Wednesday, 23rd October 2024

World Mental Health Day 2024: ವಿಶ್ವ ಮಾನಸಿಕ ಆರೋಗ್ಯ ದಿನ; ಆಫೀಸ್‌‌ಗಳು ಪ್ರೆಷರ್ ಕುಕ್ಕರ್‌‌ಗಳಾಗದಿರಲಿ!

World Mental Health Day 2024

ಅತ್ಯಂತ ಅಗತ್ಯವಾದ ಕೆಲವು ವಿಷಯಗಳನ್ನು ಎಷ್ಟೋ ಬಾರಿ ಅತ್ಯಂತ ತೀವ್ರವಾಗಿ ನಿರ್ಲಕ್ಷಿಸುತ್ತೇವೆ. ಅಂಥ ವಿಷಯಗಳ ಪೈಕಿ ಒಂದು ನಮ್ಮ ಮಾನಸಿಕ ಆರೋಗ್ಯ. ಅತ್ಯಂತ ಅಗತ್ಯವಾಗಿ ನಾವು ಕಾಳಜಿ ಮಾಡಲೇಬೇಕಾದ ವಿಷಯ ಇದಾದರೂ ಅತಿ ಕಡಿಮೆ ಜಾಗ್ರತೆ ಮಾಡುತ್ತೇವೆ ನಾವು. ಇದಕ್ಕಿಂತ ಬೇಸರದ ವಿಷಯವೆಂದರೆ ನಮ್ಮ ಈ ನಿರ್ಲಕ್ಷ್ಯದ ಬಗ್ಗೆ ನಮಗೆ ತಿಳುವಳಿಕೆಯೇ ಇಲ್ಲದಿರುವುದು. ಹಾಗಾಗಿ ಮಾನಸಿಕ ಆರೋಗ್ಯದ ಕಾಳಜಿಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎನ್ನುವ ಅರಿವು ಮೂಡಿಸುವ ಉದ್ದೇಶದಿಂದ, ಅಕ್ಟೋಬರ್‌ ತಿಂಗಳ 10ನೇ ದಿನವನ್ನು (ಅಕ್ಟೋಬರ್‌ 10) ವಿಶ್ವ ಮಾನಸಿಕ ಆರೋಗ್ಯ ದಿನವೆಂದು (World Mental Health Day 2024) ಆಚರಿಸಲಾಗುತ್ತದೆ.

ಈ ಬಾರಿಯ ಘೋಷವಾಕ್ಯ: ಉದ್ಯೋಗದ ಸ್ಥಳದಲ್ಲಿ ಮಾನಸಿಕ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸುವ ಕಾಲವಿದು.

ಭಾವನೆಗಳು ನಮ್ಮ ಬದುಕಿನ ಜೀವನಾಡಿ. ಅದಿಲ್ಲದೆ ಕೊರಡಿನಂತೆ ಬದುಕುವುದು ನಮ್ಮಿಂದಾಗದು. ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಕ್ರಿಯೆಗಳು, ನಮ್ಮ ಸಂವಹನ ಮುಂತಾದ ಎಲ್ಲದರ ಮೇಲೂ ನಮ್ಮ ಭಾವನೆಗಳು ಪರಿಣಾಮ ಬೀರುತ್ತವೆ. ಹಾಗಾಗಿ ಭಾವನೆಗಳನ್ನು ಧನಾತ್ಮಕವಾಗಿ ಬಳಸಿಕೊಂಡು, ಬದುಕನ್ನು ಚಂದಗಾಣಿಸಿಕೊಂಡವರೂ ಇದ್ದಾರೆ. ಭಾವನೆಗಳನ್ನು ಒಳಗೇ ಹುದುಗಿಸಿಕೊಂಡು ದೇಹ ಮತ್ತು ಮನಸ್ಸಿನ ಆರೋಗ್ಯ ಕಳೆದುಕೊಂಡವರೂ ಇದ್ದಾರೆ. ಅದರಲ್ಲೂ ಉದ್ಯೋಗದ ಸ್ಥಳಗಳಲ್ಲಿ ಉಂಟಾಗುವ ಒತ್ತಡಗಳು ಆಡುವುದಕ್ಕೂ ಕಷ್ಟ, ಅನುಭವಿಸುವುದಕ್ಕೂ ಕಷ್ಟ ಎನ್ನುವಂಥವು. ಹಾಗಾಗಿ ಉದ್ಯೋಗಿಗಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ಕೊಡಿ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಈ ಸುದ್ದಿಯನ್ನೂ ಓದಿ | Free Training: ಯುವ ಜನರೇ ಗಮನಿಸಿ; ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಪ್ರೆಷರ್‌ ಕುಕ್ಕರ್‌ ಆಫೀಸ್‌ಗಳು

ಉದ್ಯೋಗ ಸ್ಥಳಗಳ ಅಪರಿಮಿತ ಒತ್ತಡದಿಂದಾಗಿ ಜೀವ ಕಳೆದುಕೊಂಡವರ ಕಥೆಗಳು ಇತ್ತೀಚೆಗೆ ಕೇಳಿ ಬರುತ್ತಿವೆ. ಈಗಿರುವ ಕೆಲಸದ ಅವಧಿ ಸಾಲದೆಂಬಂತೆ, ಇನ್ನೂ ಹೆಚ್ಚಿನ ಅವಧಿ ಕೆಲಸ ಮಾಡಿಸುವ ಕೆಲವು ಖ್ಯಾತನಾಮರ ಪ್ರಸ್ತಾಪಗಳು ಉದ್ಯೋಗಿಗಳಲ್ಲಿ ಆತಂಕ ಮತ್ತು ಅಸಮಾಧಾನದ ಅಲೆಗಳನ್ನು ಸೃಷ್ಟಿಸುತ್ತಿವೆ. ಅದರಲ್ಲೂ ಕೋವಿಡ್‌ ನಂತರದ ಬದುಕಿನಲ್ಲಿ ಆಗಿರುವ ಬದಲಾವಣೆಯಿಂದಾಗಿ ಉದ್ಯೋಗ ಸ್ಥಳಗಳು ಪ್ರೆಷರ್‌ ಕುಕ್ಕರ್‌ನಂತೆ ಭಾಸವಾಗುತ್ತಿವೆ. ಆರ್ಥಿಕ ಒತ್ತಡಗಳು, ಸಾಮಾಜಿಕ ಬದಲಾವಣೆಗಳು, ವೈಯಕ್ತಿಯ ತೊಂದರೆಗಳು ಎಲ್ಲವೂ ಸೇರಿ ಉದ್ಯೋಗಿಗಳು ಒದ್ದಾಡುವಂತಾಗಿರುವುದು ಜಾಗತಿಕ ವಿದ್ಯಮಾನದಂತಾಗಿದೆ. ಹಾಗಾಗಿ ಉದ್ಯೋಗ ನಿರ್ವಹಣೆ, ಸೃಜನಶೀಲತೆ, ಜೀವನದ ಸ್ವಾಸ್ಥ್ಯ ಸೇರಿದಂತೆ ಬದುಕಿನ ಪ್ರತಿಯೊಂದು ಅಂಗವೂ ಹೆಚ್ಚಿನ ನಿರ್ವಹಣೆಯನ್ನು ಬೇಡುತ್ತಿದೆ.

2024ರ ಸಾಲಿನಲ್ಲೇ ನಡೆಸಲಾದ ಸಮೀಕ್ಷೆಯ ಪ್ರಕಾರ, ಬರ್ನ್‌ಔಟ್‌, ಒತ್ತಡ, ಆತಂಕ ಮತ್ತು ಖಿನ್ನತೆಯಂಥ ತೊಂದರೆಗಳು ಉದ್ಯೋಗ ಸ್ಥಳಗಳಲ್ಲಿ ಸಾಂಕ್ರಾಮಿಕದಂತೆ ಹಬ್ಬುತ್ತಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ. 44 ರಷ್ಟು ಉದ್ಯೋಗಿಗಳು ಉದ್ಯೋಗ ಸ್ಥಳಗಳಲ್ಲಿ ಬೇಸತ್ತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಶೇ. 45 ರಷ್ಟು ಮಂದಿ ಭಾವನಾತ್ಮಕವಾಗಿ ಸೊರಗಿದ ಅನುಭವ ಆಗುವುದನ್ನು ಹೇಳಿಕೊಂಡಿದ್ದಾರೆ. ಶೇ. 51ರಷ್ಟು ಜನ ತಮ್ಮನ್ನು ಅತಿಯಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಖಿನ್ನತೆ ಮತ್ತು ಒತ್ತಡದಿಂದಾಗಿ ಜಾಗತಿಕವಾಗಿ 12 ಶತಕೋಟಿ ಕೆಲಸದ ದಿನಗಳು ಪ್ರತಿವರ್ಷ ನಷ್ಟವಾಗುತ್ತಿವೆ. ಇದರಿಂದಾಗಿ ಒಂದು ಟ್ರಿಲಿಯನ್‌ ಡಾಲರ್‌ ನಷ್ಟ ಉಂಟಾಗುತ್ತಿದೆ. ಹಾಗಾಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಮೇಲೆ ಹೇರುವ ಅಧಿಕ ಒತ್ತಡ ಎಂಬುದು, ಎಲ್ಲ ರೀತಿಯಲ್ಲೂ ಹೆಚ್ಚಿನ ಅರ್ಥಿಕ ಹೊರೆಯಾಗಿ, ನಷ್ಟವಾಗಿ ಪರಿಣಮಿಸುತ್ತಿದೆ ಎನ್ನುತ್ತವೆ ಹಲವು ರೀತಿಯ ಅಧ್ಯಯನಗಳು.

ಕಂಪನಿಗಳು ಏನು ಮಾಡಬಹುದು?

ಬಹಳಷ್ಟು ರೀತಿಯಲ್ಲಿ ಈ ಪರಿಸ್ಥಿತಿಯ ಸುಧಾರಣೆಗೆ ಸಂಸ್ಥೆಗಳು ಯತ್ನಿಸಬಹುದು. ಸಾಮಾನ್ಯವಾಗಿ ನಡೆಸಲಾಗುವ ವೆಲ್‌ನೆಸ್‌ ಸೆಮಿನಾರುಗಳು, ವರ್ಕ್‌ಶಾಪುಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ಆಯಾ ಕಂಪನಿಗಳೇ ಪರಿಶೀಲಿಸಬೇಕು. ಇಂತಹ ಮೇಲ್ನೋಟದ ಕ್ರಮಗಳ ಹೊರತಾಗಿ, ಉದ್ಯೋಗಿಗಳೊಂದಿಗೆ ನೇರವಾಗಿ ಸಂವಹನ ನಡೆಸುವುದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಎಂಥಾ ಔಷಧಿಗಿಂತಲೂ ನೇರ ಸಂವಹನ ಹೆಚ್ಚು ಪರಿಣಾಮಕಾರಿ.

ಈ ಸುದ್ದಿಯನ್ನೂ ಓದಿ | Navaratri Bangles Trend 2024: ನವರಾತ್ರಿ ಸಂಭ್ರಮಕ್ಕೆ ಜತೆಯಾದ 5 ಡಿಸೈನ್‌‌ನ ಕಲರ್‌ಫುಲ್‌ ಬ್ಯಾಂಗಲ್ಸ್

ವಿರಾಮ, ಬಿಡುವು

ಇವೆಲ್ಲ ದಣಿದ ದೇಹಕ್ಕೆ ಅಗತ್ಯವಾದ ಪ್ರಾಣವಾಯುವನ್ನು ಒದಗಿಸುತ್ತವೆ. ಇದು ಕೇವಲ ವಾರಾಂತ್ಯದ ಮೋಜಿನ ವಿರಾಮದ ಬಗೆಗಿನ ಮಾತಲ್ಲ. ನಿತ್ಯವೂ ಕೆಲಸದ ನಡುವೆ ನೀಡುವ ಕಿರುವಿರಾಮಗಳು ಹೆಚ್ಚು ಪ್ರಯೋಜನಕಾರಿ. ಇದಲ್ಲದೆ, ಉದ್ಯೋಗಿಗಳಿಗೆ ಸೂಕ್ತವಾಗುವಂಥ ಕೆಲಸದ ಅವಧಿಗಳ ಬಗ್ಗೆ ಚಿಂತಿಸುವುದು ಅಗತ್ಯ. ಇದಕ್ಕಾಗಿ ಫ್ಲೆಕ್ಸ್‌-ವರ್ಕ್‌ ಅಳವಡಿಸಿಕೊಳ್ಳುವ ಬಗ್ಗೆ ಸಂಸ್ಥೆಗಳು ಆಲೋಚಿಸಬಹುದು. ಮನೆಯಿಂದ ಕೆಲಸ ಮಾಡುವುದಕ್ಕೆ ಆಯ್ಕೆ ನೀಡುವುದು ಸಹ ಜಾಗತಿಕವಾಗಿ ಜನಪ್ರಿಯಗೊಂಡಿದೆ.