Thursday, 21st November 2024

Bantwala Jayarama Acharya: ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ

bantwala jayarma acharya

ಬೆಂಗಳೂರು: ಯಕ್ಷಗಾನದ ಜನಪ್ರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) (Bantwala Jayarama Acharya) ಅವರು ಇಂದು ಮುಂಜಾನೆ (ಅ.21) ಹೃದಯಾಘಾತದಿಂದ (Heart Failure) ಮೃತಪಟ್ಟಿದ್ದಾರೆ. ಯಕ್ಷಗಾನ ಪ್ರದರ್ಶನವೊಂದಕ್ಕಾಗಿ ಕರಾವಳಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಅವರು ರಾಜಧಾನಿಯಲ್ಲಿ (Bangalore news) ಮೃತಪಟ್ಟರು.

ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದರಾದ ಆಚಾರ್ಯ, ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಅ. 21ರಿಂದ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾದಾಗ ಜತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬಂಟ್ವಾಳದಲ್ಲಿ 1957ರ ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ತಂದೆ ಬಂಟ್ವಾಳ ಗಣಪತಿ ಆಚಾರ್ಯ ಕೂಡ ಕಲಾವಿದರಾಗಿದ್ದು, ವಿವಿಧ ಮೇಳಗಳಲ್ಲಿ ಹಾಸ್ಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಹಾಗೂ ಇತರ ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು.

ಬಂಟ್ವಾಳ ಜಯರಾಮ ಆಚಾರ್ಯರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್ ಮೂಲಕ ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಬಂಟ್ವಾಳ ಬೈಪಾಸ್‌ನಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: Liam Payne Death: ‘ಒನ್ ಡೈರೆಕ್ಷನ್’ ಬ್ಯಾಂಡ್‌ ಗಾಯಕ ಲಿಯಾಮ್ ಪೇನ್ ಹೋಟೆಲ್ ಬಾಲ್ಕನಿಯಿಂದ ಬಿದ್ದು ಸಾವು