Friday, 18th October 2024

World Anesthesia Day: ಇಂದು ವಿಶ್ವ ಅನಸ್ತೇಶಿಯ ದಿನ; ಅರಿವಳಿಕೆಯ ಬಗೆಗೆ ನಮಗೆಷ್ಟು ಅರಿವಿದೆ?

ಇಂದು ವಿಶ್ವ ಅರಿವಳಿಕೆ ದಿನ. ಶತಮಾನಗಳ ಹಿಂದೆ, ಮೊದಲ ಬಾರಿಗೆ ಅರಿವಳಿಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದ ನೆನಪಿಗೆ ಈ ದಿನ ಇಂದಿಗೂ ಮಹತ್ವ ಪಡೆದಿದೆ. ನೋವು ಮುಕ್ತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಹೊಸ ಸಾಧ್ಯತೆಯೊಂದನ್ನು ಅಂದು ಮಾನವಕುಲಕ್ಕೆ ಲಭ್ಯವಾಯಿತು. 1846ರ ಅಕ್ಟೋಬರ್‌ 16ರಂದು ಡೈಥೈಲ್‌ ಈಥರ್‌ ಎಂಬ ಅರಿವಳಿಕೆಯನ್ನು ವಿಲಿಯಂ ಮಾರ್ಟನ್‌ ಎಂಬ ತಜ್ಞ ಯಶಸ್ವಿಯಾಗಿ ಪ್ರಯೋಗಿಸಿ ತೋರಿಸಿದ್ದ. ಇದನ್ನು ಅಮೆರಿಕದ ಮಸಾಚುಸೆಟ್ಸ್‌ ಜೆನೆರಲ್‌ ಹಾಸ್ಪಿಟಲ್‌ನಲ್ಲಿ ಪ್ರಯೋಗಿಸಿ, ನೋವುರಹಿತವಾದ ಶಸ್ತ್ರಚಿಕಿತ್ಸೆಗೆ ನಾಂದಿ ಹಾಡಲಾಗಿತ್ತು. ಈ ಬಾರಿಯ ಅರಿವಳಿಕೆ ದಿನದ (World Anesthesia Day) ಘೋಷವಾಕ್ಯ: “ಅರಿವಳಿಕೆ ಮತ್ತು ಕ್ಯಾನ್ಸರ್‌ ಆರೈಕೆ”

ಅರಿವಳಿಕೆ ಎಂದರೆ?

ಅರಿವಳಿಕೆ ಅಥವಾ ಅನಸ್ತೇಶಿಯ ಎಂದರೆ ಎಚ್ಚರ ತಪ್ಪಿಸುವುದು ಎಂಬುದು ಸಾಮಾನ್ಯವಾದ ತಿಳುವಳಿಕೆ. ಆದರೆ ಇದು ಅರ್ಧ ಸತ್ಯ. ನೋವು ನಿವಾರಿಸುವ ಅಥವಾ ನೋವು ತಿಳಿಯದಂತೆ ಮಾಡುವ ಹಲವಾರು ಔಷಧಿಗಳು ಈ ಸಾಲಿಗೆ ಸೇರುತ್ತವೆ. ಇವುಗಳನ್ನು ಅನಸ್ಥೆಟಿಕ್ಸ್‌ ಎನ್ನಲಾಗುತ್ತದೆ. ನೋವಿನ ಅರಿವಾಗದಂತೆ ಮಾಡುವ ಔಷಧಿಗಳನ್ನು ನಾವು ಅರಿವಳಿಕೆ ಮದ್ದುಗಳು ಎಂದು ಕರೆಯುತ್ತೇವೆ. ಇವುಗಳನ್ನು ಚುಚ್ಚಿ, ಮೂಗಿನ ಉಸಿರಾಟದ ಮೂಲಕ ಅಥವಾ ಹೇಗೇ ನೀಡಿದರೂ, ಅದಕ್ಕೆ ಅರಿವಳಿಕೆಯ ಬಗ್ಗೆ ಪೂರ್ಣ ಮಾಹಿತಿ ಹೊಂದಿದ ತಜ್ಞರು ಬೇಕು.

ಈ ಸುದ್ದಿಯನ್ನೂ ಓದಿ | World Food Day 2024: ಇಂದು ವಿಶ್ವ ಆಹಾರ ದಿನ; ಸುಸ್ಥಿರ ಪದ್ಧತಿಗಳಿಂದ ಮಾತ್ರವೇ ನಮಗೆ ಉಳಿವು!

ವಿಧಗಳಿವೆ

ಅರಿವಳಿಕೆ ಎನ್ನುತ್ತಿದ್ದಂತೆ ಎಲ್ಲವೂ ಒಂದೇ ಅಲ್ಲ ಎನ್ನುವುದೀಗ ನಮಗೆ ಅರ್ಥವಾಗಿದೆ. ಇವುಗಳಲ್ಲೂ ಹಲವು ರೀತಿಯಿವೆ. ಯಾವ ಚಿಕಿತ್ಸೆ ಎನ್ನುವುದರ ಆಧಾರ ಮೇಲೆ ಯಾವ ರೀತಿಯ ಅರಿವಳಿಕೆ ಮದ್ದು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ಅದರಲ್ಲಿರುವ ವಿಧಗಳತ್ತ ಕಣ್ಣು ಹಾಯಿಸಿದರೆ-

ಲೋಕಲ್‌ ಅನಸ್ತೇಶಿಯ

ಇದು ದೇಹದ ಸಣ್ಣ ಭಾಗವನ್ನು ಮಾತ್ರವೇ ಮರಗಟ್ಟಿಸಬಲ್ಲದು. ಉದಾ, ಹಲ್ಲು ಕೀಳುವಾಗ, ಕಣ್ಣಿಗೆ ಕ್ಯಾಟರ್ಯಾಕ್ಟ್‌ ಶಸ್ತ್ರಚಿಕಿತ್ಸೆ ಮಾಡುವಾಗ- ಇಂಥ ಸಂದರ್ಭಗಳಲ್ಲಿ ಚಿಕಿತ್ಸೆ ತೆಗೆದುಕೊಳ್ಳುವ ರೋಗಿ ಸಂಪೂರ್ಣ ಎಚ್ಚರವಾಗಿಯೇ ಇದ್ದರೂ, ಚಕಿತ್ಸಾಕ್ರಿಯೆಯ ನೋವಿನ ಅನುಭವ ಮಾತ್ರ ತಿಳಿಯುವುದಿಲ್ಲ.

ಸೆಡೇಶನ್

ಇದೀಗ ಒಂದೇ ಭಾಗವನ್ನು ಮರಗಟ್ಟಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಮದ್ದನ್ನು ನೀಡುವ ಕ್ರಮ. ರೋಗಿ ಅರೆಎಚ್ಚರದ ಸ್ಥಿತಿಯಲ್ಲಿ ಇರುತ್ತಾನೆ. ವೈದ್ಯರು ನಡೆಸುತ್ತಿರುವ ಕ್ರಿಯೆಗಳ ಬಗ್ಗೆ ನೆನಪು, ಅರಿವು ಆತನಿಗೆ ನಂತರ ಇರುವುದಿಲ್ಲ ಹಾಗೂ ನೋವಿನ ಅನುಭವವೂ ಆಗುವುದಿಲ್ಲ. ಉದಾ, ಕೊಲೊನೊಸ್ಕೊಪಿಗಳಂಥ ಚಿಕಿತ್ಸಾ ಕ್ರಿಯೆಗಳಲ್ಲಿ ಈ ರೀತಿಯ ಅರಿವಳಿಕೆಯನ್ನು ಪ್ರಯೋಗಿಸಲಾಗುತ್ತದೆ. ಇದರಲ್ಲೂ ಬೇರೆ ಬೇರೆ ಮಟ್ಟದಲ್ಲಿ ಅರಿವಳಿಕೆ ಪ್ರಯೋಗಿಸಲಾಗುತ್ತದೆ.

ರೀಜನಲ್‌ ಅಸ್ತೇಶಿಯ

ಇದು ದೇಹದ ಒಂದು ದೊಡ್ಡ ಭಾಗವನ್ನು ನಿರ್ದಿಷ್ಟವಾಗಿ ಮರಗಟ್ಟಿಸುವ ಮದ್ದು. ಒಂದಿಡೀ ಕೈ ಅಥವಾ ಕಾಲು, ಕಟಿಯ ಕೆಳಗಿನ ಭಾಗ… ಹೀಗೆ ನಿರ್ದಿಷ್ಟ ಭಾಗದ ನೋವು ತಿಳಿಯದಂತೆ ಮಾಡುವಾಗ ಪ್ರಯೋಗಿಸಲಾಗುತ್ತದೆ. ಈ ರೀತಿಯ ಅರಿವಳಿಕೆಯಲ್ಲಿ ರೋಗಿ ಸಂಪೂರ್ಣ ಎಚ್ಚರವಾಗಿರುವುದಕ್ಕೂ ಸಾಧ್ಯವಿದೆ. ಪ್ರಸೂತಿಯ ಸಂದರ್ಭದಲ್ಲಿ ನೀಡಲಾಗುವ ಎಪಿಡ್ಯುರಲ್‌ ಸಹ ಇದೇ ರೀತಿಯ ಅರಿವಳಿಕೆ. ಆಗ ಗರ್ಭಿಣಿ ಎಚ್ಚರವಾಗಿಯೇ ಇರುತ್ತಾಳೆ.

ಜನರಲ್‌ ಅನಸ್ತೇಶಿಯ

ಈ ರೀತಿಯ ಅರಿವಳಿಕೆಯಲ್ಲಿ ರೋಗಿ ಪ್ರಜ್ಞೆಯನ್ನು ಸಂಪೂರ್ಣ ತಪ್ಪಿಸಲಾಗುತ್ತದೆ. ಯಾವುದೇ ರೀತಿಯ ನೋವು, ಚಿಕಿತ್ಸಾಕ್ರಮಗಳು ರೋಗಿಯ ಅರಿವಿನಿಂದ ಸಂಪೂರ್ಣ ದೂರವಾಗಿರುತ್ತವೆ. ಮಂಡಿ ಕೀಲು ಜೋಡಣೆ, ಹೃದಯ ಶಸ್ತ್ರಚಿಕಿತ್ಸೆಗಳು ಮುಂತಾದ ಯಾವುದೇ ಗಂಭೀರ ಶಸ್ತ್ರ ಚಿಕಿತ್ಸೆಗಳಿಗೆ ಇದೇ ಅರಿವಳಿಕೆಯನ್ನು ಪ್ರಯೋಗಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ರೋಗಿಯನ್ನು ಎಚ್ಚರಗೊಳಿಸುವ ಕ್ರಮವೂ ಉಳಿದೆಲ್ಲದಕ್ಕಿಂತ ಭಿನ್ನವೇ ಆಗಿರುತ್ತದೆ.

ಈ ಸುದ್ದಿಯನ್ನೂ ಓದಿ | Reliance Jio: ಜಿಯೊ ಕ್ಲೌಡ್ ಪಿಸಿ! ಮನೆಯ ಟಿವಿ ಕೇವಲ 100 ರೂ.ಯಲ್ಲಿ ಇನ್ನು ಕಂಪ್ಯೂಟರ್!

ತಿನ್ನಬಾರದೇ?

ಅರಿವಳಿಕೆ ನೀಡುವ ಮೊದಲು ಹೊಟ್ಟೆಗೆ ಏನನ್ನೂ ತಿನ್ನಬಾರದು ಎನ್ನಲಾಗುತ್ತದೆ, ನಿಜವೇ? ಘನ ಆಹಾರಗಳು ಖಂಡಿತ ಬೇಡ. ಆದರೆ ʻಕ್ಲಿಯರ್‌ ಲಿಕ್ವಿಡ್ಸ್‌ʼ ಎನ್ನಲಾಗುವ ಪೇಯಗಳನ್ನು ಸೇವಿಸಬಹುದು. ದ್ರವವನ್ನು ಪಾತ್ರೆಯಲ್ಲಿರಿಸಿದಾಗ ಅದರ ತಳ ಗೋಚರಿಸಬೇಕು ಅಥವಾ ಗಾಜಿನ ಗ್ಲಾಸಿಗೆ ಹಾಕಿದರೆ, ಮತ್ತೊಂದು ಕಡೆಯಲ್ಲಿ ಅಸ್ಪಷ್ಟವಾಗಿಯಾದರೂ ಕಾಣಿಸಬೇಕು- ಇಂಥವನ್ನು ಕ್ಲಿಯರ್‌ ಲಿಕ್ವಿಡ್ಸ್‌ ಎನ್ನಲಾಗುತ್ತದೆ. ನೀರು, ಎಳನೀರು, ಪಲ್ಪ್‌ ಇಲ್ಲದಂಥ ಶುದ್ಧ ಹಣ್ಣಿನ ರಸ, ಗಂಜಿಯ ತಿಳಿ- ಇಂಥವೆಲ್ಲ, ಅರಿವಳಿಕೆ ನೋಡುವ 2 ತಾಸಿನ ಮುನ್ನ, ವೈದ್ಯರ ಸಲಹೆಯ ಮೇರೆಗೆ ಸೇವಿಸಬಹುದು.