Friday, 20th September 2024

Yettinahole Project: ಎತ್ತಿನಹೊಳೆ ಪೈಪ್‌ಲೈನ್‌ ಒಂದೇ ವಾರದಲ್ಲಿ ಬಿರುಕು, ನೀರು ಸೋರಿ ಕೃಷಿಗೆ ಹಾನಿ

Yettinahole Project

ಸಕಲೇಶಪುರ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ (Yettinahole Project) ಇತ್ತೀಚೆಗೆ ಆರಂಭಗೊಂಡಿದೆ. ಆದರೆ ಹಾಸನ (Hassan news) ಜಿಲ್ಲೆಯ ಸಕಲೇಶಪುರ ತಾಲೂಕಿನ ಜನತೆಗೆ ನಿದ್ದೆಯಿಲ್ಲದ ರಾತ್ರಿಗಳು ಎದುರಾಗಿವೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಯೋಜನೆಯ ಪೈಪ್‌ಲೈನ್ (Yettinahole Project Pipeline) ಹಾನಿಗೊಳಗಾಗಿದ್ದು, ಕೃಷಿ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆಗಳಿಗೆ ಹಾನಿಯುಂಟಾಗಿದೆ.

ಸಕಲೇಶಪುರದಲ್ಲಿ ಕಳೆದೆರಡು ದಿನಗಳಲ್ಲಿ ಅಪಾರ ಪ್ರಮಾಣದ ನೀರು ಎತ್ತಿನಹೊಳೆ ಪೈಪ್‌ಲೈನ್‌ನಿಂದ ಸೋರಿಕೆಯಾಗಿ ಕೃಷಿ ಭೂಮಿಗಳಿಗೆ ನುಗ್ಗಿದೆ, ಬೆಳೆದ ಬೆಳೆಗಳಿಗೆ ಹಾನಿಯಾಗಿದೆ. ಕೆಲವೆಡೆ ರಸ್ತೆಗಳೂ ಕೊಚ್ಚಿ ಹೋಗಿವೆ. ಕಾಫಿ ತೋಟಗಳು ಹಾಗೂ ತಗ್ಗು ಪ್ರದೇಶದ ಜಮೀನುಗಳು ನೀರಿನಿಂದ ಮುಳುಗಡೆಯಾಗಿವೆ. ಜಂಬರಾಡಿ ಹಾಗೂ ಅಕ್ಕಪಕ್ಕದ ಕಾಫಿ ಎಸ್ಟೇಟ್‌ಗಳಲ್ಲಿನ ಮನೆಗಳಿಗೂ ನೀರು ನುಗ್ಗಿದೆ.

ಈ ಹಿಂದೆ ಯೋಜನೆ ಉದ್ಘಾಟನೆಗೂ ಮುನ್ನವೇ ಪೈಪ್‌ಲೈನ್‌ ಹಾಳಾಗಿತ್ತು. ಕಳಪೆ ಕಾಮಗಾರಿಯಿಂದ ಪೈಪ್‌ಲೈನ್‌ ಪದೇ ಪದೇ ಹಾಳಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಹೆಬ್ಬನಹಳ್ಳಿ ಬಳಿಯ ಗುರುತ್ವಾಕರ್ಷಣೆಯ ಟ್ಯಾಂಕ್‌ನಿಂದ ನಿರಂತರವಾಗಿ ನೀರು ಪಂಪ್‌ ಮಾಡಿದ್ದರಿಂದ ಪೈಪ್‌ಲೈನ್‌ ಹಾಳಾಗಿದೆ ಎಂದು ಮೂಲಗಳು ತಿಳಿಸಿವೆ.

ಸೆ. 6ರಂದು ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರೆತ್ತುವ ಏತ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ನಂತರ 5 ಚೆಕ್‌ಡ್ಯಾಂಗಳಿಂದ ನಿರಂತರವಾಗಿ ನೀರನ್ನು ಹೆಬ್ಬನಹಳ್ಳಿ ಚೆಕ್‌ಡ್ಯಾಂಗೆ ಹರಿಸಲಾಗುತ್ತಿದೆ.

ಸತತವಾಗಿ ಹರಿಯುತ್ತಿರುವ ನೀರಿನ ಒತ್ತಡದಿಂದ ಪೈಪ್‌ಲೈನ್‌ ಒಡೆದಿದ್ದು, ತಗ್ಗು ಪ್ರದೇಶದ ಮನೆ, ಜಮೀನು ಹಾಗೂ ಎಸ್ಟೇಟ್‌ಗೆ ನೀರು ನುಗ್ಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಈ ನಡುವೆ ಕಳಪೆ ಕಾಮಗಾರಿಯಿಂದ ಪೈಪ್‌ಲೈನ್ ಒಡೆದಿದೆ’ ಎಂದು ಸ್ಥಳೀಯರು ಆರೋಪಿಸಿದ್ದು, ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Yettinahole Project: ಎತ್ತಿನಹೊಳೆ ಯೋಜನೆ; 10 ವರ್ಷಗಳ ಭಗೀರಥ ಪ್ರಯತ್ನ ಸಾಕಾರ ಎಂದ ಡಿಕೆಶಿ