-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್ ಫ್ಯಾಷನ್‌ನಲ್ಲಿ ಆಕರ್ಷಕ ಹೇರ್ ಸ್ಟೈಲಿಂಗ್‌ಗೆ ಸಾಥ್ ನೀಡುವಂತಹ ವೈವಿಧ್ಯಮಯ ಹೆಡ್ ಬ್ಯಾಂಡ್‌ಗಳು (Winter Headband Fashion) ಆಗಮಿಸಿವೆ. ಇವು ಈ ಸೀಸನ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸುವುದರೊಂದಿಗೆ ಕಿವಿಯನ್ನು ಬೆಚ್ಚಗಿಡುತ್ತಿವೆ. ವಯಸ್ಸಿನ ಭೇದ-ಬಾವವಿಲ್ಲದೇ ಎಲ್ಲರನ್ನೂ ಸೆಳೆದಿವೆ.
ಬಗೆಬಗೆಯ ವಿಂಟರ್ ಹೆಡ್‌ಬ್ಯಾಂಡ್ಸ್
ಉಲ್ಲನ್, ಸೆಮಿ ಸಿಲ್ಕ್, ಪ್ರಿಂಟೆಡ್ ಫ್ಯಾಬ್ರಿಕ್‌ನಲ್ಲಿ ಸಿದ್ಧಗೊಂಡಿರುವಂತಹ ಈ ಹೆಡ್‌ಬ್ಯಾಂಡ್‌ಗಳು ನಾನಾ ಡಿಸೈನ್‌ನಲ್ಲಿ ಬೇಡಿಕೆ ಸೃಷ್ಠಿಸಿಕೊಂಡಿವೆ. ಒಂದಕ್ಕಿಂತ ಒಂದು ನೋಡಲು ವಿಭಿನ್ನವಾಗಿರುವ ಡಿಸೈನ್‌ನಲ್ಲಿ ದೊರೆಯುತ್ತಿವೆ. ಧರಿಸಿದಾಗ ವಿಂಟರ್‌ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಚನಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಮಂದಿ ಕಿವಿಗೆ ಗಾಳಿ ಹೋಗುವುದನ್ನು ತಡೆಯಲು ಇವನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ.
ಆಕರ್ಷಕ ಉಲ್ಲನ್ ಹೆಡ್‌ಬ್ಯಾಂಡ್ಸ್
ಉಲ್ಲನ್ ಹೆಡ್ ಬ್ಯಾಂಡ್ ಈ ಸೀಸನ್‌ಗೆ ಹೇಳಿಮಾಡಿಸಿದಂತಿರುತ್ತವೆ. ಧರಿಸಿದಾಗ ಬೆಚ್ಚನೆಯ ಅನುಭವ ನೀಡುತ್ತವೆ. ಚಳಿ ಗಾಳಿಯಲ್ಲಿ ಔಟಿಂಗ್‌ಗೆ ಹೋಗುವಾಗ ಈ ಆಕ್ಸೆಸರೀಸ್ ಕಿವಿಯನ್ನು ಬೆಚ್ಚಗಿಡುವುದರೊಂದಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಉಲ್ಲನ್‌ನಲ್ಲಿ ಸಾದಾ ವಿನ್ಯಾಸದವನ್ನು ಹೊರತುಪಡಿಸಿದರೇ ಫ್ಲೋರಲ್ ಡಿಸೈನ್‌ನವು ಹೆಚ್ಚು ಟ್ರೆಂಡಿಯಾಗಿವೆ.
ಯೂನಿಸೆಕ್ಸ್ ಇನ್ಫೈನೈಟ್ ಹೆಡ್‌ಬ್ಯಾಂಡ್ಸ್
ಹುಡುಗ-ಹುಡುಗಿಯರು ಇಬ್ಬರೂ ಬಳಸಬಹುದಾದ ಇನ್ಫೈನೈಟ್ ಹೆಡ್‌ಬ್ಯಾಂಡ್‌ಗಳು ನಾನಾ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತವೆ. ನೋಡಲು ಸುಲಭವಾಗಿ ಬಳಸಬಹುದಾದ ಇವು ಎಲಾಸ್ಟಿಕ್ ಮೆಟೀರಿಯಲ್ ಹೊಂದಿರುತ್ತವೆ. ಇವನ್ನು ಕೇವಲ ಹೆಡ್‌ಬ್ಯಾಂಡ್‌ನಂತೆ ಮಾತ್ರವಲ್ಲ, ನೆಕ್ ಸ್ಕಾರ್ಫ್, ಹೇರ್‌ಬ್ಯಾಂಡ್‌ನಂತೆಯೂ ಬಳಸಬಹುದು.
ಪ್ರಿಂಟೆಡ್ ಹೆಡ್‌ಬ್ಯಾಂಡ್ಸ್
ಕಂಟೆಂಪರರಿ ಪ್ರಿಂಟ್ಸ್‌ನಲ್ಲಿ ಈ ಹೆಡ್‌ಬ್ಯಾಂಡ್‌ಗಳು ಸದ್ಯ ಚಾಲ್ತಿಯಲ್ಲಿವೆ. ಸೆಮಿ ಸಿಲ್ಕ್‌ನವು ಹೆಚ್ಚು ಬಳಕೆಯಲ್ಲಿವೆ. ಇವನ್ನು ಮಲ್ಟಿ ಪರ್ಪಸ್ ಆಗಿ ಬಳಸುವುದು ಇತ್ತೀಚೆಗೆ ಹೆಚ್ಚಾಗಿದೆ. ಹೆಡ್‌ಬ್ಯಾಂಡ್ ಮಾತ್ರವಲ್ಲದೇ, ನೆಕ್‌ಬ್ಯಾಂಡ್, ಕ್ಯಾಪ್‌ನಂತೆಯೂ ಇವನ್ನು ಧರಿಸಬಹುದು. ಮಲ್ಟಿ ಡಿಸೈನ್ಡ್ ಬ್ಯಾಂಡ್ ಎಂದೂ ಕೂಡ ಇವನ್ನು ಕರೆಯಲಾಗುತ್ತದೆ.
ಹೆಡ್ ಬ್ಯಾಂಡ್ ಪ್ರಿಯರಿಗೆ ಸಿಂಪಲ್ ಟಿಪ್ಸ್
- ಯೂನಿಸೆಕ್ಸ್ ಹೆಡ್‌ಬ್ಯಾಂಡ್ ಆದಷ್ಟೂ ಸಿಂಪಲ್ಲಾಗಿರಲಿ.
- ಉಲ್ಲನ್‌ನಾದ್ದಲ್ಲಿ ಕಿವಿಯನ್ನು ಬೆಚ್ಚಗಿಡುತ್ತವೆ.
- ಮೊದಲು ಹೇರ್‌ಸ್ಟೈಲ್ ಮಾಡಿ, ನಂತರ ಧರಿಸಿ.
- ಗಾಳಿಗೆ ಕಿವಿ ಮುಚ್ಚುವಂತಹ ವಿನ್ಯಾಸದವನ್ನು ಖರೀದಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)