಜಾರಿ ಮಾಡಿ ಅಳವಡಿಸಿ, ಸರಿಪಡಿಸಲು ಸಾಧ್ಯವಾ ನೋಡಿ. ಸದ್ಯಕ್ಕೆ ಗಾಡ್ಗಿಳ್ ವರದಿ ಪಶ್ಚಿಮಘಟ್ಟಕ್ಕಿಂತ ಬೆಂಗಳೂರಿನಂತಹ ನಗರಗಳಿಗೆ ಹೆಚ್ಚು ಅಗತ್ಯ ಇದೆ. ಇಷ್ಟಾದ ಮೇಲೂ, ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಭೂ ಕುಸಿತಕ್ಕೆ ಕಾರಣ ಪಶ್ಚಿಮ ಘಟ್ಟದಲ್ಲಿ ಜನ ಸಾಂದ್ರತೆ ಹೆಚ್ಚಿರುವುದು ಅಂತ ಕತೆ ಕಟ್ಟಲು ಹೋಗಬೇಡಿ. ವಿಜ್ಞಾನ ಓದಿದ ನಿಮ್ಮ ಮಕ್ಕಳೂ ಅದನ್ನು ಒಪ್ಪಲಿಕ್ಕಿಲ್ಲ.
ಈ ಸುದ್ದಿಯನ್ನೂ ಓದಿ | Karnataka Rain: ಶಿವಮೊಗ್ಗ, ಕಾಫಿನಾಡಿನಲ್ಲಿ ಮಳೆಯಾರ್ಭಟ; ಮನೆಗಳಿಗೆ ನುಗ್ಗಿದ ನೀರು, ನಾಳೆಯೂ ಭಾರಿ ಮಳೆ ನಿರೀಕ್ಷೆ
ನಿಮ್ಮದನ್ನು ನೀವು ನೋಡಿಕೊಳ್ಳಿ:
ಪಶ್ಚಿಮಘಟ್ಟ ಉಳಿಸಬೇಕು ಅಂತ ನೀವು ಈಗ ಎದ್ದು ಬರುವುದೂ ಬೇಡ. ನಿಮ್ಮ ಬೆಂಗಳೂರಿನ ಸಾವಿರಾರು ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಸದ್ಯಕ್ಕೆ ಈ ಕಡೆ ಮುಖಹಾಕಿ ಮಲಗುವ ಅಗತ್ಯವೂ ಇಲ್ಲ. ಅಡಿಕೆ ತೋಟದ ಹತ್ತಾರು ಸಮಸ್ಯೆಗಳು, ಅದರ ತಲ್ಲಣ, ಮುಳುಗಿದ ಗದ್ದೆ, ಒತ್ತುವರಿಯ ಆತಂಕ, ಒಂದೂ ನೇರ-ನೆಟ್ಟಗಿಲ್ಲದ ಕೃಷಿ ಸಂಬಂಧಿತ ಸಾಫ್ಟ್ವೇರ್ ಸಿಸ್ಟಮ್, ಕಸ್ತೂರಿ ರಂಗನ್ ವರದಿ ಜಾರಿ ಆಗಿದೆ ಅಂದುಕೊಂಡು ಕಾಟ ಕೊಡುತ್ತಿರುವ ಕಾಡು ಪ್ರಾಣಿಗಳು, ಯಾವ ಸಮಸ್ಯೆಗೂ ಸ್ಪಂದಿಸದ ನಿಷ್ಕ್ರಿಯ ಜನ ಪ್ರತಿನಿಧಿಗಳು, ನಮ್ಮ ಹಕ್ಕಿನ ವಿರುದ್ಧದ ನಿಮ್ಮ ಹೋರಾಟ! ಹೀಗೆ ಹತ್ತಾರು ಸಮಸ್ಯೆಗಳ ನಡುವೆ ನಾವೆಲ್ಲ ಸ್ವಲ್ಪ ಸಂಕಟದಲ್ಲಿದ್ದೇವೆ. ಇದೆಲ್ಲದರ ಪರಿಣಾಮದಿಂದ ಮೇಲಿನ ಪತ್ರದಲ್ಲಿ ಸೌಜನ್ಯದ ಕೊರತೆ ಉಂಟಾಗಿದ್ದರೆ, ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ.