Friday, 25th October 2024

ಆರೋಪ, ಪ್ರತ್ಯಾರೋಪಕ್ಕೆ ಉತ್ತರ ಕೊಡಲ್ಲ

ವಿಶ್ವವಾಣಿ ಸಂದರ್ಶನ: ವಿನಾಯಕ ಮಠಪತಿ

ದಿ.ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಕಣದಲ್ಲಿದ್ದಾರೆ. ಅವರ ಗೆಲುವಿಗೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಕ್ಷೇತದಲ್ಲಿ ಕಳೆದ ಹತ್ತು ದಿನಗಳಿಂದ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮಂಗಲಾ ಅವರು ತಮ್ಮ ಅನಿಸಿಕೆಗಳನ್ನು ವಿಶ್ವವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

ಚುನಾವಣೆಯ ಕೊನೆಯ ಹಂತದ ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಯಾವ ರೀತಿ ಬೆಂಬಲ ಸಿಗುತ್ತಿದೆ?
ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಉತ್ತಮವಾಗಿ ನಡೆದಿದೆ. ಬೆಳಗಾವಿಗೆ ನಾಲ್ಕು ಬಾರಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಆಗಮಿಸಿ ಪ್ರಚಾರ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಶಾಸಕರು ಹಾಗೂ ಕಾರ್ಯಕರ್ತರು ಬೆಳಗಾವಿ ಲೋಕಸಭಾ ಕ್ಷೇತ್ರದ ಮೂಲೆ ಮೂಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಪರ ವಾತಾವರಣ ಇದ್ದು, ಈ ಬಾರಿ ಗೆಲುವು ನಮ್ಮದೆ. ಕ್ಷೇತ್ರದ ತುಂಬ ಜನರು ದಿ. ಸುರೇಶ್ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮರೆತಿಲ್ಲ. ಅವರಿಂದ ಉತ್ತಮವಾದ ಬೆಂಬಲ ಸಿಗುತ್ತಿದೆ.

ರಾಜ್ಯದ ಪ್ರಮುಖ ಬಿಜೆಪಿ ನಾಯಕರ ಬೆಂಬಲ ಹೇಗೆ ಸಿಗುತ್ತಿದೆ?
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರಾಜ್ಯ ರೈಲ್ವೆ ಖಾತೆ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ಅವರು ಕೇವಲ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ನನೆಗುದಿಗೆ ಬಿದ್ದ ಯೋಜನೆಗಳನ್ನು ಪ್ರಾರಂಭಿಸಿದರು. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಬೆಳಗಾವಿ, ಕಿತ್ತೂರು ಮಾರ್ಗವಾಗಿ ಹುಬ್ಬಳ್ಳಿ ಧಾರವಾಡದ ರೈಲ್ವೆ
ಯೋಜನೆಗೆ ಚಾಲನೆ ನೀಡಿದ್ದು, ಹೆಮ್ಮೆಯ ಸಂಗತಿ. ಸಿಎಂ ಬಿ.ಎಸ್.ಯಡಿಯೂರಪ್ಪ, ನಮ್ಮ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಘಟಾನುಘಟಿ ನಾಯಕರು, ಶಾಸಕರು, ಕಾರ್ಯಕರ್ತರ ಬೆಂಬಲ ಅಭೂತಪೂರ್ವವಾಗಿ ಸಿಕ್ಕಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯನವರು ನಿಮಗೆ ರಾಜಕೀಯ ಅನುಭವ ಇಲ್ಲ ಎಂದು ಹೇಳುತ್ತಾರೆ ನಿಜಾನಾ…?
ಕಳೆದ 20 ವರ್ಷಗಳಿಂದ ನನ್ನ ಪತಿ ಅಂಗಡಿ ಅವರಿಂದ ನಾನು ಸಾಕಷ್ಟು ರಾಜಕೀಯ ಪಾಠ ಕಲಿತಿದ್ದೇನೆ. ನನಗೂ ರಾಜಕೀಯ ಮಾಡಲು ಬರುತ್ತದೆ. ನಾನು ಬಹಿರಂಗವಾಗಿ ಹೊರಗೆ ಹೋಗುತ್ತಿರಲಿಲ್ಲ. ಆದರೆ, ಚುನಾವಣೆಯಲ್ಲಿ ನಾನು ಅವರೊಂದಿಗೆ ಪ್ರಚಾರ ನಡೆಸಿದ್ದೇನೆ. ಕ್ಷೇತ್ರದ ಪರಿಚಯ ನನಗೆ ಇದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಜನರು ಸುಶಿಕ್ಷಿತರಿದ್ದಾರೆ. ಅವರು ಯಾವುದನ್ನೂ ಮರೆತಿಲ್ಲ. ನಾನು ಬೇರೆಯವರ ಹೇಳಿಕೆಗೆ ಆರೋಪ, ಪ್ರತ್ಯಾರೋಪ ಮಾಡುವುದಿಲ್ಲ.

ಬಿಜೆಪಿಯಲ್ಲಿ ಕೆಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅವರ ವೈಮನಸ್ಸು ಹೇಗೆ ಶಮನ ಮಾಡುತ್ತೀರಿ..?
ಬಿಜೆಪಿ ಹೈಕಮಾಂಡ್ ಕೊನೆಯ ಗಳಿಗೆಯಲ್ಲಿ ನನಗೆ ಟಿಕೆಟ್ ನೀಡಿರುವುದಕ್ಕೆ ಎಲ್ಲ ಕಾರ್ಯಕರ್ತರು, ಆಕಾಂಕ್ಷಿಗಳು ಮನೆಗೆ ಬಂದು ಶುಭಾಶಯ ತಿಳಿಸಿದರು. ಯಾರಿಗೂ ವೈಮನಸ್ಸು ಎನ್ನುವುದು ಇಲ್ಲ. ಒಂದು ವೇಳೆ ನಿಮ್ಮ ಕುಟುಂಬಕ್ಕೆ ನೀಡದಿದ್ದರೆ ನಮಗೆ ಪರಿಗಣಿಸಿ ಎಂದು ಹೈಕಮಾಂಡ್‌ಗೆ ಅರ್ಜಿ ಸಲ್ಲಿಸಿದ್ದೆವು ಎಂದಿದ್ದಾರೆ. ಆದರೆ, ಈಗ ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಯಾರಿಗೂ ವೈಮನಸ್ಸು ಇಲ್ಲವೇ ಇಲ್ಲ.

ಚುನಾವಣೆಯಲ್ಲಿ ನಿಮ್ಮ ಪುತ್ರಿಯರ ಸಹಾಯ ಯಾವ ರೀತಿ ಸಿಗುತ್ತಿದೆ?
ನಮ್ಮ ಪುತ್ರಿಯರು ತಂದೆಯೊಂದಿಗೆ ಸಾಕಷ್ಟು ಕಲಿತಿದ್ದಾರೆ. ತಂದೆಯ ಅಭಿವೃದ್ಧಿ ಕಾರ್ಯ, ಅವರ ಕನಸನ್ನು ಪೂರ್ಣ ಮಾಡುವುದಾಗಿ ಶಪಥ ಮಾಡಿದ್ದಾರೆ. ಅವರು ಕ್ಷೇತ್ರದ ತುಂಬ ಪ್ರಚಾರ ನಡೆಸಿ, ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ನನ್ನ ಮಕ್ಕಳು
ಸಾಕಷ್ಟು ನನಗೆ ಸಹಾಯ ಮಾಡುತ್ತಿದ್ದಾರೆ.

ನಿಮ್ಮ ವಿರುದ್ಧ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಸ್ಪರ್ಧೆ ಮಾಡಿದ್ದಾರೆ. ಇದರ ಬಗ್ಗೆೆ ಹೇಳುವುದಾದರೆ?
ನಮ್ಮ ಎದುರು ಯಾರೇ ಅಭ್ಯರ್ಥಿ ಸ್ಪರ್ಧೆ ಮಾಡಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ದಿ.ಸುರೇಶ್ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳು ನಮಗೆ ಈ ಬಾರಿಯ ಚುನಾವಣೆಯಲ್ಲಿ ಕೈ ಹಿಡಿಯಲಿದೆ. ಕಾರ್ಯಕರ್ತರು ಸಹ ಎಲ್ಲ ಕಡೆ ಪ್ರಚಾರ ನಡೆಸಿದ್ದು, ಉತ್ತಮವಾದ ವಾತಾವರಣ ಇದೆ. ಕಾರ್ಯಕರ್ತರೇ ಹೇಳುತ್ತಿದ್ದಾರೆ, ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು
ನಮ್ಮದಾಗುತ್ತದೆ ಎಂದು. ಎಲ್ಲಾ ಕಡೆಯಿಂದಲೂ ಬಾರಿ ಬೆಂಬಲ ವ್ಯಕ್ತವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಕುರಿತು ತಮ್ಮ ಕನಸು ಏನು?
ಅತಿ ಹೆಚ್ಚಿನ ಸಂಖ್ಯೆೆಯಲ್ಲಿ ಯುವಕರಿದ್ದು, ಅವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದು ನನ್ನ ಆಸೆಯಾಗಿದೆ. ಜತೆಗೆ ದೊಡ್ಡ ಮಟ್ಟದಲ್ಲಿ ಕೇಂದ್ರದ ಅನುದಾನವನ್ನು ತಂದು ಸುರೇಶ್ ಅಂಗಡಿಯವರು ಕಂಡ ಅಭಿವೃದ್ಧಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ.