ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನ ಕೂಡಲೇ ಹಿಂಪಡೆಯುವಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ಈ ಕುರಿತು ಪತ್ರ ಬರೆದಿರುವ ಮಾಜಿ ಸಿಎಂ, ಹೊಸ ಶಿಕ್ಷಣ ನೀತಿ ಕುರಿತಾದ ಚರ್ಚೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ಅನ್ನ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲು ಚಾಲನೆ ಹಾಗೂ ಈ ಕುರಿತು ಚರ್ಚಿಸಲು ದಿನಾಂಕವನ್ನು ನೀಡುವಂತೆ ತಮ್ಮ ಕಛೇರಿಯಿಂದ ಪತ್ರ ಬರೆದು ಕೋರಲಾಗಿದೆ. ಈಗಾಗಲೆ ತರಾತುರಿಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು, ಪೋಷಕರುಗಳ ಜೊತೆ ಚರ್ಚಿಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಈ ಶೈಕ್ಷಣಿಕ ವರ್ಷದಿಂದಲೆ ಅನುಷ್ಠಾನ ಮಾಡುವುದಾಗಿ ಹೇಳಿ ಉದ್ಘಾಟನೆ ಮಾಡಲಾಗಿದೆ. ಇದು ಸಂಸದೀಯವಾಗಿ ಸರಿಯಲ್ಲ ಎಂದು ಉಲ್ಲೇಖಿಸಿದ್ದಾರೆ.