Friday, 22nd November 2024

Yettinahole Project: 2025ಕ್ಕೆ ತುಮಕೂರಿಗೆ ಎತ್ತಿನಹೊಳೆ ಯೋಜನೆ ನೀರು: ಡಿಕೆಶಿ

DK Shivakumar

ಬೆಂಗಳೂರು: ಮುಂದಿನ 2025ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ಯೋಜನೆ (Yettinahole Project) ನೀರನ್ನು ಹರಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ನೀರನ್ನು ಮೇಲಕ್ಕೆ ಎತ್ತಿ ಸಂಗ್ರಹ ಮಾಡಲಾಗಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. ಇದನ್ನು ನೀರಾವರಿ ಇಲಾಖೆಗೆ ವರ್ಗಾವಣೆ ಮಾಡಬೇಕು. ಈ ವಿಚಾರವಾಗಿ ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು. ಅರಣ್ಯ ಸಚಿವರ ಬಳಿಯೂ ಮಾತನಾಡಲಾಗವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಳೆ ಕಡಿಮೆಯಾಗುತ್ತಿರುವುದರಿಂದ ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ಕೊರಟಗೆರೆ ಬಳಿಯ ಬೈರಗೊಂಡ್ಲು ಜಲಾಶಯದ ನಿರ್ಮಾಣ ಯೋಜನೆಯನ್ನು ಬದಲಾವಣೆ ಮಾಡಿದ್ದರು. ಈ ಕಾರಣಕ್ಕೆ ಸ್ಥಳ ವೀಕ್ಷಣೆ ಮಾಡಬೇಕು. ಇಲ್ಲಿ ದೊಡ್ಡಬಳ್ಳಾಪುರದ ಒಂದಷ್ಟು ಭಾಗವೂ ಸೇರಿಕೊಂಡಿದೆ. ಪರಿಹಾರ ವಿಚಾರದಲ್ಲಿ ವ್ಯಾಜ್ಯಗಳಿವೆ. ಈ ಭಾಗದ ರೈತರು ಒಂದೇ ರೀತಿಯ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ. ದಸರಾ ನಂತರ ಎತ್ತಿನಹೊಳೆಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ ನಡೆಸಿ ತೊಂದರೆಗಳನ್ನು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ 527 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ (Yettinahole Project) ಮೊದಲ ಹಂತದ ಕಾಮಗಾರಿಗಳನ್ನು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸೆ.6ರಂದು ಉದ್ಘಾಟಿಸಿದ್ದರು.

ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ 8 ವಿಯರ್‌ಗಳನ್ನು ನಿರ್ಮಿಸಿ, ಈ ಹಳ್ಳಗಳ ಪ್ರವಾಹದಿಂದ ದೊರೆಯಬಹುದಾದ ನೀರಿನ ಪೈಕಿ 24.01 ಟಿ.ಎಂ.ಸಿ ನೀರನ್ನು ಮುಂಗಾರಿನ ಅವಧಿಯಲ್ಲಿ ಪೂರ್ವಾಭಿಮುಖವಾಗಿ ತಿರುಗಿಸಿ, ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ 527 ಕೆರೆಗಳನ್ನು ತುಂಬಿಸುವುದು ಎತ್ತಿನಹೊಳೆ ಯೋಜನೆಯ ಉದ್ದೇಶವಾಗಿದೆ.

ಈ ಸುದ್ದಿಯನ್ನೂ ಓದಿ | DK Shivakumar: ಎಚ್‌ಡಿಕೆ ರಾಜಕಾರಣ ಬಿಟ್ಟು ಉದ್ಯೋಗ ಸೃಷ್ಟಿ ಮಾಡಲಿ: ಡಿ.ಕೆ.ಶಿವಕುಮಾರ್ ಕಿಡಿ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿ 7 ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಈ ಯೋಜನೆಯನ್ನು 2027ರ ಮಾರ್ಚ್‌ 31ಕ್ಕೆ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.